ಜಾಗತಿಕವಾಗಿ ಯಶಸ್ವಿಯಾಗಲು ಸ್ಪರ್ಧಾತ್ಮಕ ಶಿಕ್ಷಣ ನೀಡುವುದು ರಾಷ್ಟ್ರೀಯ ಶಿಕ್ಷಣ ನೀತಿ ಉದ್ದೇಶವಾಗಿದೆ- ಪ್ರೊ. ವೈ. ಎಸ್. ಸಿದ್ದೇಗೌಡ

ವಿಜಯಪುರ: ಜಾಗತಿಕ ಮಟ್ಟದ ಸ್ಪರ್ಧಾತ್ಮಕ ವಾತಾವರಣದಲ್ಲಿ ಯಶಸ್ವಿಯಾಗುವಂಥ ಶಿಕ್ಷಣ ನೀಡುವುದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ವೈ. ಎಸ್. ಸಿದ್ದೇಗೌಡ ಹೇಳಿದ್ದಾರೆ. 

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ಕೃತಕ ಬುದ್ದಿಮತ್ತೆ ಬೋಧನಾ ಕೌಶಲಗಳು ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾನಾ ಕೌಶಲಯುತ ಶಿಕ್ಷಣ, ಜ್ಞಾನ ಸಂಪಾದಿಸುವ ಮೂಲಕ ಜೀವನದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಂತಹ ಸಾಮಥ್ರ್ಯ ಗಳಿಸುವಂತೆ ಮಾಡಬೇಕಿದೆ ಎಂದು ಹೇಳಿದರು.

ದೇಶದ ಜನಸಂಖ್ಯೆಯಲ್ಲಿ ಇವತ್ತು ಶೇ. 66ರಷ್ಟು ಯುವ ಜನಾಂಗವಿದೆ.  ಇಷ್ಟು ಬೃಹತ್ ಪ್ರಮಾಣದ ಮಾನವ ಸಂಪನ್ಮೂಲವನ್ನು ನಾನಾ ಕೌಶಲಯುಕ್ತ ಮತ್ತು ಜ್ಞಾನಾಧಾರಿತ ಶಿಕ್ಷಣದ ಮೂಲಕ ಸರ್ವಾಂಗೀಣ ಅಭಿವೃದ್ಧಿ ಮಾಡಿದರೆ ಜಗತ್ತಿನಲ್ಲಿ ಭಾರತದ ಸ್ಥಾನಮಾನ ಅತ್ಯಂತ ಎತ್ತರದ ಮಟ್ಟಕ್ಕೆ ಏರುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ಪ್ರತಿಪಾದಿಸಿದರು.

ಮಹಿಳಾ ವಿವಿಯಲ್ಲಿ ನಡೆದ ಕೃತಕ ಬುದ್ದಿಮತ್ತೆ ಬೋಧನಾ ಕೌಶಲಗಳು ಕುರಿತ ಕಾರ್ಯಾಗಾರದಲ್ಲಿ ಪ್ರೊ. ವೈ. ಎಸ್. ಸಿದ್ದೇಗೌಡ ಮಾತನಾಡಿದರು

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನಗೊಳಿಸಿದ ನಂತರದ ದಿನಗಳಲ್ಲಿ ಶಿಕ್ಷಕರ ಜವಾಬ್ದಾರಿ ಮತ್ತು ಪಾತ್ರಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.  ಈ ಬದಲಾವಣೆಗಳನ್ನು ಪ್ರತಿಯೊಬ್ಬ ಅಧ್ಯಾಪಕರು ಅಳವಡಿಸಿಕೊಳ್ಳಲು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಹಲವಾರು ಕಾರ್ಯಾಗಾರಗಳನ್ನು ಆಯೋಜಿಸುತ್ತ ಬಂದಿದೆ.  ಈ ಕಾರ್ಯಾಗಾರದ ಸಂಪೂರ್ಣ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಕಲಿಸುವ ಮೂಲಕ ಸಾಕಾರಗೊಳಿಸಬೇಕು ಎಂದು ಪ್ರೊ. ವೈ. ಎಸ್. ಸಿದ್ದೇಗೌಡ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಮಾತನಾಡಿ, ಪ್ರಸ್ತುತ ಕಾಲಘಟಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ಅವರನ್ನು ಜ್ಞಾನವಂತರನ್ನಾಗಿ ಮಾಡುವ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ ಎಂದು ತಿಳಿಸಿದರು.

ಇಂದು ನಾವು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೃತಕ ಬುದ್ದಿಮತ್ತೆಯನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ.  ಇದರ ಮುಖ್ಯ ಉದ್ದೇಶ ದಕ್ಷ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸುವುದಾಗಿದೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೃತಕ ಬುದ್ದಿಮತ್ತೆಯ ಎಲ್ಲಾ ಮಜಲುಗಳನ್ನು ಈ ಹಂತದಲ್ಲಿಯೇ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರೊ, ಬಿ. ಕೆ. ತುಳಸಿಮಾಲ ಹೇಳಿದರು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷಾಧಿಕಾರಿ ಪ್ರೊ. ಎಂ. ಜಯಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್. ಎಂ. ಚಂದ್ರಶೇಖರ ಮತ್ತು ನಾಸ್ಕಾಂನ ದಿನೇಶ ಮಾಣಿಗ್ರಾಹಿ, ಶರ್ಮಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.  ಕುಲಸಚಿವ ಪ್ರೊ. ಬಿ. ಎಸ್. ನಾವಿ ಸ್ವಾಗತಿಸಿದರು.  ಐಕ್ಯೂಎಸಿ ನಿರ್ದೇಶಕ ಪ್ರೊ. ಪಿ. ಜಿ. ತಡಸದ ಪ್ರಾಸ್ತಾವಿಕವಾಗಿ ಮಾತನಾಡಿದರು.  ಐಕ್ಯೂಎಸಿ ಉಪನಿರ್ದೇಶಕಿ ಡಾ. ರೇಣುಕಾ ಮೇಟಿ ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು.  ಎಫ್ ಡಿ ಪಿ ಸಂಯೋಜಕ ಪ್ರೊ. ಓಂಕಾರ ಕಾಕಡೆ ವಂದಿಸಿದರು.

Leave a Reply

ಹೊಸ ಪೋಸ್ಟ್‌