ವಿಜಯಪುರ: ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದಲ್ಲಿ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದ್ದು, ರೈತರಿಗೆ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬುಧವಾರ ಸಂಜೆ ಸುರಿದ ಗಾಳಿ, ಆಲಿಕಲ್ಲು ಸಹಿತ ಮಳೆಯಿಂದಾಗಿ ಗ್ರಾಮದಲ್ಲಿ ಬೆಳೆದ ದಾಳಿಂಬೆ, ದ್ರಾಕ್ಷಿ, ನಿಂಬೆ, ಮಾವಿನ ಗಿಡಗಳು ಧರೆಗುರುಳಿವೆ. ಅಲ್ಲದೇ, ರೈತರ ವಾಸಿಸುತ್ತಿದ್ದ ಪತ್ರಾಸ ಶೆಡ್ಡುಗಳು ಕೂಡ ಕಿತ್ತು ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ಫಸಲು ಹಾಳಾಗಿದೆ. ಸಾಕಾಣಿಕೆ ಮಾಡಲಾಗಿದ್ದ ಕೋಳಿ ಫಾರ್ಮ್ ಕೂಡ ಬಿರುಗಾಳಿಗೆ ಹಾನಿಗೀಡಾಗಿದ್ದು, ಕೋಳಿ ಮರಿಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಗ್ರಾಮದಲ್ಲಿ ಸುಮಾರು 20 ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಟ್ರಾನ್ಸಫಾರ್ಮರ್ ಗಳೂ ಕೂಡ ಹಾನಿಗೀಡಾಗಿವೆ. ದ್ರಾಕ್ಷಿ ಶೆಡ್ಡು ಕಿತ್ತು ಹೋಗಿವೆ. ಕಳೆದ 12 ಗಂಟೆಗಳಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಗ್ರಾಮಸ್ಖರು ಊಗ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕು. ವಿದ್ಯುತ್ ಸರಬರಾಜು ಮತ್ತು ಕುಡಿಯಲು ನೀರು ಒದಗಿಸಲು ತುರ್ತು ಕೆಲಸ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಶುಕ್ರವಾರ ಜಂಬಗಿ (ಆ) ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗುವುದು. ಅಲ್ಲದೇ, ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸಮಗ್ರ ಸಮೀಕ್ಷೆ ಕುರಿತು ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಂಬಗಿ(ಆ) ಗ್ರಾಮದ ರೈತರಾದ ಸಿದ್ದು ಗೇರಡೆ, ಸಿದ್ದು ತೋಟದ, ಮಹ್ಮದ ಪೈಗಂಬರ ಮುಲ್ಲಾ, ದುರ್ಗಪ್ಪ ರಾ. ಸಂಕದ, ಆನಂದ ಕುಮಾರ ಕೋಣಶಿರಸಗಿ, ಸಂಗಪ್ಪ ನಾಗಠಾಣ, ದಾವಲಸಾಬ ನದಾಫ, ದಾವಲಮಲೀಕ ಗೋಗಿ, ಶಂಕರ ಹುಲ್ಲೂರ, ಶರಣಪ್ಪ ಪೂಜಾರಿ, ಬಸವರಾಜ ಭಾವಿಮನಿ ಮುಂತಾದವರು ಉಪಸ್ಥಿತರಿದ್ದರು.