ಮುಂಗಾರು ಮಳೆ: ಮುಂಜಾಗ್ರತಾ ಕ್ರಮಗಳ ಪೂರ್ವಸಿದ್ಧತಾ ಸಭೆ- ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಲು ಡಾ. ದಾನಮ್ಮನವರ ಸೂಚನೆ

ವಿಜಯಪುರ:  ಅತಿವೃಷ್ಟಿ ಪರಿಸ್ಥಿತಿ ಹಾಗೂ ಮುಂಬರುವ ಮಳೆಗಾಲ ಸಂದರ್ಭದಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲ ಇಲಾಖಾ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಮಳೆಯ ಮುಂಜಾಗ್ರತಾ ಕ್ರಮಗಳ ಕುರಿತ ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಳೆಗಾಲದ ಸಂದರ್ಭದಲ್ಲಿ ವಿವಿಧ ಪ್ರದೇಶಗಳ ತಗ್ಗು ಪ್ರದೇಶಗಳಲ್ಲಿ ನೀರು ಹರಿಯದೇ ಒಂದೇ ಕಡೆ ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ಉಲ್ಭಣವಾಗುತ್ತದೆ. ಹೀಗಾಗಿ ಅಂತಹ ಪ್ರದೇಶಗಳನ್ನು ಗುರುತಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಚರಂಡಿ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಸಮಸ್ಯೆಯಿದ್ದಲ್ಲಿ ಕೂಡಲೇ ಪರಿಹರಿಸಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಶಾಲಾ ಕೊಠಡಿಗಳ ಪರಿಶೀಲನೆ ನಡೆಸಬೇಕು. ಶಾಲಾ ಕೊಠಡಿಗಳನ್ನು ನೀರು ಸೋರುವಿಕೆ, ಹಂಚಿನ ಸಮಸ್ಯೆ ಕುರಿತು ಪರಿಶೀಲನೆ ನಡೆಸಬೇಕು. ಯಾವುದೇ ಅನಾಹುತಗಳಿಗೆ ಅವಕಾಶ ನೀಡದೇ ಮುಂಜಾಗ್ರತಾ ಎಲ್ಲ ಕ್ರಮ ಕೈಗೊಳ್ಳಬೇಕು ಅದರಂತೆ ಎಲ್ಲ ಅಂಗನವಾಡಿ ಕೇಂದ್ರಗಳ ಕೊಠಡಿಗಳನ್ನು ಪರಿಶೀಲಿಸುವಂತೆ ಅವರು ಸೂಚನೆ ನೀಡಿದರು.

ಡಿಸಿ ಡಾ. ದಾನಮ್ಮನವರ ಅಧ್ಯಕ್ಷತೆಯಲ್ಲಿ ಮುಂಗಾರು ಮಳೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಯಿತು

ಮಳೆಗಾಲ ಸಂದರ್ಭದ ಈಗಿನಿಂದಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ವಿಪತ್ತುಗಳಿಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಬೇಕು. ಅಂತಹ ಪ್ರದೇಶಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಿ, ಜಾಗೃತಿ ಮೂಡಿಸುವ ಮೂಲಕ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಕೆಲವೊಂದು ಅನಾಹುತಗಳು ಸಂಭವಿಸುವ ಮೊದಲು ಈ ಕುರಿತು ಅಧಿಕಾರಿಗಳು ಅರಿತಿರಬೇಕು ಅಂದಾಗ ಮಾತ್ರ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಸಂಭವಿಸಬಹುದಾದ ಪ್ರತಿಯೊಂದು ಸ್ಥಳಗಳಿಗೆ ಭೇಟಿ ನೀಡಿ, ಸಮಸ್ಯೆಗಳ ಕುರಿತು ತಿಳಿದುಕೊಂಡು ಈ ಕುರಿತು ಗ್ರಾಮ ಪಂಚಾಯತ ಹಾಗೂ ತಾಲೂಕಾ ಮಟ್ಟದಲ್ಲಿ ಜಾಗೃತಿ, ಎಚ್ಚರಿಕೆ ಮೂಡಿಸಿದಾಗ ಸಮರ್ಥವಾಗಿ ಸಂಭವನೀಯ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗುವುದರಿಂದ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸದೇ ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಮಳೆ ಸಿಡಿಲುಗಳಿಂದ ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಾನಾ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸಿ ಜಾಗೃತಿ ಮೂಡಿಸಬೇಕು. ಅತಿವೃಷ್ಟಿಗಾಗಿ ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಟೋಲ್ ಫ್ರೀ 1077 (ದೂ: 08352-221261)ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಬೇಕು.  ಈ ಕುರಿತು ಜನರಿಗೆ ಮಾಹಿತಿ ಒದಗಿಸಬೇಕು. ವಿವಿಧ ಹಂತಗಳಲ್ಲಿ ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆಯನ್ನೊಳಗೊಂಡ ಮಾಹಿತಿ ಸಿದ್ಧಪಡಿಸಿ ಎಲ್ಲರನ್ನೊಳಗೊಂಡ ವ್ಯಾಟ್ಸಾಪ್ ಗ್ರೂಪ್ ರಚಿಸಿ ಸಾರ್ವಜನಿಕರ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಅವರು ಹೇಳಿದರು.

ಅಧಿಕಾರಿಗಳೇ ನೇರ ಹೊಣೆ

ತಾಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಚುರುಕಿನಿಂದ ಕಾರ್ಯ ನಿರ್ವಹಿಸಬೇಕು. ಒಂದೇ ಕಡೆ ಕೂರದೇ ತಮ್ಮ ವ್ಯಾಪ್ತಿಯ ಪ್ರತಿಯೊಂದು ಹಳ್ಳಿ, ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಎಲ್ಲೆಲ್ಲಿ ನೀರು ನಿಂತು ತೊಂದರೆಯಾಗಲಿದೆ ಎಂಬುದು ಕುರಿತು ಮುಂಚೆ ಅಂತಹ ಜಾಗಗಳನ್ನು ಗುರುತಿಸಿಕೊಂಡಿರಬೇಕು. ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಅನಾಹುತ ತಪ್ಪಿಸಲು ಪ್ರಯತ್ನಿಸಬೇಕು. ಮಳೆಗಾಲದ ಸಂದರ್ಭದಲ್ಲಿ ಗಿಡಗಳು ಬಿದ್ದು ಅನಾಹುತಗಳು ಸಂಭವಿಸುವ ಮೊದಲೇ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಳೆಗಾಲದ ಸಂದರ್ಭದಲ್ಲಿ, ಮಳೆ ಹಾಗೂ ಸಿಡಿಲಿನ ಅನಾಹುತಗಳ ಕುರಿತು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನರಿಗೆ ಮಾಹಿತಿ ಒದಗಿಸಬೇಕು. ಯಾವುದೇ ಅಧಿಕಾರಿಗಳು ಕಾರ್ಯದಲ್ಲಿ ನಿμÁ್ಕಳಜಿ ತೋರದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಅನಾಹುತಗಳು ಸಂಭವಿಸಿದ್ದಲ್ಲಿ ನೇರವಾಗಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಸ್ಥಾನದಲ್ಲಿರಲು ಸೂಚನೆ

ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲು ಪ್ರಯತ್ನಿಸಬೇಕು. ಆ ದೂರು ತಾಲೂಕಾ ಮಟ್ಟ, ಜಿಲ್ಲಾ ಮಟ್ಟಕ್ಕೆ ರಾಜ್ಯಮಟ್ಟಕ್ಕೆ ಹೋಗದಂತೆ ನೋಡಿಕೊಂಡು ಯಾವುದೇ ದೂರು ಬರದ ಹಾಗೆ ನೋಡಿಕೊಳ್ಳಬೇಕು. ಪ್ರವಾಹ ಪರಿಸ್ಥಿತಿಯ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಜಿಲ್ಲೆಯ ತಾಲೂಕುಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ತಾಲೂಕಾ ಮಟ್ಟದಲ್ಲಿ ತಹಶೀಲ್ದಾರರು ನದಿಯ ಪಕ್ಕದಲ್ಲಿರುವ 3-4 ಗ್ರಾಮ ಪಂಚಾಯತಿಗಳಿಗೆ ಒಬ್ಬರಂತೆ ತಾಲೂಕಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಿಕೊಳ್ಳಬೇಕು. ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕಾರ್ಯನಿರ್ವಹಿಸಬೇಕು.. ಅನಿವಾರ್ಯ ಸಂದರ್ಭದಲ್ಲಿ ರಜೆ ತೆರಳಬೇಕಾದರೆ ಅನುಮತಿ ಪಡೆಯದೇ ಯಾರೂ ಹೋಗುವಂತಿಲ್ಲ ಎಂದು ಅವರು ಹೇಳಿದರು.

ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ

ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಬಿತ್ತನೆ ಬೀಜ ಗೊಬ್ಬರ ವಿತರಣೆಯಾಗಬೇಕು.  ಗೊಬ್ಬರ ಮಾರಾಟ ಅಂಗಡಿಗಳಲ್ಲಿ ಕಡ್ಡಾಯವಾಗಿ ದಾಸ್ತಾನು, ದರ ವಿವರ ನಮೂದಿಸುವಂತೆ ಸೂಚನೆ ನೀಡಬೇಕು.  ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಬೆಲೆಗೆ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡುವಂತೆ ಸೂಚಿಸಬೇಕು. ರೈತರಿಂದ ಯಾವುದೇ ದೂರುಗಳು ಬಾರದ ಹಾಗೆ ನೋಡಿಕೊಳ್ಳುವಂತೆ ಅವರು ಕೃಷಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಕೃಷ್ಣಾ, ಭೀಮಾ ಹಾಗೂ ಡೋಣಿ ನದಿ ಪಾತ್ರದಲ್ಲಿ 54 ಗ್ರಾಮ ಪಂಚಾಯಿತಿಗಳ ಒಟ್ಟು 167 ಗ್ರಾಮಗಳು ಪ್ರವಾಹ ಪೀಡಿತವಾಗುವ ಸಾಧ್ಯತೆಗಳಿದ್ದು, ಗ್ರಾ. ಪಂ. ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ವಿಪತ್ತು ನಿರ್ವಹಣೆ ಸಮಿತಿ ರಚಿಸಲಾಗಿದ್ದು, ಈ ಸಮಿತಿಗಳು ಸಭೆ ನಡೆಸಿ, ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಉಪವಿಭಾಗ ಹಾಗೂ ತಾಲೂಕಾ ಮಟ್ಟದ ಸಭೆಗಳನ್ನು ಜರುಗಿಸಿ, ಋತುಮಾನದ ಪರಿಸ್ಥಿತಿಯ ಕುರಿತು ನಿಗಾ ಇಡಬೇಕು. ಜಿಲ್ಲೆಯಲ್ಲಿ ಪ್ರತಿದಿನ ಮಳೆಯ ವರದಿ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ಮಾನವ-ಜಾನುವಾರು ಜೀವ ಹಾನಿ, ಕೃಷಿ ಮತ್ತು ತೋಗಾರಿಕೆ ಬೆಳೆ ಹಾನಿ ಕುರಿತು ತಕ್ಷಣವೇ ಪ್ರತಿದಿನ ವರದಿ ಸಲ್ಲಿಸಬೇಕು.  ತಹಸೀಲ್ದಾರ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಪಡೆ, ನಾಗರಿಕ ರಕ್ಷಣಾ ದಳ ಸ್ವಯಂ ಸೇವಕರನ್ನು ಜಾಗೃತಿಗೊಳಿಸಿ ಸನ್ನದ್ಧಗೊಳಿಸಬೇಕು. ಲಭ್ಯವಿರುವ ರಕ್ಷಣಾ ಸಲಕರಣೆ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಈಜುಗಾರರ ವ್ಯವಸ್ಥೆ, ಹಾವು ಹಿಡಿಯುವರು, ಹಾವು ಕಡಿತ ಔಷದ ದಾಸ್ತಾನು ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡು ಅವಶ್ಯವಿದಾಗ ಸೇವೆಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ವಿಪತ್ತುಗಳಿಗೆ ತುತ್ತಾಗುವ ಹಳ್ಳಿಗಳಲ್ಲಿನ ಜನಸಂಖ್ಯೆಗೆ ಅನುಸಾರವಾಗಿ ನೀರು, ಶೌಚಾಲಯ ಸೇರಿದಂತೆ ಎಲ್ಲ ಸೌಲಭ್ಯವುಳ್ಳ ಕಾಳಜಿ ಕೇಂದ್ರಗಳನ್ನು ಗುರುತಿಸಬೇಕು.  ಸ್ಥಳೀಯವಾಗಿ ಲಭ್ಯವಿಲ್ಲದ ಸಂದರ್ಭದಲ್ಲಿ ಹತ್ತಿರದ ಪ್ರದೇಶಗಳಲ್ಲಿ ಗುರುತಿಸಬೇಕು. ಸ್ಥಳಾಂತರ ಮಾಡಬೇಕಾದ ಅನಿವಾರ್ಯತೆ ಇದ್ದಲ್ಲಿ ಪರ್ಯಾಯ ಮಾರ್ಗ ಗುರುತಿಸಿ ಸಾರಿಗೆ ವ್ಯವಸ್ಥೆ ಸಜ್ಜುಗೊಳಿಸಬೇಕು. ಕಾಳಜಿ ಕೇಂದ್ರದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ, ಸೇರಿದಂತೆ ಆಹಾರ, ದಿನಸಿ ಬೆಳೆಕಾಳುಗಳ ಸಮರ್ಪಕ ದಾಸ್ತಾನಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ ನೀಡಿದರು.

ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಎಸ್ಪಿ ಶಂಕರ ಮಾರಿಹಾಳ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ, ವಿಜಯಪುರ ಉಪ ವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌