ವಿಜಯಪುರ: ಪೋಲಿಸ್ ಇಲಾಖೆ ಜವಾಬ್ದಾರಿಯುತಗಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಸಾರ್ವಜನಿಕರೊಂದಿಗೆ ಸೌಜನ್ಯ ಮತ್ತು ಜನಸ್ನೇಹಿಯಾಗಿ ವರ್ತಿಸಬೇಕು ಎಸ್ಪಿ ಎಚ್. ಡಿ. ಆನಂದಕುಮಾರ ಸಿಬ್ಬಂದಿಗೆ ಕರೆ ನೀಡಿದ್ದಾರೆ.
ನಗರದ ಪೊಲೀಸ್ ಪರೇಡ್ ಗ್ರೌಂಡ್‍ನಲ್ಲಿ ನಡೆದ ಪೊಲೀಸ್ ಪರೇಡ್‍ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಮೇಲೆ ಪ್ರತಿಯೊಬ್ಬರೂ ಭರವಸೆ ಇಟ್ಟಿರುತ್ತಾರೆ. ಅವರ ಭರವಸೆ ಪೂರಕವಾಗಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಜನಸ್ನೇಹಿ ಪೋಲಿಸ್ ವಾತಾವರಣ ಕಲ್ಪಿಸಬೇಕು ಎಂದು ಹೇಳಿದರು.
ಪೋಲಿಸರು ಕರ್ತವ್ಯದ ಒತ್ತಡ ನಡುವೆಯೂ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಲು ಆದ್ಯತೆ ನೀಡಬೇಕು. ಪ್ರತಿದಿನ ಒಂದು ತಾಸು ಆರೋಗ್ಯ ಕಾಳಜಿ ಕುರಿತು ವ್ಯಾಯಾಮ, ಪರೇಡ್‍ಗೆ ಮೀಸಲಿಟ್ಟು ಸದೃಢತೆಯನ್ನು ಕಾಪಾಡಿಕೊಳ್ಳಬೇಕು ಎಂದು ಎಸ್ಪಿ ಕಿವಿಮಾತು ಹೇಳಿದರು.
ನಗರದಲ್ಲಿ ಉತ್ತಮ ರೀತಿಯಲ್ಲಿ ಟ್ರಾಫಿಕ್ ವ್ಯವಸ್ಥೆ ಕೈಗೊಳ್ಳಬೇಕು. ವಾಹನ ತಪಾಸಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು. ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಹನ ಸಂಚಾರ ದಟ್ಟಣೆಯಾಗಿರುವುದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡದೆ ಅಪಹಾಸ್ಯಕ್ಕೆ ಗುರಿಯಾಗದೇ ಪ್ರತಿಯೊಬ್ಬರೊಂದಿಗೆ ಸೌಜನ್ಯದಿಂದ ವರ್ತಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲಾದ್ಯಂತ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟು ಸಂಪೂರ್ಣ ಕಡಿವಾಣಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು, ರೌಡಿಸಂ ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಅವರು ಕರೆ ನೀಡಿದರು.
ಪೋಲಿಸ್ ಇಲಾಖೆ ಮೇಲೆ ವಿಶ್ವಾಸವಿಟ್ಟು ಠಾಣೆಗೆ ದೂರು ನೀಡಲು ಬರುವ ಜನರ ದೂರುಗಳನ್ನು ಶಾಂತ ರೀತಿಯಲ್ಲಿ ಆಲಿಸಿ, ಕಾನೂನಿನ್ವಯ ಅವರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಅವರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಪೋಲಿಸ್ ಎಂಬ ಅಹಂ ಭಾವನೆಯನ್ನು ತೊಡೆದು ಹಾಕಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ಯಾವುದೇ ಲೋಪಕ್ಕೆ ಆಸ್ಪದ ನೀಡದೆ ಉತ್ತಮ ನಡುವಳಿಕೆಯಿಂದ ಪೋಲಿಸ್ ಇಲಾಖೆಯ ಗೌರವವನ್ನು ಹೆಚ್ಚಿಸಬೇಕು ಎಂದು ಎಚ್. ಡಿ. ಆನಂದಕುಮಾರ ಹೇಳಿದರು.
ಈ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ ಹಿನ್ನಲೆಯಲ್ಲಿ ಎಲ್ಲ ಪೋಲಿಸ್ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.
ಎಎಸ್ಪಿ ಶಂಕರ ಮಾರಿಹಾಳ, ಡಿ ಆರ್ ಡಿವೈಎಸ್ಪಿ ಡಿ. ಎಸ್. ಧನಗರ ಸೇರಿದಂತೆ ನಾನಾ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.