ಡಾ. ಬಿ. ಆರ್. ಅಂಬೇಡ್ಕರ ಚಿಂತನೆಯ ಪಕ್ಷ ಬೇಕು- ಪ್ರಕಾಶ ಅಂಬೇಡ್ಕರ

ವಿಜಯಪುರ: ಇಂದಿನ ಜಾತಿ ಆಧಾರಿತ ಪ್ರಜಾಪ್ರಭುತ್ವ ನಿರ್ಮೂಲನೆ ಮಾಡಬೇಕು.  ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ಚಿಂತನೆಯ ಪಕ್ಷ ಈಗ ಬೇಕಾಗಿದೆ ಎಂದು ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಮೊಮ್ಮಗ, ಮಾಜಿ ಸಂಸದ ಹಾಗೂ ಹಿರಿಯ ಚಿಂತಕ ಪ್ರಕಾಶ ಅಂಬೇಡ್ಕರ ಹೇಳಿದ್ದಾರೆ.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಗದಗಿನ ಲಡಾಯಿ ಪ್ರಕಾಶನ, ಧಾರವಾಡದ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಹಾಗೂ ವಿಜಯಪುರ ಮೇ ಸಾಹಿತ್ಯ ಬಳಗ ಸಂಯುಕ್ತಾಶ್ರಯದಲ್ಲಿ ಕುಮಾರ ಕಕ್ಕಯ್ಯ ಪೆೋಳ, ಬಿ. ಗಂಗಾಧರ ಮೂರ್ತಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 9ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.

ನಮ್ಮ ಬಳಿ ಜ್ಯೋತಿಬಾ ಫುಲೆ, ಶಾಹು ಮಹಾರಾಜ, ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯ ಒಂದು ಪಕ್ಷ ಬೇಕಾಗಿದೆ.  ಅದರಿಂದ ಜಾತಿ ವ್ಯವಸ್ಥೆ ತೊಡೆದು ಹಾಕಲು ಪ್ರಯತ್ನಿಸಬಹುದು.  ಇಂದು ಭಾರತದ ಸಂಸ್ಕತಿಯೆಂದು ಹೇಳುವ ಪರಿಪಾಠ ಆರಂಭವಾಗಿದೆ.  ಇಲ್ಲಿ ಎರಡು ಬಗೆಯ ಪರಂಪರೆಗಳಿವೆ.  ಒಂದು ಯಾಜಮಾನ್ಯ ಆಳ್ವಿಕೆಯ ದಬ್ಬಾಳಿಕೆಯ ಪರಂಪರೆ ಮತ್ತೊಂದು ಇಂದು ವೇದಿಕೆಯ ಮೇಲೆ ಕುರಿತಿರುವ ಸಂತರು ಶರಣರ ಪರಂಪರೆ.  ಇದು ಮಹಾರಾಷ್ಟ್ರದ ಕಬೀರನಿಂದ ಆರಂಭಿಸಿ ಕೇರಳದ ತನಕ ಸಾಗುತ್ತದೆ.  ಮೊದಲನೇದ್ದು ಹಿಟ್ಲರ್ ಶಾಹಿಯಾದದ್ದು, ಇದರಲ್ಲಿ ನಿಮಗೆ ಚಿಂತಿಸುವ ಅವಕಾಶವಿಲ್ಲ. ಇದನ್ನು ವಿವರಿಸುವಾಗ ನಾವು ಮನುಸ್ಮತಿಯನ್ನು ನಾವು ಉದಾಹರಣೆಯಾಗಿ ನೀಡುತ್ತೇವೆ. ಅಂದರೆ ಇಲ್ಲಿ ಯಾಜಮಾನ್ಯ ಮಾತ್ರವಲ್ಲ, ಅಸಹಿಷ್ಣುತೆ ಇದೆ ಎಂಬುದು.  ಮತ್ತೊಂದೆಡೆ ಸಂತರ ಪರಂಪರೆಯಿದೆ.  ಇಲ್ಲಿ ಶಾಂತಿಯಿದೆ.  ಪರಸ್ಪರರನ್ನು ಒಪ್ಪಿಕೊಳ್ಳುವುದಿದೆ.  ಸಹಬಾಳ್ವೆಯಿದೆ.  ಜಾತಿ ಪದ್ಧತಿಯ ವಿರುದ್ಧ ಹೋರಾಟವಿದೆ.  ಉದಾಹರಣೆಗೆ- ಸಂತರ ಸಂಸ್ಕತಿಯಲ್ಲಿ ಪುನರ್ವಿವಾಹವಿದೆ.  ಇದನ್ನು ಗಾಂಧರ್ವ ವಿವಾಹದ ರೂಪದಲ್ಲೂ ನಡೆಯುತ್ತದೆ.  ವೈದಿಕಶಾಹಿಯಲ್ಲಿ ಮಹಿಳೆಯರಿಗೆ ಮರುವಿವಾಹದ ಅವಕಾಶವಿಲ್ಲ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ ಅಂಬೇಡ್ಕರ ಮಾತನಾಡಿದರು

ಸಂವಿಧಾನ ಇವುಗಳಲ್ಲಿ ಯಾವ ಸಂಸ್ಕತಿಯ ಪ್ರತಿನಿಧೀ? ನಾವು ಸಂವಿಧಾನದ ಪೀಠಿಕೆ ಓದಿದ್ದೇವೆ.  ಆದರೆ, ಇದರಲ್ಲಿ ಒಂದು ದೋಷವಿದೆ ಎಂದು ನಾನು ಭಾವಿಸುತ್ತೇನೆ.  ಈ ಶಪಥಗ್ರಹಣದ ಪದ್ಧತಿ ಯಾರು ಆರಂಭಿಸಿದರು? ನನ್ನ ಅಧ್ಯಯನದ ಪ್ರಕಾರ ಇದನ್ನು ಹಿಟ್ಲರ್ ಆರಂಭಿಸಿದ್ದು ನಂತರ ಆರೆಸ್ಸೆಸ್ ಮುಂದುವರೆಸಿದ್ದು, ನಾವು ಕೈ ಮುಂದೆ ಮಾಡುತ್ತೇವೆ.  ಇಲ್ಲಿ ಕೈ ಶಪಥ ತೆಗೆದುಕೊಳ್ಳುವಿದಿಲ್ಲ.  ಮನಸ್ಸು ತೆಗೆದುಕೊಳ್ಳುವುದು.  ಇದು ಅನುಕರಣೆಯ ಸಂಗತಿ.  ಇಲ್ಲಿ ಯಜಮಾನ್ಯದ ವಿಷಯಗಳು ಚಿಹ್ನೆಗಳ ಮೂಲಕ ಸಾಗುತ್ತವೆ.  ಇಲ್ಲಿ ಚಿಹ್ನೆ ಗಮನಿಸಿ, ಪಗಡಿ ಹಾಕುವ ಪರಂಪರೆ, ಇದು ಮೊದಲು ಯಾರ ಪದ್ಧತಿಯಾಗಿತ್ತು? ಪಗಡಿಯನ್ನು ಮೊದಲು ಮೇಲಿನ ವರ್ಗಗಳಷ್ಟೇ ಧರಿಸಲು ಸಾಧ್ಯವಿತ್ತು.  ಉಳಿದವರಿಗೆ ಅವಕಾಶ ಇರಲಿಲ್ಲ.  ಒಂದು ವೇಳೆ ಸಮಾನತೆಯೇ ತರುವುದಾದರೆ ನೀವು ಏಣಿಶ್ರೇಣಿಯಲ್ಲಿ ಸಮಾಜದ ಕಟ್ಟಕಡೆಯಲ್ಲಿರುವವರ ಪದ್ಧತಿಯಲ್ಲಿ ಪಗಡಿಯನ್ನು ಎಲ್ಲರೂ ಧರಿಸುವುದನ್ನು ಆರಂಭಿಸಿದರೆ ಅದನ್ನು ನಾನು ಸಮಾನತೆಯ ಪ್ರಯೋಗವೆಂದು ಒಪ್ಪುತ್ತೇನೆ ಎಂದು ಅವರು ಹೇಳಿದರು.

ಇಂದು ಸಂವಿಧಾನವನ್ನು ಉಳಿಸಬೇಕೆಂದರೆ ಅದನ್ನು ಉಳಿಸುವುದು ಯಾರು? ಫುಲೆ, ಬಾಬಾಸಾಹೇಬ, ಶಾಹು ಮಹಾರಾಜ ಮುಂತಾದವರ ಚಿಂತನೆಗಳು ಮುಂದಕ್ಕೆ ಹೋಗಬೇಕು ಎಂದು ಪ್ರಕಾಶ ಅಂಬೇಡ್ಕರ ಹೇಳಿದರು.

ಈ ಸಂಧರ್ಭದಲ್ಲಿ ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ, ತುಕಾರಾಂ ಚಂಚಲಕರ,  ಬಸವರಾಜ ಸೂಳಿಭಾವಿ, ರಿಯಾಜ ಫಾರೂಕಿ, ಮಲ್ಲಮ್ಮ ಯಾಳವಾರ, ಭಗವಾನ ರೆಡ್ಡಿ,  ಕೋಣೇಶ್ವರ ಸ್ವಾಮೀಜಿ, ಅಬ್ದುಲ್ ರೆಹಮಾನ್ ಬಿದರಕುಂದಿ, ಅನಿಲ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌