ಮೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾದ ಎಂಟು ಹಕ್ಕೋತ್ತಾಯ ಈಡೇರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ

ವಿಜಯಪುರ: ನಗರದಲ್ಲಿ ಮೇ 27 ಮತ್ತು 28 ರಂದು ನಡೆದ 9ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾದ ಎಂಟು ಹಕ್ಕೋತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ಚಿತ್ತಾರ ಕಲಾ ಬಳಗ ಮ್ತತು ಮೇ ಸಾಹಿತ್ಯ ಮೇಳ ಬಳಗದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಅನಿಲ ಹೊಸಮನಿ, ಮೇ 27 ಮತ್ತು 28 ರಂದು ವಿಜಯಪುರದಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ದೇಶದ ಮತ್ತು ರಾಜ್ಯದ ಸಾವಿರಾರು ಚಿಂತಕರು ಸಾಹಿತಿಗಳು ಸಂಘಟಿಕರು ಪಾಲ್ಗೊಂಡಿದ್ದರು.  ಈ ಮೇಳದ ಸಮಾರೋಪ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ನೆಲ ಜಲ ಜನಗಳ ಹಿತವನ್ನು ಗಮನಿಸಿ ಎಂಟು ನಿರ್ಣಯಗಳನ್ನು ಸಮ್ಮತದಿಂದ ಅಂಗೀಕಾರ ಮಾಡಲಾಗಿದೆ.  ಆ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು.    ಇದರಿಂದ ಸರಕಾರಕ್ಕೂ ಒಳ್ಳೆಯ ಹೆಸರು ಬರುವುದು ಎಂದು ಹೇಳಿದರು.

ಮನವಿ ಪತ್ರದಲ್ಲಿರುವ ಪ್ರಮುಖ ಅಂಶಗಳು

  1. ಪಂಚ ನದಿಗಳ ಬೀಡು ವಿಜಯಪುರ ಜಿಲ್ಲೆ ಕೃಷಿ ಮತ್ತು ತೋಟಗಾರಿಕೆ ಬೆಳಗಳಿಗೆ ಹೆಸರುವಾಸಿಯಾಗಿದ್ದು, 1933 ರಲ್ಲಿ ಕೃಷಿ ಸಂಶೋಧನಾ ಕೇಂದ್ರವಾದ ಕೃಷಿ ಮಹಾವಿದ್ಯಾಲಯ ಸ್ಥಾಪಿಸಲಾಗಿದೆ. ಈ ಭಾಗದ ರೈತರಿಗೆ ಕೃಷಿ ಸಂಶೋಧನೆ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ವಿಜಯಪುರದಲ್ಲಿ ಕೃಷಿ ಮಹಾವಿದ್ಯಾಲಯವನ್ನು ಸ್ವತಂತ್ರವಾದ ಕೃಷಿ ವಿಶ್ವವಿದ್ಯಾಲಯವನ್ನಾಗಿ ಆರಂಭಿಸಬೇಕು.  ಜತೆಗೆ ಜಿಲ್ಲೆಯಲ್ಲಿ ಈಗಾಗಲೇ ಹಿಟ್ನಳ್ಳಿಯಲ್ಲಿ ಆರಂಭಿಸಲಾಗಿದ್ದ ಬಿ.ಟೆಕ್ (ಕೃಷಿ) ಮಹಾವಿದ್ಯಾಲಯ ಮತ್ತು ಆಲಮೇಲದಲ್ಲಿ ಮಂಜೂರಾದ ತೋಟಗಾರಿಕೆ ಮಹಾವಿದ್ಯಾಲಯಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸುವ ತಪ್ಪು ಮಾಡಲಾಗಿದ್ದು, ಅದನ್ನು ಸರಿಪಡಿಸಲು ಜಿಲ್ಲೆಯಲ್ಲಿ ಆ ಎರಡೂ ಮಹಾವಿದ್ಯಾಲಯಗಳನ್ನು ಪುನಾರಂಭಿಸಬೇಕು.
  2. ಜಿಲ್ಲೆಯಲ್ಲಿ ರೈತರು ಬೆಳೆಯುವ ನಾನಾ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸೂಕ್ತ ನ್ಯಾಯಯುತ ಬೆಂಬಲ ಬೆಲೆ ಘೋಷಿಸಬೇಕು. ಸರಕಾರದಿಂದ ಶೈತ್ಯಾಗಾರ ಪ್ರಾರಂಭಿಸಬೇಕು.
  3. ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮಂಜೂರಾಗಿರುವ ನಾನಾ ಏತ ನೀರಾವರಿಗಳು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ರೈತರಿಗಾಗಿ ಭೀಮಾ ನದಿಯ ನೀರನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಬೇಕು. ಜಿಲ್ಲೆಯ ಜೀವನಾಡಿ ಡೋಣಿ ನದಿ ಪಾತ್ರದಲ್ಲಿ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳಬೇಕು.
  4. ಜಿಲ್ಲೆಯಿಂದ ಜನ ಗುಳೆ ಹೋಗುವುದನ್ನು ತಪ್ಪಿಸಲು ಅವರ ಜೀವನೋಪಾಯಕ್ಕೆ ತಾಲೂಕಿಗೊಂದು ಶ್ರಮ ಆಧಾರಿತ ಕೈಗಾರಿಕೆಗಳನ್ನು ಪ್ರಾರಂಭಿಸಬೇಕು. ಆಗ ಮಾತ್ರ ನಿರಂತರ ಉದ್ಯೋಗ ಸಿಕ್ಕು ವಲಸೆ ಹೋಗುವುದು ತಪ್ಪುತ್ತದೆ.
  5. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭೂರಹಿತ ದೀನ-ದಲಿತರು, ಬಡ ಕೃಷಿ ಕಾರ್ಮಿಕರಿದ್ದಾರೆ. ಈ ದುಡಿಯುವ ವರ್ಗದ ಪ್ರತಿ ಕುಟುಂಬಗಳಿಗೆ ಕನಿಷ್ಟ ಎರಡು ಎಕರೆ ಜಮೀನು ಹಂಚಿಕೆ ಮಾಡಬೇಕು.
  6. ವಿಜಯಪುರದಂಥ ದೊಡ್ಡ ಜಿಲ್ಲೆಯಲ್ಲಿ ಒಂದೂ ಸರಕಾರಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಲ್ಲ. ಕೂಡಲೇ ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಮತ್ತು ಎಂಜನಿಯರಿಂಗ್ ಕಾಲೇಜ್ ಆರಂಭಿಸಬೇಕು. ಕನಿಷ್ಟ ಜನಸಂಖ್ಯೆಗಳಿಗುವಾಗಿ ವಿಜಯಪುರ ನಗರದಲ್ಲಿ ಎರಡು ಸರಕಾರಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಬೇಕು.
  7. ಜಿಲ್ಲೆಯಲ್ಲಿರುವ ವಸತಿ ಹೀನ ಬಡಜನರ ಕುಟುಂಬಗಳಿಗೆ ನಿವೇಶನ ಹಂಚಿ ಮನೆ ಕಟ್ಟಿಸಿಕೊಡಬೇಕು.
  8. ಜಿಲ್ಲೆಯ ಜನರಿಗೆ ಪಡಿತರ ವ್ಯವಸ್ಥೆಯಲ್ಲಿ 10 ಕೆ. ಜಿ ಅಕ್ಕಿಯ ಬದಲಾಗಿ ಐದು ಕೆ. ಜಿ ಅಕ್ಕಿ ಮತ್ತು ಐದು ಕೆ. ಜಿ ಬಿಳಿಜೋಳ ಅಥವಾ ಗೋಧಿ ನೀಡಬೇಕು.

ಈ ಎಂಟು ಹಕ್ಕೋತ್ತಾಯಗಳನ್ನು ಒಳಗೊಂಡಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಸೂಳಿಭಾವಿ, ಅನಿಲ ಹೊಸಮನಿ, ಚಂದ್ರಶೇಖರ ಘಂಟೆಪ್ಪಗೋಳ, ಫಯಾಜ ಕಲಾದಗಿ, ಅಕ್ರಂ ಮಾಶಾಳಕರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌