ವಿಜಯಪುರ: ನಗರದ ಹಿರಿಯ ಪತ್ರಕರ್ತ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಖಜಾಂಚಿ ದೀಪಕ ಶಿಂತ್ರೆ ಅವರು ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘ ಪತ್ರಕರ್ತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಳೆದ 25 ವರ್ಷಗಳಿಂದ ಪತ್ರಿಕಾ ರಂಗದಲ್ಲಿ1998ರಿಂದ ಸಕ್ರೀಯರಾಗಿರುವ ದೀಪಕ ಶಿಂತ್ರೆ ಅವರು ಮಹಾರಾಷ್ಟ್ರದ ಮರಾಠಿ ದಿನಪತ್ರಿಕೆಗಳಾದ ಸಂಚಾರ, ತರುಣ ಭಾರತ, ಸ್ವರಾಜ್ಯ (ಸೊಲಾಪೂರ), ಲಲಕಾರ, ಮಹಾ ಸತ್ತಾ (ಸಾಂಗಲಿ) ಅಲ್ಲದೇ ಬೆಳಗಾವಿಯಿಂದ ಪ್ರಕಟವಾಗುವ ಪುಡಾರಿ ಹಾಗೂ ಸ್ವತಂತ್ರ ಪ್ರಗತಿ ಮರಾಠಿ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ, ಕೈಫಿಯತ್ ಕನ್ನಡ ದಿನಪತ್ರಿಕೆಗೆ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಡಿನ ಗಡಿ ಪ್ರದೇಶಗಳ ಮರಾಠಿ ಪತ್ರಿಕೆಗಳಿಗೆ ವಿಜಯಪುರ ಜಿಲ್ಲೆಯ ಆಗು- ಹೋಗುಗಳನ್ನು ನಿಯಮಿತವಾಗಿ ವರದಿ ಮಾಡುವ ಮೂಲಕ ಕನ್ನಡ – ಮರಾಠಿ ಭಾಷಾ ಬಾಂಧವ್ಯವನ್ನು ವೃದ್ಧಿಸುವ, ಭಾಷಾ ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಪತ್ರಿಕಾ ರಂಗದಲ್ಲಿ ದೀಪಕ ಶಿಂತ್ರೆ ಅವರ ಸೇವೆಯನ್ನು ಗುರುತಿಸಿ ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘ ದೀಪಕ ಶಿಂತ್ರೆ ಅವರಿಗೆ ಜೂ. 4 ರಂದು ಫಂಡರಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪತ್ರಕರ್ತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ ಎಂದು ಸಂಘದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.