ವಿಜಯಪುರ: ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಗಳ ಬಗ್ಗೆ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳ ಕುರಿತು ಮಾಜಿ ಡಿಸಿಎಂ ಮತ್ತು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಇಂಚಗೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದು ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರು ಈಗ 65 ಸ್ಥಾನಗಳಿಗೆ ಬಂತು ನಿಂತಿದ್ದಾರೆ. ಒಳ್ಳೆಯ ಕೆಲಸ ಮಾಡುವ ಸರಕಾರವನ್ನು ಪ್ರೋತ್ಸಾಹಿಸಬೇಕು. ಅನಾವಶ್ಯಕವಾಗಿ ಟೇಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಗ್ಯಾರಂಟಿ ಸ್ಕೀಂ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಬಿಜೆಪಿಯವರು ಭವಿಷ್ಯ ನುಡಿಯುವವರಾ ಎಂದು ಪ್ರಶ್ನಿಸಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಭವಿಷ್ಯ ನುಡಿಯೋಕೆ ಇವರು ಯಾರು? ಭವಿಷ್ಯ ನುಡಿಯುವುದಾದರೆ ಬಿಜೆಪಿಯವರು ಹೊತ್ತಿಗೆ ತೆಗೆದುಕೊಂಡು ದೇವಸ್ಥಾನದ ಎದುರು ಕುಳಿತುಕೊಳ್ಳಲಿ. ಜನರು ಹಣ ಇಟ್ಟು ಕಾಣಿಕೆ ಕೊಟ್ಟು ಭವಿಷ್ಯ ಕೇಳಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಒಂದು ವರ್ಷದಲ್ಲಿ ಕಾಂಗ್ರೆಸ್ ಸರಕಾರ ಬದಲಾವಣೆಯಾಗಲಿದೆ ಎಂದು ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶಾಸಕ ದುರ್ಯೋಧನ ಐಹೊಳಿ ಹೇಳಿದ್ದು ಸತ್ಯವಿರಬೇಕು. ರಾಜ್ಯದಲ್ಲಿ ಬಿಜೆಪಿ 65 ಇರೋದು 26ಕ್ಕೆ ಬರಬಹುದು. ಇಂಥ ಸುಕ್ಷೇತ್ರದಲ್ಲಿ ದೇವಸ್ಥಾನದಲ್ಲಿ ನಿಂತು ಅವರು ನಿಜ ಹೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಎ ಸರಕಾರ ಬದಲಾಗಲಿದೆ ಎಂದು ಲಕ್ಷ್ಮಣ ಸವದಿ ಟೀಕಿಸಿದರು.
ಗ್ಯಾರಂಟಿ ಯೋಜನೆ ಜಾರಿಗೆ ಸಿಎಂ ಪರದಾಟ ಆರೋಪ ವಿಚಾರ
ಐದು ಗ್ಯಾರಂಟಿ ಸ್ಕೀಂ ಗಳು ಜಾರಿಗೆ ಬಂದೆ ಬರುತ್ತವೆ. ಅವುಗಳನ್ನು ಜಾರಿ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ, ಗ್ಯಾರಂಟಿ ಜಾರಿಗೆ ಬರೋದು ಪಕ್ಕಾ. ಗ್ಯಾರಂಟಿ ಯೋಜನೆಗಳ ಬಗ್ಗೆ ನಿಖರವಾಗಿ ಸರ್ವೇ ಕಾರ್ಯ ನಡೆಯಬೇಕಾಗುತ್ತೆ. ಮನೆಯ ಒಡತಿಯರು ಎಷ್ಟು ಎನ್ನುವ ಬಗ್ಗೆ ಸರ್ವೇ ನಡೆಯಬೇಕು. ಮನೆ ಒಡತಿಯರನ್ನು ಗುರುತಿಸಲು ಸಮಯ ಬೇಕಾಗುತ್ತದೆ. ಡಿಪ್ಲೋಮಾ ಮತ್ತು ಡಿಗ್ರಿ ಕಲಿತವರನ್ನು ಗುರುತಿಸಬೇಕಾಗುತ್ತೆ. ಈ ಬಗ್ಗೆ ಪರಿಶೀಲನೆ ನಡೆಯಬೇಕಾಗುತ್ತದೆ. ಇದಕ್ಕೆ ಸಮಯ ಬೇಕಾಗುತ್ತದ ಎಂದು ಅವರು ತಿಳಿಸಿದರು.
ಖಂಡಿತವಾಗಿ ಎಲ್ಲ ಐದು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದೆ ಬರುತ್ವವೆ. ಜನರ ನಿರೀಕ್ಷೆಗಳು ಹುಸಿಯಾಗದಂತೆ ಯೋಜನೆಗಳು ಜಾರಿಯಾಗಲಿವೆ. ಯೋಜನೆ ಜಾರಿಯಾದ ಮೇಲೆ ದುರ್ಯೋಧನ ಐಹೊಳೆ ಹೇಳಿದಂತೆ ಬಿಜೆಪಿಯಲ್ಲಿ ಬದಲಾವಣೆ ಆಗುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಡಿಕೆಶಿ ಭೇಟಿ, ಮಾತುಕತೆ ವಿಚಾರ
ಇದೇ ವೇಳೆ, ಡಿಸಿಎಂ ಡಿ. ಕೆ. ಶಿವಕುಮಾರ ಅವರು ಮಂಗಳವಾರ ತಮ್ಮನ್ನು ಹಾಗೂ ಬುಧವಾರ ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿ. ಕೆ. ಶಿವಕುಮಾರ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು. ಬಿಡುವಿಲ್ಲದ ಕಾರಣ ಈವರೆಗೆ ಭೇಟಿಯಾಗಲು ಆಗಿರಲಿಲ್ಲ. ನಮ್ಮ ಜೊತೆ ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದರು.
ಸಚಿವ ಸ್ಥಾನ ವಂಚಿತರಾದ ವಿಚಾರ
ಶಾಸಕನಾದ ಮೇಲೆ ಮಂತ್ರಿಯಾಗುವ ಬಯಕೆ ಎಲ್ಲರಿಗೂ ಇರುತ್ತದೆ. ಅದು ಕಷ್ಟಸಾಧ್ಯ. ಕಾಂಗ್ರೆಸ್ ಈಗ 135 ಕ್ಷೇತ್ರದಲ್ಲಿ ಗೆದ್ದಿದೆ. ಹಳಬರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿದ್ದಾರೆ. ಹಳಬರಿಗೆ ಪ್ರಾತಿನಿಧ್ಯ ಕೊಡಬೇಕಾದ ಅನಿವಾರ್ಯತೆ ಇರುತ್ತದೆ. ಎಲ್ಲರಿಗೂ ಮಂತ್ರಿ ಆಗೋಕೆ ಆಗಲ್ಲ. ಬಯಕೆ, ಅಪೇಕ್ಷೆ ಪಡುವುದು ತಪ್ಪಲ್ಲ. ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ. ಮೊದಲು ಶಾಸಕ, ಬಳಿಕ ಸಚಿವ, ನಂತರ ಡಿಸಿಎಂ, ಆಮೇಲೆ ಸಿಎಂ ಆಗಬೇಕು ಎಂದುಕೊಳ್ಳುತ್ತೇವೆ. ಮನುಷ್ಯನ ಕನಸುಗಳಿಗೆ ಮಿತಿ ಇಲ್ಲ. ಎಲ್ಲರಿಗೂ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ನಾವು ಇತ್ತೀಚಿಗೆ ಕಾಂಗ್ರೆಸ್‌ಸಿಗೆ ಬಂದಿದ್ದೇವೆ. ಪಕ್ಷ ಹೆಚ್ಚು ಸೀಟು ಗೆಲ್ಲಲು ನಮ್ಮದೆ ಆದ ಕೆಲಸ ಮಾಡಿದ್ದೇವೆ. ಇದು ಎಲ್ಲವೂ ಪಕ್ಷದ ನಾಯಕರಿಗೆ ಗೊತ್ತಿದೆ. ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಡಿ. ಕೆ. ಶಿವಕುಮಾರ ಭೇಟಿ ವೇಳೆ ನಡೆದ ಕೆಲ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ಗಂಡ ಹೆಂಡತಿ ನಡುವೆ ನಡೆದ ಮಾತುಕತೆ ಎಲ್ಲವನ್ನೂ ಹೊರಗೆ ಹೇಳೋಕೆ ಆಗಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಗಠಾಣ(ಮೀ) ಕಾಂಗ್ರೆಸ್ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.