ದನ ತಿವಿದು ಗಾಯಗೊಂಡಿದ್ದ ಮಗುವಿನ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿಸಿದ ಜೆ ಎಸ್ ಎಸ್ ಆಸ್ಪತ್ರೆ ವೈದ್ಯರು

ವಿಜಯಪುರ: ದನ ತಿವಿದ ಕಾರಣ ಕೆಳತುಟಿಯ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಪುಟ್ಟ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಸವ ನಾಡಿನ ಜೆ ಎಸ್ ಎಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ತಿಕೋಟಾ ತಾಲೂಕಿನ ಮಲಕನದೇವರ ಹಟ್ಟಿಯ ಎರಡು ವರ್ಷದ ಬಾಲಗಿ ಮನೆಯ ಮುಂದೆ ಆಟವಾಡುವ ಸಂದರ್ಭದಲ್ಲಿ ದನ ತಿವಿದ ಪರಿಣಾಮ ಆಕೆಯ ಕೆಳತುಟಿಯ ಭಾಗದಲ್ಲಿ ಕೆನ್ನೆ ಕತ್ತರಿಸಿತ್ತು.  ಗಂಭೀರವಾಗಿ ಗಾಯಗೊಂಡಿದ್ದ ಸ್ಥಿತಿಯಲ್ಲಿ ಆಕೆಯ ಪೋಷಕರು ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.  ಆಗ ಮಗುವನ್ನು ಪರಿಶೀಲನೆ ನಡೆಸಿದ ಚಿಕ್ಕಮಕ್ಕಳ ತಜ್ಞ ಡಾ. ಬಲವಂತರಾಯ ಮಸಳಿ, ಕೂಡಲೇ ಶಸ್ತ್ರಚಿಕಿತ್ಸೆ ನಡೆಸಲು ಸೂಚನೆ ನೀಡಿದ್ದಾರೆ.

ಗಾಯಗೊಂಡಿದ್ದ ಪುಟ್ಟ ಬಾಲಕಿ

ಆಗ ಜೆ ಎಸ್‌ ಎಸ್‌ ಆಸ್ಪತ್ರೆಯ ಶಸ್ತಚಿಕಿತ್ಸಕ ಡಾ. ಪ್ರದೀಪ ಜಾಜೂ ಆಪರೇಶನ್ ನಡೆಸಿ ಮಗುವಿ ಮೊಗದಲ್ಲಿ ಮತ್ತೆ ಮಂದಹಾಸ ಮೂಡುವಂತೆ ಮಾಡಿದ್ದಾರೆ.  ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯ ಡಾ. ಪ್ರದೀಪ ಜಾಜೂ, ಆಸ್ಪತ್ರೆಗೆ ಬಂದಾಗ ಮಗುವನ್ನು ಪರಿಶೀಲಿಸಿದಾಗ ಅದರ ಸ್ಥಿತಿ ಚಿಂತಾಜನಕವಾಗಿತ್ತು.  ತುಟಿ ಕತ್ತರಿಸಿದ್ದರ ಪರಿಣಾಮವಾಗಿ ರಕ್ತ ಹೊರ ಬಂದು ಜೊತೆಗೆ ವಿಪರೀತವಾದ ನೋವು ಅನುಭವಿಸುತ್ತಿತ್ತು.  ಅಲ್ಲದೇ, ಮಗುವಿಗೆ ಆಹಾರ ಸೇವಿಸುವುದಕ್ಕೂ ಕಷ್ಟಸಾಧ್ಯವಾಗಿತ್ತು.  ಹೆಣ್ಣುಮಗುವಿನ ಭವಿಷ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ತುಟಿಯ ವಿನ್ಯಾಸ ಹಾಳಾಗದ ಹಾಗೆ ಹಾಗೂ ಮುಖದ ಮೇಲೆ ದೊಡ್ಡದಾದ ಗಾಯದ ಕಲೆ ಉಳಿಯದಂತೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ಸವಾಲಾಗಿತ್ತು.  ಆಗ ಸಾಂಪ್ರದಾಯಿಕ ಶೈಲಿಯಲ್ಲಿ ಹೊಲಿಗೆಯನ್ನು ಹಾಕದೆ ಚರ್ಮದ ಮೂರು ಪದರಗಳಿಗೆ ಪ್ರತ್ಯೇಕವಾಗಿ ಹೊಲಿಗೆ ಹಾಕುವ ಮೂಲಕ ಯಶಸ್ಸಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೇ, ತುಟಿಯ ವಿನ್ಯಾಸ ಹಾಳಾಗದಂತೆ ಪ್ಲಾಸ್ಟಿಕ್ ಸರ್ಜರಿ ಮಾದರಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮಗುವಿನ ಮುಖದ ಮೇಲೆ ಗಾದಯ ಕಲೆ ಶೇ. 90 ರಷ್ಟು ಕಡಿಮೆ ಇರುತ್ತದೆ.  ಇಷ್ಟು ದೊಡ್ಡದಾದ ಗಾಯವಾಗಿದ್ದರೂ ಸಹ ಭವಿಷ್ಯದಲ್ಲಿ ಎಲ್ಲ ಮಕ್ಕಳ ರೀತಿಯಲ್ಲಿಯೇ ಈ ಮಗು ಕೂಡ ಗುರುತಿಸಿಕೊಳ್ಳುತ್ತದೆ ಎಂದು ಹೇಳಿದರು.

 

ಮಗುವಿನ ತಂದೆ ಮಾತನಾಡಿ. ಜ್ಞಾನಯೋಗಿಯ ಹೆಸರಿಟ್ಟಿದ್ದಕ್ಕೂ ಸಾರ್ಥಕವಾಗುವ ಹಾಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂಧಿ ವರ್ಗದವರು ಮಗುವಿನ ಕಾಳಜಿ ಮಾಡಿದ ಪರಿಣಾಮ ಇಂದು ನನ್ನ ಮಗಳು ಮೊದಲಿಂತಾಗಲು ಸಾಧ್ಯವಾಗಿದೆ.  ನನ್ನ ಮಗುವಿನ ಮುಖದ ಮೇಲೆ ನಗು ತರಿಸಿದ ಸರ್ವರಿಗೂ ನಾನು ಜೀವನಪೂರ್ತಿ ಚಿರಋಣಿಯಾಗಿರುವುದಾಗಿ ಭಾವುಕರಾಗಿ ನುಡಿದರು.

ವೈದ್ಯರ ಮತ್ತು ನರ್ಸಿಂಗ್ ಸಿಬ್ಬಂದಿಯ ಈ ಕಾರ್ಯಕ್ಕೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶರಣ ಮಳಖೇಡ್ಕರ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌