ವಿಜಯಪುರ: ಬೇಸಿಗೆ ಬಿಡುವಿನ ನಂತರ ಇಂದಿನಿದ ಶಾಲೆಗಳು ಆರಂಭವಾಗಿದ್ದು, ಮಕ್ಕಳನ್ನು ಶಾಲೆಗೆ ಕರೆತರಲು ಬವಸ ನಾಡಿನ ಶಾಲೆಯೊಂದು ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿದೆ.
ವಿಜಯಪುರ ನಗರದ ದಿವಟಗೇರಿ ಗಲ್ಲಿಯಲ್ಲಿರುವ ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವಿನೂತನವಾಗಿ ಸ್ವಾಗತಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳನ್ನು ವಿಶೇಷವಾಗಿ ಸಿಂಗರಿಸಲಾಗಿದ್ದ ಎತ್ತಿನ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಶಾಲೆಗೆ ಕರೆತರಲಾಯಿತು. ಈ ಮೂಲಕ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಕಲ್ಪಿಸಲಾಯಿತು.
ಈ ಕಾರ್ಯಕ್ರಮದದಲ್ಲಿ ಅತಿಥಿಯಾಗಿ ಪಾಲ್ಗೊಂಡ ಎಂ. ಎಸ್. ಕುಲಕರ್ಣಿ ಮಾತನಾಡಿ, ವಿನಯವೇ ವಿದ್ಯೆಗೆ ಭೂಷಣ. ವಿದ್ಯೆಯಿಂದ ನಿಮ್ಮ ಜೀವನ ಪ್ರಕಾಶಮಯವಾಗಿರುತ್ತದೆ. ಮೌಲ್ಯಗಳನ್ನು ಅಳವಡಿಸಿ ಮೌಲ್ಯಯುತವಾಗಿ ಬಾಳಿ ದೇಶಕ್ಕೆ ದೊಡ್ಡ ಶಕ್ತಿಯಾಗಿ ಬೆಳೆಯಿರಿ ಎಂದು ಶುಭ ಕೋರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರುಕ್ಮಾಂಗದ ಹೈಸ್ಕೂಲಿನ ಮುಖ್ಯ ಶಿಕ್ಷಕ ಎಲ್. ಎಚ್. ಕುಲಕರ್ಣಿ, ವಿದ್ಯಾರ್ಥಿಗಳ ಉತ್ಸಹವೇ ಶಿಕ್ಷಕರಿಗೆ ಪ್ರೋತ್ಸಾಹವಾಗಿದೆ. ವಿದ್ಯಾರ್ಥಿಗಳ ಉತ್ಸಹ ಜ್ಞಾನದ ಪ್ರಥಮ ಮೆಟ್ಟಿಲು. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಅಭ್ಯಾಸ ಮಾಡಲು ಇಂದೇ ನಿರ್ಧರಿಸಿ ದೊಡ್ಡ ಗುರಿಯನ್ನು ಇಟ್ಟುಕೊಂಡು ದೊಡ್ಡ ಸಾಧನೆ ಮಾಡಬೇಕು ಎಂದು ಹೇಳಿದರು. ಅಲ್ಲದೇ, ಈ ಸಂದರ್ಭದಲ್ಲಿ ಆನಂದ ಕುಲಕರ್ಣಿ ಶಾಲೆಯ ಕುರಿತು ಹಾಡಿದ ಹಾಡು ವಿದ್ಯಾರ್ಥಿಗಳ ಮನಸೂರೆಗೊಂಡಿತು.
ಸಂಸ್ಥೆಯ ಅಧ್ಯಕ ಅರುಣ ಸೋಲಾಪುರಕರ ಮಾತನಾಡಿ, ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆಯು ಬಹುಮುಖ್ಯವಾಗಿದೆ. ಶಿಸ್ತನ್ನು ಮೈಗೂಡಿಸಿಕೊಂಡು ಸಂಸ್ಥೆಯ ಹೆಸರನ್ನು ಜಗತ್ತಿಗೆ ತಿಳಿಯುವಂತೆ ಮಾಡಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಜಂಟಿ ಗೌರವ ಕಾರ್ಯದರ್ಶಿ ಆರ್. ಎಸ್. ದೇಶಪಾಂಡೆ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆನಂದ ಕುಲಕರ್ಣಿ, ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪಿ. ಎ. ದೀಕ್ಷಿತ, ವಿ. ಎಚ್. ಕುಲಕರ್ಣಿ, ಎಲ್. ಕೆ. ಕುಲಕರ್ಣಿ, ಎಸ್. ಎಸ್. ನಾಯಕ, ಆರ್. ಕೆ. ಕುಲಕರ್ಣಿ, ಪಿ. ಡಿ. ಬಿರಾದಾರ, ಎಸ್. ಜಿ. ಕುಲಕರ್ಣಿ ಸೇರಿದಂತೆ ಶಿಕ್ಷಕ, ಶಿಕ್ಷಕಿಯರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.