ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಜೂನ್ 3 ರಂದು ಶನಿವಾರ ತವರು ಜಿಲ್ಲೆ ವಿಜಯಪುರಕ್ಕೆ ಆಗಮಿಸುತ್ತಿದ್ದು, ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಚಿವರ ಅಭಿಮಾನಿಗಳು, ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ವಿಜಯಪುರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಮಾತನಾಡಿ, ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಜಿಲ್ಲೆಯಲ್ಲಿ ಜಲಕ್ರಾಂತಿ ಮಾಡಿದ್ದಾರೆ. ಈಗ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾಗಿ ಕೈಗಾರಿಕೆ ಕ್ರಾಂತಿ ಮಾಡಲಿದ್ದಾರೆ. ಅವರನ್ನು ಅದ್ದೂರಿಯಾಗಿ ಸ್ವಾಗತಿಸುವ ಸೌಭಾಗ್ಯ ನಮ್ಮದಾಗಿದೆ. ಎಲ್ಲರೂ ನಮ್ಮ ಕುಟುಂಬದ ಹಿರಿಯರಂತಿರುವ ಎಂ.ಬಿ.ಪಾಟೀಲ ಅವರನ್ನು ಆತ್ಮೀಯತೆಯಿಂದ ಸ್ವಾಗತಿಸೋಣ. ವಿಜಯಪುರ ನಗರ ಸೇರಿದಂತೆ ಬಬಲೇಶ್ವರ ಮತಕ್ಷೇತ್ರದಿಂದ ಎಂ.ಬಿ.ಪಾಟೀಲರ ಅಭಿಮಾನಿಗಳು ಮತ್ತು ಬೆಂಬಲಿಗರು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಆ ಖಾತೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಈಗ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾಗಿ ಈ ಇಲಾಖೆಯ ವರ್ಚಸ್ಸನ್ನು ಹೆಚ್ಚಿಸಲಿದ್ದಾರೆ. ಅವರ ಕೆಲಸ ಕಾರ್ಯಗಳಿಗೆ ಪೂರಕವಾಗಿ ನಾವೆಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.
ಸ್ವಾಗತ ಸಮಾರಂಭದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದು, ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳು ಡಾ. ಬಿ.ಆರ್.ಕೊಟ್ನಾಳ ಮಾತನಾಡಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧು ಗೌಡನವರ, ಆಯ್.ಎಸ್.ಕಾಳಪ್ಪನವರ, ಎಸ್.ಎ.ಬಿರಾದಾರ, ಡಾ. ಎಂ.ಎಸ್.ಮದಭಾವಿ, ಸುರೇಶ ಘೊಣಸಗಿ ಮುಂತಾದವರು ಉಪಸ್ಥಿತರಿದ್ದರು.
ಸ್ವಾಗತ ಕಾರ್ಯಕ್ರಮ ವಿವರ
ಜೂನ 3 ಶನಿವಾರದಂದು ಸಂಜೆ 6.30 ಗಂಟೆಗೆ ಸಚಿವರನ್ನು ಶಿವಾಜಿ ಚೌಕದಿಂದ ಗಾಂಧಿಚೌಕ ಮೂಲಕ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರೆದ ವಾಹನದಲ್ಲಿ ಕರೆತರಲಾಗುವುದು. ಈ ಸಂದರ್ಭದಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ನಾನಾ ಸಂಗೀತ ಮೇಳಗಳು, ಡಿಜೆ ಸೇರಿದಂತೆ ಜನಪದ ತಂಡಗಳು ಪಾಲ್ಗೊಳಲಿವೆ. ಅಲ್ಲದೇ, ಈ ಸಂದರ್ಭದಲ್ಲಿ ಮೆರವಣಿಗೆ ನಡೆಯಲಿರುವ ಮಾರ್ಗದಲ್ಲಿ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಅಳವಡಿಸಲು ನಿರ್ಧರಿಸಲಾಗಿದೆ. ವಿಜಯಪುರ ನಗರ, ಬಬಲೇಶ್ವರ ಮತಕ್ಷೇತ್ರ ಸೇರಿದಂತೆ ಜಿಲ್ಲೆಯ ನಾನಾ ತಾಲೂಕುಗಳಿಂದ ಸಾರ್ವಜನಿಕರು, ಎಂ.ಬಿ.ಪಾಟೀಲರ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಚಿವ ಎಂ.ಬಿ.ಪಾಟೀಲರ ಪ್ರವಾಸ ಪಟ್ಟಿ
ಜೂನ 3 ರಂದು ಬೆಳಿಗ್ಗೆ 8ಕ್ಕೆ ಬೆಂಗಳೂರಿನಿಂದ ಪ್ರವಾಸ ಆರಂಭಿಸಲಿರುವ ಸಚಿವ ಎಂ.ಬಿ.ಪಾಟೀಲರು ಬೆಳಿಗ್ಗೆ 10 ಗಂಟೆಗೆ ಚಿತ್ರದುರ್ಗದ ಮುರಘಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕೊಪ್ಪಳದ ಗವಿ ಸಿದ್ಧೇಶ್ವರ ಮಠಕ್ಕೆ ಭೇಟಿ ಕೊಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಇಲಕಲ್ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಲಿರುವ ಅವರು ಸಂಜೆ 5.45ಕ್ಕೆ ವಿಜಯಪುರ ನಗರಕ್ಕೆ ಆಗಮಿಸಲಿದ್ದಾರೆ. ಗುರುಪಾದೇಶ್ವರ ನಗರದಲ್ಲಿರುವ ಗದಗಿನ ತೋಂಟದಾರ್ಯ ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ.
ನಂತರ ಸಂಜೆ 6.30 ರಿಂದ ರಾತ್ರಿ 7.30ರ ವರೆಗೆ ಸ್ವಾಗತ ಮೆರವಣಿಗೆ ಮತ್ತು ಕಾರ್ನರ್ ಮೀಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ ಬಳಿಕ ವಿಜಯಪುರದಲ್ಲಿ ತಂಗಲಿದ್ದಾರೆ.