ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸರಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ವ್ಯವಸ್ಥೆ ಮಾಡಿದ ಡಿಸಿ, ಸಿಇಓ

ವಿಜಯಪುರ: ಇಂದಿನ ಸ್ಪರ್ಧಾತ್ಮಕ ಮತ್ತು ವೇಗದ ಯುಗದಲ್ಲಿ ಪ್ರತಿಯೊಂದು ಮಾಹಿತಿಯ ಅರಿವು ಅತ್ಯವಶ್ಯಕ.  ಈ ಎಲ್ಲ ಮಾಹಿತಿ ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದ್ದಾರೆ.

ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ 60 ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾದ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಜಿ. ಪಂ. ಸಭಾಂಗಣದಲ್ಲಿ ಜಿ. ಪಂ. ಸಿಇಓ ರಾಹುಲ್ ಶಿಂಧೆ ಅವರೊಂದಿಗೆ ಮಕ್ಕಳಿಗೆ ಪ್ರವಾಸ್ ಕಿಟ್ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿರು.

ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯದಲ್ಲಿ ಜಿಲ್ಲೆಯು 11ನೇ ಸ್ಥಾನ ಪಡೆದಿದ್ದು, ಶೈಕ್ಷಣಿಕ ಬೆಳವಣಿಗೆಗೆ ಮಕ್ಕಳ ಅಭಿವೃದ್ದಿಗಾಗಿ ಹಲವರ ಶ್ರಮಕ್ಕೆ ಫಲ ಸಿಕ್ಕಿದೆ.  ಜಿಲ್ಲೆಯ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಮಿಷನ್ ವಿದ್ಯಾಪುರ, ಆನ್‍ಲೈನ್ ಕೋಚಿಂಗ್ ಸೇರಿದಂತೆ ಉತ್ತಮ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ಶ್ರಮಿಸಿದ ಜಿಲ್ಲೆಯ ಶಿಕ್ಷಕರು  ಹಾಗೂ ಮಕ್ಕಳ ಪಾಲಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಮಕ್ಕಳು ಸಹ ಪ್ರವಾಸದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರವಾಸ ಕಾರ್ಯಕ್ರಮ ಇನ್ನಷ್ಟು ವಿದ್ಯಾರ್ಥಿಗಳಿಗೆ  ಅತ್ಯುತ್ತಮ ಸಾಧನೆ ಮಾಡಲು ಪ್ರೇರಣೆಯಾಗಬೇಕು.  ನಾನಾ ಸಮಸ್ಯೆಗಳಿಂದ ಹೊರಬರಲು ಶಿಕ್ಷಣ ಅತ್ಯಗತ್ಯ.  ಪ್ರವಾಸದಿಂದ ವಿಭಿನ್ನ ರೀತಿಯ ಅನುಭವವನ್ನು ಪಡೆದುಕೊಂಡು  ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆಗೇರಲಿ ಎಂದು ಹಾರೈಸಿದ ಅವರು, ಕೋಶ ಓದು, ದೇಶ ಸುತ್ತು ಎನ್ನುವಂತೆ ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನ ಹೊಂದಲು ಪ್ರವಾಸದಂಥ ಕಾರ್ಯಕ್ರಮ ಬಹು ಸಹಕಾರಿಯಾಗಿದೆ ಎಂದು ಹೇಳಿದರು.

ಸಾಧನೆ ಮಾಡಿದ ವಿದ್ಯಾರ್ಥಿಗಳ ಪ್ರವಾಸಕ್ಕೆ ಚಾಲನೆ ನೀಡಿದ ಡಿಸಿ ಡಾ. ದಾನಮ್ಮನವರ

ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ  ಪಠ್ಯೇತರ ಚಟುವಟಿಕೆಯೂ ಅತ್ಯವಶ್ಯಕವಾಗಿದೆ.  ಶೈಕ್ಷಣಿಕ ಪ್ರವಾಸದಂಥ ಕಾರ್ಯಕ್ರಮಗಳ ಅನುಭವ ಜೀವನದ ಸಮಸ್ಯೆಗಳ ನಿವಾರಣೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

2022-23ನೇ ಶೈಕ್ಷಣಿಕ ವರ್ಷದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಯಲ್ಲಿ ಕಲಿತು ಉನ್ನತ್ತ ದರ್ಜೆಯಲ್ಲಿ ಪಾಸಾದ ಜಿಲ್ಲಾ ವ್ಯಾಪ್ತಿಯಲ್ಲಿ ಟಾಪ್ ಆದ 60 ವಿದ್ಯಾರ್ಥಿಳು ಬೆಂಗಳೂರಿಗೆ ಶೈಕ್ಷಣಿಕ ಪ್ರವಾಸಕ್ಕೆ ಹೊರಡುತ್ತಿದ್ದಾರೆ.  ಶಿಕ್ಷಣ ಇಲಾಖೆಯಿಂದ 30 ಮಕ್ಕಳು ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾಂತರ ಇಲಾಖೆಯಿಂದ ಸಾಧನೆ ಮಾಡಿದ 30 ಜನ ಮಕ್ಕಳೂ ಸೇರಿದಂತೆ ಒಟ್ಟು 60 ಜನ ಮಕ್ಕಳು ಆಯ್ಕೆಯಾಗಿದ್ದಾರೆ.  ಪ್ರವಾಸದ ಆಯ್ಕೆಗೆ ಕೇವಲ ಮಕ್ಕಳ ಸಾಧನೆಯೇ ಮಾನದಂಡವಾಗಿದೆ.  ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.  ಇದರಲ್ಲಿ 30 ಜನ ವಿದ್ಯಾರ್ಥಿಗಳು ಮತ್ತು 30 ಜನ ವಿದ್ಯಾರ್ಥಿನಿಯರು ಇದ್ದಾರೆ.

ಈ ವಿದ್ಯಾರ್ಥಿಗಳು ಪ್ರವಾಸ ಸಂದರ್ಭದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸರಕಾರಿ ಶಾಲೆಯಲ್ಲಿ ಕಲಿತು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಸಂವಾದ ನಡೆಸಲಿದ್ದಾರೆ.  ಅಲ್ಲದೇ, ಈ ಮಕ್ಕಳಿಗೆ ಮೇಟ್ರೋ ರೈಲಿನ ಪ್ರವಾಸವೂ ಇದೆ.  9 ಮತ್ತು 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಓದಿನೆಡೆಗೆ ಒಲವು ಹೆಚ್ಚಿಸಿಕೊಳ್ಳಲು ಈ ಪ್ರವಾಸ ಕಾರ್ಯಕ್ರಮ ಸಹಾಯಕಾರಿಯಾಗಲಿದೆ.

ಭೇಟಿ ನೀಡುವ ಸ್ಥಳಗಳು

ಈ ವಿದ್ಯಾರ್ಥಿಗಳು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.  ಎರಡನೇ ದಿನ ಪ್ರವಾಸದಲ್ಲಿ ಮೆಟ್ರೋ ರೈಲು ಪ್ರಯಾಣ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ನೆಹರು ತಾರಾಲಯ, ವಿಧಾನಸೌಧ ಮತ್ತು ಹೈಕೋರ್ಟ್ ವೀಕ್ಷಣೆ ಮಾಡಿದ್ದಾರೆ.

ಅಧಿಕಾರಿಗಳ ತಂಡ ರಚನೆ

ಶೈಕ್ಷಣಿಕ ಪ್ರವಾಸಕ್ಕಾಗಿ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳ ಮತ್ತು ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಕರು, ಶಿಕ್ಷಕಿಯರನ್ನೊಳಗೊಂಡ ತಂಡ ವಿದ್ಯಾರ್ಥಿಗಳೊಂದಿಗೆ ಪ್ರಯಾಣ ಬೆಳೆಸಿದೆ.

ಗ್ರಾಮೀಣ, ಕನ್ನಡ ಮಾಧ್ಯಮದ ಪ್ರತಿಭಾವಂತ ಮಕ್ಕಳು ಉನ್ನತ ಗುರಿ ರೂಪಿಸಿಕೊಂಡು ಯಶಸ್ವಿ ಆಗಲಿದೆ ಎಂಬ ನಿರೀಕ್ಷೆ ಇದೆ.  ಈಗ 9 ಮತ್ತು 10ನೇ ತರಗತಿಯಲ್ಲಿರುವ ಮಕ್ಕಳಿಗೆ ಪ್ರೇರಣೆ ನೀಡುವಂತೆ ಮಾಡುವುದು ವಿಶೇಷ ಶೈಕ್ಷಣಿಕ ಪ್ರವಾಸದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಯಲ್ಲಮ್ಮ ಪಡೇಸೂರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿರಹಟ್ಟಿಮಠ, ಜಿ. ಪಂ. ಅಧಿಕಾರಿ ನಿಂಗಪ್ಪ ಗೋಠೆ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಮುಂತಾದವರು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌