ಸಚಿವರಾದ ನಂತರ ತವರಿಗೆ ಬಂದ ಎಂ. ಬಿ. ಪಾಟೀಲರಿಗೆ ಅದ್ದೂರಿ ಸ್ವಾಗತ ನೀಡಿದ ಬಸವ ನಾಡಿನ ಜನತೆ

ವಿಜಯಪುರ: ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತವರು ಜಿಲ್ಲೆ ವಿಜಯಪುರಕ್ಕೆ ಆಗಮಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರಿಗೆ ವಿಜಯಪುರ ನಗರದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು.

ನಗರದ ಗುರುಪಾದೇಶ್ವರ ನಗರದಲ್ಲಿರುವ ತೋಂಟದಾರ್ಯ ಶಾಖಾ ಮಠಕ್ಕೆ ಭೇಟಿ ನೀಡಿದ ಅವರು, ಗದಗ-ಡಂಬಳ-ಯಡಿಯೂರು ಮಠದ ಜಗದ್ಗುರುಗಳಾದ ಡಾ. ಸಿದ್ದರಾಮ ಮಹಾಸ್ವಾಮಿಗಳು ಮತ್ತು ವಿಜಯಪುರ ಷಣ್ಮುಖಾರೂಡ ಮಠದ ಶ್ರೀ ಅಭಿನವ ಸಿದ್ದಾರೂಢ ಮಹಾಸ್ವಾಮಿಜಿ ಅವರನ್ನು ಗೌರವಿಸಿ ಆಶೀರ್ವಾದ ಪಡೆದರು.

ಸಚಿವ ಎಂ. ಬಿ. ಪಾಟೀಲ ಅವರಿಗೆ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು

ಬಳಿಕ ನಗರದ ಶಿವಾಜಿ ಚೌಕಗೆ ಆಗಮಿಸಿದ ಸಚಿವ ಎಂ. ಬಿ. ಪಾಟೀಲ ಅವರನ್ನು ಸಾಲಂಕೃತ ತೆರದ ವಾಹನದಲ್ಲಿ ರೋಡ ಶೋ ಮೂಲಕ ಗಾಂಧಿಚೌಕ ಮಾರ್ಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಕರೆ ತರಲಾಯಿತು. ಈ ಸಂದರ್ಭದಲ್ಲಿ ಸಚಿವರು ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಕೈಮುಗಿದು ಧನ್ಯವಾದ ಸಲ್ಲಿಸಿದರು.

ಮೆರವಣಿಗೆ ಮಾರ್ಗದುದ್ದಕ್ಕೂ ಸಚಿವರನ್ನು ಸ್ವಾಗತಿಸಲು ಅಳವಡಿಸಲಾಗಿದ್ದ ಸ್ವಾಗತ ಕಮಾನುಗಳು, ಫ್ಲೆಕ್ಸಗಳು ಗಮನ ಸೆಳೆದವು. ಡಿ.ಜೆ, ಲೇಸರ್ ಲೈಟ್, ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ನಾನಾ ಸಂಗೀತ ವಾದ್ಯಮೇಳಗಳು, ಜನಪದ ಕಲಾ ಗೊಂಬೆಗಳು ಪಾಲ್ಗೊಂಡು ಜನಮನ ಸೂರೆಗೊಂಡವು. ಕೈಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೈಕಾರ, ಹರ್ಷೋದ್ಘಾರ ಹಾಕುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಮೆರವಣಿಗೆಗೆ ಕಳೆ ನೀಡಿದವು. ರೋಡ್ ಶೋ ಸಂದರ್ಭದಲ್ಲಿ ಅಲ್ಲಲ್ಲಿ ಜೆಸಿಬಿಯಲ್ಲಿ ನಿಂತು ಪುಷ್ಪಾರ್ಚಣೆ ಮಾಡುತ್ತ ಬೃಹದಾಕಾರದ ಹೂವಿನ ಹಾರಗಳನ್ನು ಹಾಕಿ, ಪಟಾಕಿ ಸಿಡಿಸಿ, ಅಭಿಮಾನಿಗಳು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಆಗಸದಲ್ಲಿ ಪಟಾಕಿಗಳು ಬಣ್ಣಗಳ ಚಿತ್ತಾರ ಮೂಡಿಸಿದ್ದು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ಬಳಿಕ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಎಂ. ಬಿ. ಪಾಟೀಲ ಅವರು ಶ್ರೀ ಸಿದ್ಧರಾಮೇಶ್ವರನಿಗೆ ನಮನ ಸಲ್ಲಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಶಾಸಕರಾದ ವಿಠ್ಠಲ ಧೋಂಡಿಬಾ ಕಟಕದೊಂಡ, ಅಶೋಕ ಮನಗೂಳಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮುಖಂಡರಾದ ಹಮೀದ ಮುಶ್ರೀಫ್, ಸಂಗಮೇಶ ಬಬಲೇಶ್ವರ, ಸುರೇಶ ಘೋಣಸಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಗೌಡನವರ, ಈರನಗೌಡ ಬಿರಾದಾರ, ವಿ. ಎಸ್. ಪಾಟೀಲ, ಡಾ. ಗಂಗಾಧರ ಸಂಬಣ್ಣಿ, ಜಮೀರ ಬಕ್ಷಿ, ಟಪಾಲ ಇಂಜನೀಯರ್, ಚಾಂದಸಾಬ ಗಡಗಲಾವ, ಬಿ. ಎಚ್. ಮುಂಬಾರೆಡ್ಡಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಮಹಾನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌