40% ಭ್ರಷ್ಟಾಚಾರ, ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಗ್ಯಾರಂಟಿ ಸ್ಕೀಂ ಗಳಿಗೆ ಹಣ ಹೊಂದಿಸುತ್ತೇವೆ- ಎಂ. ಬಿ. ಪಾಟೀಲ

ವಿಜಯಪುರ: 40% ಭ್ರಷ್ಟಾಚಾರಕ್ಕೆ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ.  ನಿರುಪಯುಕ್ತ ಯೋಜನೆಗಳನ್ನು ಕೈಬಿಟ್ಟು ಇತರ ಯೋಜನೆಗಳಿಗೆ ತೊಂದರೆಯಾಗದಂತೆ ಕಾಂಗ್ರೆಸ್ ಗ್ಯಾರಂಟಿ ಸ್ಕೀಂಗಳಿಗೆ ಸಿಎಂ ನೇತೃತ್ವದಲ್ಲಿ ಹಣ ಹೊಂದಿಸುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013- 18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ವಿಜಯಪುರ ಜಿಲ್ಲೆಗೆ ಅಂಟಿದ್ದ ಬರಪೀಡಿತ ಜಿಲ್ಲೆ ಹಣೆಪಟ್ಟಿ ಹೋಗಲಾಡಿಸಲು ಯಶಸ್ವಿಯಾಗಿದ್ದೇನೆ.  ಈಗ ಕೈಗಾರಿಕೆ ಸಚಿವನಾಗಿ ರಾಜ್ಯಾದ್ಯಂತ ಕೈಗಾರಿಕೆ ವಿಕೇಂದ್ರೀಕರಣಕ್ಕೆ ಶ್ರಮಿಸುತ್ತೇನೆ.  ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣವಿದ್ದು, ಅದನ್ನು ಮತ್ತಷ್ಟು ಉದ್ಯಮ ಸ್ನೇಹಿಯಾಗಿ ಪರಿವರ್ತಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.

ನೀರಾವರಿ ಇಲಾಖೆಯಲ್ಲಿ ಮತ್ತೋಮ್ಮೆ ಕೆಲಸ ಮಾಡಲು ಬಯಸಿದ್ದೆ.  ಆದರೆ, ಕಾರಣಾಂತರಗಳಿಂದ ಸಿಎಂ ನನಗೆ ಬೇರೆ ಖಾತೆ ಪಡೆಯಲು ಹೇಳಿದಾಗ ನಾನು ಇಷ್ಟಪಟ್ಟು ಕೈಗಾರಿಕೆ ಖಾತೆ ಪಡೆದಿದ್ದೇನೆ.  ನಾಳೆ‌ ಮದ್ಯಾಹ್ನ 3 ಗಂಟೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಮೀಟಿಂಗ್ ಇದೆ.  ವಿಜಯಪುರ ಜಿಲ್ಲೆ ನೀರಾವರಿ ಹಾಗೂ ಉದ್ಯೋಗದಲ್ಲಿ ಅಭಿವೃದ್ಧಿ ಆಗಬೇಕಿದೆ.  ದೇಶ ಮಾತ್ರವಲ್ಲ, ಇಡಿ ವಿಶ್ವ ನಮ್ಮಕಡೆ ನೋಡುವಂತೆ ಆಗಬೇಕಿದೆ.  ಆ ಗತವೈಭವ ಮತ್ತೆ ಬರಲಿದೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ ಎಂದು ಅವರು ಹೇಳಿದರು.

ಸಚಿವ ಎಂ. ಬಿ. ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

ಐದು ಗ್ಯಾರೆಂಟಿಗಳನ್ನು 15 ‌ದಿನದಲ್ಲಿ ಜಾರಿ ಮಾಡುವ ಮೂಲಕ ಸಿಎಂ ತಮ್ಮ ಭದ್ದತೆ ತೋರಿಸಿದ್ದಾರೆ.  ಹಣದ ಕ್ರೂಢೀಕರಣ ಮಾಡಿ, ಯೋಜನೆಗಳನ್ನು ಯಶಸ್ವಿ ಮಾಡುತ್ತೇವೆ.  40 ಪರ್ಸೆಂಟ್ ಭ್ರಷ್ಟಾಚಾರ, ಅನಗತ್ಯ ಯೋಜನೆಗಳನ್ನು ಕೈಬಿಟ್ಟು, ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಈ ಯೋಜನೆಗಳಿಗೆ ಹಣ ಹೊಂದಿಸುತ್ತೇವೆ.  ಜನಪರ ಬಜೆಟ್ ಮಂಡಿಸುವ ಮೂಲಕ ಅಪಾರ ಅನುಭವ ಹೊಂದಿರುವ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಗ್ಯಾರಂಟಿ ಸ್ಕೀಂ ಗಳ ಜೊತೆಯಲ್ಲಿಯೇ ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಕೊರತೆಯಾಗದಂತೆ ನಿರ್ಹವಣೆ ಮಾಡಲಿದ್ದಾರೆ.  ಬಡವರು, ಎಲ್ಲ ಜಾತಿಗಳಿಗೂ ನ್ಯಾಯ ಸಿಗುವಂತೆ ಮಾಡುತ್ತೇವೆ ಎಂದು ಅವರು ಹೇಳಿದರು.

ಕೈಗಾರಿಕೆಗಳಿಗೆ ಮಾದರಿ ಯೋಜನೆ ರೂಪಿಸಲಾಗುವುದು

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣವಿದೆ.  ಈ ನಿಟ್ಟಿನಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣ ಸೃಷ್ಠಿಸಲು ಪಂಜಾಬ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಇರುವ ಏಕಗವಾಕ್ಷಿ ಯೋಜನೆಗಳ ಅಧ್ಯಯನ ನಡೆಸಲಾಗುವುದು.  ಅಲ್ಲದೇ, ಅವುಗಳಿಗಿಂತಲೂ ಉತ್ತಮವಾದ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಭತಿಳಿಸಿದರು.

ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯ ತರಬೇತಿಗೆ ಕ್ರಮ

ಕೈಗಾರಿಕೆಗಳ ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.  ಕೈಗಾರಿಕೆಗಳಿಗೆ ಅಗತ್ಯವಾಗಿರುವ ಕೌಶಲ್ಯದ ಕುರಿತು ಯುವಕರಿಗೆ ತರಬೇತಿ ನೀಡಲಾಗುವದು.  ಈ ನಿಟ್ಟಿನಲ್ಲಿ ಕೈಗಾರಿಕೆ ಇಲಾಖೆ ಮತ್ತು ಶಿಕ್ಷಣ ಇಲಾಖೆ ಕೈಜೊಡಿಸಲಿವೆ.  ಆಯಾ ಕಾರ್ಖಾನೆಗಳಿಗೆ ಅಗತ್ಯವಾಗಿರುವ ಸಿಬ್ಬಂದಿಗೆ ಅಗತ್ಯವಾಗಿರುವ ಕೌಶಲ್ಯದ ತರಬೇತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೈಗಾರಿಕೆ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಗಳಿಗೆ ಕಡಿವಾಣ

ಇದೇ ವೇಳೆ ಕೈಗಾರಿಕೆಗಳಿಗೆ ಮೀಸಲಾದ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿುವ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೆಂಗಳೂರು ಮಾತ್ರವಲ್ಲ ರಾಜ್ಯಾದ್ಯಂತ ಎಲ್ಲೆಲ್ಲಿ ಇಂಥ ಪ್ರಕರಣಗಳು ವರದಿಯಾಗಿವೆಯೋ ಅಲ್ಲಿ ಪಾರದರ್ಶಕವಾಗಿ ತನಿಖೆ ನಡೆಸುತ್ತೇವೆ.  ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.  ಕೈಗಾರಿಕೆ ಜಾಗಗಳು ಆ ಉದ್ದೇಶಗಳಿಗೆ ಮಾತ್ರ ಬಳಕೆ ಆಗಬೇಕು.  ರಿಯಲ್‌ ಎಸ್ಟೇಟ್ ದಂಧೆ ಮಾಡಲು ಬಿಡುವುದಿಲ್ಲಎಂದು ಸಚಿವರು ತಿಳಿಸಿದರು.

ಅಹಿಂದ ವರ್ಗಗಳ ಬೇಡಿಕೆ ವಿಚಾರ

ಅಹಿಂದ ಸಮುದಾಯ ಇಟ್ಟಿರುವ ನಾಲ್ಕು ಬೇಡಿಕೆಗಳ ಕುರಿತು ಪಕ್ಷ ಮತ್ತು ಸರಕಾರದಲ್ಲಿ ಚರ್ಚೆ ಮಾಡುತ್ತೇವೆ.  ಎಲ್ಲ ಜಾತಿ, ಧರ್ಮಗಳಿಗೂ ರಕ್ಷಣೆ ಕೊಡುವ ಕೆಲಸವನ್ನು ಮಾಡುತ್ತೇವೆ.  ರಾಜಕೀಯ ಲಾಭಕ್ಕಾಗಿ ದ್ವೇಷ ಬಿತ್ತುವ ಕೆಲಸ ಮಾಡಿದರೆ ಅದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ.  ಕಳೆದ ಬಿಜೆಪಿ ಸರಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇಡಿ ರಾಜ್ಯದಲ್ಲಿ ಒಂದೂ ಮನೆ ಕಟ್ಟಿಲ್ಲ.  ಕೇವಲ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದೆ ಎಂದು ಎಂ. ಬಿ. ಪಾಟೀಲ ಆರೋಪಿಸಿದರು.

ಬಿಜೆಪಿ ಸರಕಾರದ ಅವಧಿಯ ಅಕ್ರಮ ತನಿಖೆ

ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸಲಾಗುವುದು.  ಕೊರೊನಾ ಸಂದರ್ಭದಲ್ಲಿ ನಡೆದ ಹಗರಣಗಳು, 40 ಪರ್ಸೆಂಟ್ ಕಮಿಷನ್ ವಿಚಾರ, ನೀರಾವರಿ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ನಡೆದಿರುವ ಹಗರಣಗಳ ತನಿಖೆ ನಡೆಸುತ್ತೇವೆ.  ಕೆಲವು ಯೋಜನೆಗಳಲ್ಲಿ ನಿಗದಿಗಿಂತ ಹೆಚ್ಚು ಅಂದಾಜು ವೆಚ್ಚ ಲೆಕ್ಕಹಾಕಿ ಭ್ರಷ್ಟಾಚಾರ ಮಾಡಲಾಗಿದೆ.  ಈ ಎಲ್ಲ ಹಗರಣಗಳ ತನಿಖೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪಠ್ಯ ಪುಸ್ತಕ ಪರಿಷ್ಕರಣರ ವಿಚಾರ

ಬಿಜೆಪಿಯವರು ಪಠ್ಯಪುಸ್ತಕಗಳಲ್ಲಿ ಆರ್ ಎಸ್ ಎಸ್ ಅಜೆಂಡ್ ಸೇರಿಸಲು ಹೋಗಿದ್ದರು.  ನಂಜೆಗೌಡ-ಉರಿಗೌಡ ಸೇರಿದಂತೆ ವಿವಾದಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿದ್ದರು.  ಆದರೆ, ಅವುಗಳನ್ನು ತೆಗೆದು ಹಾಕಲಾಗವುದು.  ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಬಸವಣ್ಣನವರು, ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣ, ಪುಲೆ, ಅಂಬೇಡ್ಕರ್ ಸೇರಿದಂತೆ ಮಹಾನ ನಾಯಕರ ಸಾಧನೆಗಳ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡಲಾಗವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಕೇಸರಿ ಒಂದು ಪಕ್ಷದ ಆಸ್ತಿಯಲ್ಲ

ಶಾಲಾ ಪಠ್ಯದಲ್ಲಿ ಬಿಜೆಪಿ ಕೇಸರಿಕರಣ ಮಾಡುತ್ತಿದೆ ಎನ್ನುವುದು ತಪ್ಪು.  ಕೇಸರಿ ಎಂದರೆ ಅದು ಬಿಜೆಪಿ ಆಸ್ತಿಯಲ್ಲ, ಕೇಸರಿಯನ್ನು ಅವರಿಗೆ ಬರೆದುಕೊಟ್ಟಿಲ್ಲ.  ಎಲ್ಲ ದೇವಾಲಯಗಳಲ್ಲಿಯೂ ಕೇಸರಿ ಇದೆ.  ಆದರೆ, ಬಿಜೆಪಿ ಕೇಸರಿಕರಣ ಎಂದು ಹೇಳಿ ಪಠ್ಯಪುಸ್ತಕಗಳಲ್ಲಿ ಆರ್‌ ಎಸ್‌ ಎಸ್ ಅಜೆಂಡಾ ಸೇರಿಸಿತ್ತು.  ಇದನ್ನು ನಾವು ವಿರೋಧಿಸಿದ್ದೇವೆ.  ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸಲು, ಕೋಮು ಸೌಹಾರ್ಧತೆಯನ್ನು ಸಾರುವ ವಿಷಯಗಳನ್ನು ಪಠ್ಯದಲ್ಲಿ ಸೇರಿಸುತ್ತೇವೆ ಎಂದು ಅವರು ತಿಳಿಸಿಗರು.

ಮೀಸಲಾತಿ ವಿಚಾರ

ಮೀಸಲಾತಿ ವಿಷಯವಾಗಿ ಬಿಜೆಪಿ ನಾಟಕವಾಡಿದೆ.  ಕೇವಲ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ಏರಿಕೆ ಎಂದು ಬಿಜೆಪಿ ಘೋಷಣೆ ಮಾಡಿದ್ದು ಕೇವಲ ನಾಟಕವಾಗಿದೆ.  ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾಂಗ್ರೆಸ್ ಸರಕಾರ ಬದ್ಧವಾಗಿದ್ದು ಕೂಡಲೇ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದು ಸಚಿವರು ತಿಳಿಸಿದರು.

ಗೋಹತ್ಯೆ ನಿಷೇಧ ರದ್ದು ವಿಚಾರ

ಇದೇ ವೇಳೆ, ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ ಅವರು ಗೋ ಹತ್ಯೆ ನಿಷೇಝ ಕಾಯಿದೆಯನ್ನು ರೈತರಿಗೆ ಅನಕೂಲವಾಗುವಂತೆ ಮಾರ್ಪಾಡು ಮಾಡುವುದಾಗಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು,

ಇದು ಸೂಕ್ಷ್ಮ ವಿಚಾರ.  ಇದನ್ನು‌ ನಮ್ಮ ಪಕ್ಷ ಮತ್ತು ವರಿಷ್ಟರು ನಿರ್ಧಾರ ಮಾಡುತ್ತಾರೆ.  ನಾನು ವೈಯುಕ್ತಿಕವಾಗಿ ಹೇಳಿಕೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಲಿಂಗಾಯಿತ ಸ್ವತಂತ್ರ ಧರ್ಮ ಹೋರಾಟ ವಿಚಾರ

ಹೈದರಾಬಾದಿನಲ್ಲಿ ಲಿಂಗಾಯತ ಸಮಾವೇಶ ನಡೆಯುತ್ತಿರುವ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಲಿಂಗಾಯಿತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ನಡೆಯುತ್ತಿರುವ ಹೋರಾಟ ನಿರಂತರವಾಗಿ ನಡೆಯುತ್ತದೆ.  ನಾವು ಇದಕ್ಕೆ ರಾಜಕೀಯ ಬೆರೆಸಲು ಇಚ್ಚೆ ಪಡೋದಿಲ್ಲ.  ಮಠಾಧೀಶರು ಮತ್ತು ಜನತೆ ಅದರಲ್ಲಿ ಭಾಗವಹಿಸುತ್ತಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಹಮೀದ್ ಮುಶ್ರಿಫ್ ಪರ ನಿಲ್ಲುತ್ತೇವೆ

ಇದೇ ವೇಳೆ, ವಿಜಯಪುರ ನಗರ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಿಫ್ ಅವರ ಸೋಲು ನಮಗೆ ನೋವು ತಂದಿದೆ.  ಅವರನ್ನು ನಾನು ಮತ್ತು ಪಕ್ಷ ಕೈ ಬಿಡುವುದಿಲ್ಲ.  ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ.  ಜಾತಿ ಧ್ರುವೀಕರಣ, ಅಲ್ಪಸಂಖ್ಯಾತರ ಮತದಾನ ಪ್ರಮಾಣ ಕಡಿಮೆಯಾಗಿರುವುದು ಮತ್ತು ಮೇಲಾಗಿ ಸುಮಾರು 17 ಸಾವಿರದಷ್ಟು ಖೋಟ್ಟಿ ಮತದಾರರ ಸೇರ್ಪಡೆ ಈ ಸೋಲಿಗೆ ಕಾರಣವಾಗಿದೆ.  ಈ ನಿಟ್ಟಿನಲ್ಲಿ ಮುಶ್ರಿಫ್ ಅವರ ಪರ ನಿಲ್ಲುತ್ತೇವೆ ಎಂದು ಅವರು ತಿಳಿಸಿದರು.

ಸೂಲಿಬೆಲೆ ತಮ್ಮ ಹಿಂದಿನ ಹೇಳಿಕೆಗಳ ಬಗ್ಗೆ ಗಮನ ಹರಿಸಲಿ

ರಾಜ್ಯ ಕಾಂಗ್ರೆಸ್ ಸರಕಾರವನ್ನು ಟೀಕಿಸಿರುವ ಲೇಖಕ ಸೂಲಿಬೆಲೆ ಅವರು ತಾವು ಈ ಹಿಂದೆ ನೀಡಿರುವ ಹೇಳಿಕೆಗಳನ್ನು ಮತ್ತೋಮ್ಮೆ ನೆನಪಿಸಿಕೊಳ್ಳಬೇಕು.  ಈಗ ಕೋಮು ಭಾವನೆ ಕೆರಳಿಸುವ, ದ್ವೇಷ ಸಾರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೈಲಿಗೆ ಕಳುಹಿಸುತ್ತೇವೆ ಎಂದು ಎಂ. ಬಿ. ಪಾಟೀಲ ಇದೇ ವೇಳೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌