ವಿದ್ಯುತ್ ದರ ಹೆಚ್ಚಳ, ಗೋಹತ್ಯೆ ನಿಷೇಧ ರದ್ದು ಕುರಿತು ಸಚಿವರ ಹೇಳಿಕೆ ಖಂಡಿಸಿ ಬಿಜೆಪಿಯಿಂದ ವಿಜಯಪುರ ನಗರದಲ್ಲಿ ಪ್ರತಿಭಟನೆ

ವಿಜಯಪುರ: ಉಚಿತ ವಿದ್ಯುತ್ ಗ್ಯಾರಂಟಿ ಎನ್ನುವ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಜನತೆಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ನಗರ ಘಟಕದ ಪದಾಧಿಕಾರಿಗಳು ಶ್ರೀ ಸಿದ್ದೇಶ್ವರ ದೇವಾಲಯದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಪಶು ಸಂಗೋಪನೆ ಸಚಿವರು ರಾಜ್ಯದಲ್ಲಿ ವಯಸ್ಸಾದ ಹಸುಗಳನ್ನು ಸಾಕಲು ಕಷ್ಟವಾಗುತ್ತದೆ.  ಆದ್ದರಿಂದ ಗೋ ಹತ್ಯೆ ನಿಷೇಧ ಕಾನೂನನ್ನು ರದ್ದು ಮಾಡಿ ಗೋಹತ್ಯೆಗೆ ಅವಕಾಶ ನೀಡಲಾಗುವುದು ಎಂದು ಹೇಳಿಕೆ ನೀಡಿರುವುದು ಖಂಡನಾರ್ಹ.  ಗೋ ಹತ್ಯೆಗೆ ಅವಕಾಶ ನೀಡಿದರೆ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ.  ನಮ್ಮ ಮನೆಗಳಲ್ಲಿ ವಯಸ್ಸಾದ ತಂದೆ-ತಾಯಿಯನ್ನು ಹೇಗೆ ನಾವು ರಕ್ಷಿಸುತ್ತೇವೆಯೋ ಹಾಗೆಯೇ ವಯಸ್ಸಾದ ಹಸುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ.  ಫ್ರೀ ಎಂದು ಹೇಳಿ ಜನತೆಯನ್ನು ದಾರಿ ತಪ್ಪಿಸಿ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದೆ.  ಇದನ್ನು ಸಾಂಕೇತಿಕವಾಗಿ ನಾನು ಹಣೆಯ ಮೇಲೆ `ಮೂರು ನಾಮ’ ಮತ್ತು ಕೊರಳಲ್ಲಿ `ಸಾಲ’ ಎಂಬ ಸಂದೇಶ ಹಾಕಿಕೊಂಡಿದ್ದೇನೆ ಎಂದು ಹೇಳಿದರು.

ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಕಾಂಗ್ರೆಸ್ ಜನವಿರೋಧಿ ನೀತಿ ಅನುಸರಿಸಿ, ಕಪಟ ನೀತಿಯಲ್ಲಿ ಆಡಳಿತ ನಡೆಸಲು ಮುಂದಾಗಿದೆ.  ಮೊದಲು ಎಲ್ಲರಿಗೂ ಉಚಿತ ವಿದ್ಯುತ್ ಎಂದು ಹೇಳಿ ಈಗ ಅದಕ್ಕೆ ಸಾಕಷ್ಟು ನಿಬಂಧನೆ ವಿಧಿಸಿ ಸಾಕಷ್ಟು ಸಂಖ್ಯೆಯಲ್ಲಿ ಜನತೆ ಈ ಯೋಜನೆಯಿಂದ ವಂಚಿತವಾಗುವ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಗರ ಮಂಡಳ ಅಧ್ಯಕ್ಷ, ಮಹಾನಗರ ಪಾಲಿಕೆ ಸದಸ್ಯ ಮಳುಗೌಡ ಪಾಟೀಲ ಮಾತನಾಡಿ, ಸರಾಸರಿಗಿಂತ 10 ಯುನಿಟ್ ಹೆಚ್ಚು ಉಪಯೋಗಿಸಲು ಅನುಮತಿ ಕೊಡುತ್ತೇವೆ.  ಅದಕ್ಕಿಂತ ಹೆಚ್ಚು ಯುನಿಟ್ ವಿದ್ಯುತ್ ಉಪಯೋಗಿಸಿದರೆ ಅದಕ್ಕೆ ಹಣವನ್ನು ಪಾವತಿಸಬೇಕಾಗುತ್ತದೆ.  100 ಯೂನಿಟ್‍ಗಿಂತ ಹೆಚ್ಚಾದರೂ ಕೂಡ ಹೆಚ್ಚು ಹಣ ಸಂದಾಯ ಮಾಡಬೇಕಾಗುತ್ತದೆ ಎಂದು ಸರಕಾರ ಷರತ್ತು ವಿಧಿಸಿರುವುದು ಜನವಿರೋಧಿ ನೀತಿಯಾಗಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಎಸ್.ಎ. ಪಾಟೀಲ, ವಿಜಯಕುಮಾರ ಕುಡಿಗನೂರ, ಭೀಮಾಶಂಕರ ಹದನೂರ, ಗುರುಲಿಂಗಪ್ಪ ಅಂಗಡಿ, ರಾಹುಲ್ ಜಾಧವ, ರಾಜಶೇಖರ ಮಗಿಮಠ, ಡಾ.ಸುರೇಶ ಬಿರಾದಾರ, ಗುರು ಗಚ್ಚಿನಮಠ, ಸಂದೀಪ ಪಾಟೀಲ, ವಿಜಯ ಜೋಶಿ, ಶಿಲ್ಪಾ ಕುದರಗೊಂಡ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕೋಳಕೂರ, ಬಸವರಾಜ ಬೈಚಬಾಳ, ವಿಠ್ಠಲ ನಡುವಿನಕೇರಿ, ರಾಜೇಶ ತಾವಸೆ, ಸದಾಶಿವ ಬುಟಾಳೆ, ಪರಶುರಾಮ ಹೊಸಪೇಟ, ಕಾಂತು ಶಿಂಧೆ, ವಿಕಾಸ ಪದಕಿ, ಪ್ರವೀಣ ಕೂಡಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌