ಬೆಳೆಗಳಲ್ಲಿ ರೈತರು ಎಂ. ಬಿ. ಪಾಟೀಲರನ್ನು ಕಾಣುತ್ತಿರುವುದಾಗಿ ಹೆಮ್ಮೆಯಿಂದ ಹೇಳುತ್ತಿದ್ದಾರೆ- ಶ್ರೀ ಬಸವಾನಂದ ಸ್ವಾಮೀಜಿ

ವಿಜಯಪುರ: ರೈತರು ಬೆಳೆಯುವ ಬೆಳೆಗಳಲ್ಲಿ ಎಂ. ಬಿ. ಪಾಟೀಲರನ್ನು ಕಾಣುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.  ಇದು ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಕ್ಷೇತ್ರದಲ್ಲಿ ಮಾಡಿರುವ ಜಲಕ್ರಾಂತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದ್ದಾರೆ.

ಜ್ಞಾನಯೋಗಾಶ್ರಮದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರನ್ನು ಆಶೀರ್ವದಿಸಿ ಮಾತನಾಡಿದರು.

ವಿಜಯಪುರ ಜ್ಞಾನಯೋಗಾಶ್ರಮದ ಪ್ರಣವ ಮಂಟಪದಲ್ಲಿ ಸಚಿವ ಎಂ. ಬಿ. ಪಾಟೀಲ ಪೂಜೆ ಸಲ್ಲಿಸಿದರು

ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು 25 ವರ್ಷಗಳ ಹಿಂದೆ ಬಸವ ನಾಡಿನಲ್ಲಿ ನೀರಾವರಿಯಾಗಬೇಕು ಎಂದು ಆಶಯ ಹೊಂದಿದ್ದರು.  ಅದನ್ನು ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಪೂರ್ಣಗೊಳಿಸಿದ್ದಾರೆ.  ಅವರು ಮಾಡಿರುವ ಕೆಲಸ ಅಭೂತಪೂರ್ವವಾಗಿವೆ.  ಅಷ್ಟೇ ಅಲ್ಲ, ಇದನ್ನು ಜಿಲ್ಲೆಯ ರೈತರು ಹೆಮ್ನೆಯಿಂದ ಸ್ಮರಿಸುವಂತೆ ಮಾಡಿದೆ.  ಅವರು ಇನ್ನೋಮ್ಮೆ ಜಲಸಂಪನ್ಮೂಲ ಸಚಿವರಾಗಬೇಕೆಂಬುದು ಜನರ ಬಯಕೆಯಾಗಿತ್ತು.  ಈಗ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾಗಿ ಅವರು ಈ ಭಾಗದಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ.  ಸಚಿವರ ಮುತುವರ್ಜಿಯಿಂದ ಈ ಭಾಗದ ಯುವಕರಿಗೆ ವಿಪುಲ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಬಗ್ಗೆ ಸಚಿವರಿಗೆ ಅಪಾರ ಶ್ರದ್ಧಾ ಭಕ್ತಿ ಇತ್ತು.  ಸ್ವಾಮೀಜಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾಗ ಆಹಾರ ಸೇವನೆ ನಿಲ್ಲಿಸಿದ್ದರು.  ಆಗ, ಶ್ರೀಗಳನ್ನು ಭೇಟಿ ಮಾಡಿದ ಎಂ. ಬಿ. ಪಾಟೀಲರು, ಸ್ವಾಮೀಜಿಗಳಿಗೆ ನಮಗಾಗಿಯಾದರೂ ಸ್ವಲ್ಪ ಪ್ರಸಾದ ಸೇವಿಸಿ ಎಂದು ವಿನಂತಿಸಿದಾಗ ಶ್ರೀಗಳು ಸ್ವಲ್ಪ ಪ್ರಸಾದ ಸ್ವೀಕರಿಸಿದ್ದರು.  ಶ್ರೀಗಳ ಆರೋಗ್ಯ ವಿಚಾರಿಸಲು ಆಗಮಿಸುತ್ತಿದ್ದಾಗ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದರು.  ಶ್ರೀಗಳು ಇಹಲೋಕ ತ್ಯಜಿಸಿದ ಸಂದರ್ಭದಲ್ಲಿ ಸಚಿವರು ಮಾಡಿರು ಕೆಲಸಗಳು ಜನಮನ ತಲುಪಿದೆ.  ಶ್ರೀಗಳ ಮೇಲಿನ ಭಕ್ತಿಗೆ ಅನುಗುಣವಾಗಿ ಅವರು ಕೆಲಸ ಮಾಡಿದ್ದಾರೆ ಎಂದು ಶ್ರೀ ಬಸವಲಿಂಗ ಸ್ವಾಮೀಜಿ ಶ್ಲಾಘಿಸಿದರು.

 

ಶ್ರೀ ಹರ್ಷಾನಂದ ಸ್ವಾಮೀಜಿ ಮಾತನಾಡಿ, ಎಂ. ಬಿ. ಪಾಟೀಲರು ಜ್ಞಾನಯೋಗಾಶ್ರಮದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.  ಭವಿಷ್ಯದಲ್ಲಿ ಅವರು ಇನ್ನೂ ಉನ್ನತ ಸ್ಥಾನಕ್ಕೇರಲಿ.  ಈ ನಾಡಿಗೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಇದಕ್ಕೂ ಮೊದಲು ಎಂ. ಬಿ. ಪಾಟೀಲ ಅವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.  ನಂತರ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರಣವ ಮಂಟಪಕ್ಕೆ ತೆರಳಿ ಹುಣ್ಣಿಮೆ ಅಂಗವಾಗಿ ನಡೆಯುವ ಪಲ್ಲಕ್ಕಿ ಉತ್ಸವ ಮತ್ತು ಪೂಜೆಯಲ್ಲಿ ಪಾಲ್ಗೋಂಡು ನಮನ ಸಲ್ಲಿಸಿದರು.  ಅಲ್ಲದೇ, ಸ್ವಾಮೀಜಿಗಳನ್ನು ಗೌರವಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂಗು ಸಜ್ಜನ, ವಿಠ್ಠಲಗೌಡ ಬಿರಾದಾರ, ವಿ. ಸಿ. ನಾಗಠಾಣ, ಶಿವಾನಂದ ಸಂಖ, ಡಾ. ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌