ವಿಜಯಪುರ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮೊದಲ ಮಹಿಳಾ ಸಿಸ್ಟೋಬಾಲ್ ವಿಶ್ವಕಪ್‍ನಲ್ಲಿ ಭಾರತೀಯ ವನಿತೆಯರ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಈ ತಂಡದಲ್ಲಿದ್ದ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಂಶೋಧನೆ ವಿದ್ಯಾರ್ಥಿನಿ ಶೃತಿ ಟಿ. ಎಸ್. ಅತ್ಯುತ್ತಮ ಪ್ರದರ್ಶನ ತೋರಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮೇ ತಿಂಗಳ ಕೊನೆಯ ವಾರದಲ್ಲಿ ನಡೆದ ಸಿಸ್ಟೋಬಾರ್ ವಿಶ್ವಕಪ್‍ನಲ್ಲಿ ಭಾರತ, ಶ್ರೀಲಂಕಾ ಅರ್ಜೆಂಟೀನಾ, ಬಾಂಗ್ಲಾ, ಭೂತಾನ ಮತ್ತು ಪ್ರಾನ್ಸ್ ದೇಶಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಅಂತಿಮವಾಗಿ ಅರ್ಜೆಂಟೀನಾ ಮಹಿಳೆಯರು ಭಾರತೀಯ ವನಿತೆಯರನ್ನು ಸೋಲಿಸಿ ಮೊದಲ ವಿಶ್ವಕಪ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು.
ರನ್ನರ್ ಅಪ್ ಭಾರತ ತಂಡದಲ್ಲಿ ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಂಶೋಧನೆ ವಿದ್ಯಾರ್ಥಿನಿ ಶೃತಿ ಟಿ. ಎಸ್. ಅತ್ಯುತ್ತಮ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ಕುಲಸಚಿವ ಪ್ರೊ. ಬಿ. ಎಸ್. ನಾವಿ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಸಕ್ಪಾಲ್ ಹೂವಣ್ಣ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.