ಅಧಿಕಾರಿಗಳು ವಿಜಯಪುರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸಬೇಕು- ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ –

ವಿಜಯಪುರ: ಜಿಲ್ಲೆಯ ಮಕ್ಕಳಿಗೆ ಉತ್ಕೃಷ್ಣ, ಗುಣಮಟ್ಟವಾದ ಶಿಕ್ಷಣ, ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯ ಕಾಳಜಿ, ತ್ಯಾಜ್ಯ ನಿರ್ವಹಣೆ, ನಗರದ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸುವಂತೆ ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ ಸೂಚನೆ ನೀಡಿದ್ದಾರೆ. 

ನಗರದ ಜಿ. ಪಂ. ಸಭಾಂಗಣದಲ್ಲಿ ಜಿಲ್ಲೆಯ ನಾನಾ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಕ್ಕಳ ಭವಿಷ್ಯ ರೂಪಿಸುವುದೆಂದರೆ ರಾಷ್ಟ್ರದ ಭವಿಷ್ಯ ರೂಪಿಸಿದಂತೆ. ಮಗುವಿನ ಆರೋಗ್ಯ ಬಹುಮುಖ್ಯವಾಗಿರುತ್ತದೆ. ವಿದ್ಯೆ ನೀಡುವ ಜೊತೆಗೆ ಮಕ್ಕಳ ಆರೋಗ್ಯ ವ್ಯವಸ್ಥೆ ಕುರಿತು ಕಾಳಜಿ ವಹಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತಹ ಶಿಕ್ಷಣ ನೀಡಬೇಕು. ಹೆಮ್ಮರವಾದ ಗುರಿ ಹೊಂದುವಂತೆ ಪ್ರೇರೆಪಿಸಬೇಕು. ಪರಿಧಿ ಹಾಕಿಕೊಳ್ಳದೇ ವಿಸ್ತರಿಸಿಕೊಳ್ಳಬೇಕು. ಉತ್ಕøಷ್ಟ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜಿಲ್ಲೆಯ ಶೈಕ್ಷಣಿಕ ಉನ್ನತಿಗೆ ಶ್ರಮಿಸಬೇಕು ಎಂದು ಅವರು ಸೂಚನೆ ನೀಡಿದರು.

ವಿಜಯಪುರ ಜಿ. ಪಂ. ಸಭಾಂಗಣದಲ್ಲಿ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ ನಾನಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

ಜಿಲ್ಲೆಯ ನಾನಾ ಸರ್ಕಾಕಾರಿ ವಸತಿ ನಿಲಯಗಳಲ್ಲಿ ಸ್ವಚ್ಛತೆ ಶಿಸ್ತುಬದ್ಧವಾಗಿ ಕಾಯ್ದುಕೊಳ್ಳಬೇಕು. ವಸತಿ ನಿಲಯಗಳು ಮತ್ತು ವಸತಿ ಶಾಲೆಗಳು ಮಕ್ಕಳನ್ನು ಆಕರ್ಷಿಸುವಂತಿರಬೇಕು. ಸ್ವಚ್ಛತೆ ಶಿಸ್ತುಬದ್ಧ ರೂಢಿಗತ ಮತ್ತು ಯೋಜನಾಬದ್ಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕು. ಜಿಲ್ಲೆ ಮುಂಬರುವ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಗೈಯ್ಯುವ ನಿಟ್ಟಿನಲ್ಲಿ ಕಲೆ, ಸಾಹಿತ್ಯ ಪಠ್ಯೇತರ ಚಟುವಟಿಕೆಗಳನ್ನ ಕೈಗೊಂಡು ವಸತಿ ಶಾಲೆ, ವಸತಿ ನಿಲಯಗಳಲ್ಲಿ ಮಕ್ಕಳ ಸೃಜನಾತ್ಮಕತೆ ಹುಟ್ಟುಹಾಕಬೇಕು. ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸೃಜನಾತ್ಮಕ ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳುವಂತೆ  ಸಮಾಜ ಕಲ್ಯಾಣ ಹಾಗೂ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸಾರ್ವಜನಿಕ ಸಮಸ್ಯೆಗಳಿಗೆ ತತಕ್ಷಣ ಸ್ಪಂದಿಸಬೇಕು. ಜಿಲ್ಲೆಯ ಎಲ್ಲ ತಾಲೂಕಾ ಆಸ್ಪತ್ರೆಗಳು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಶಿಕ್ಷಣದಂತೆ ಆರೋಗ್ಯ ವ್ಯವಸ್ಥೆಯು ಅತಿ ಮುಖ್ಯವಾಗಿರುವುದರಿಂದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದ ಹಾಗೆ ಉತ್ತಮ ವೈದ್ಯಕೀಯ ವ್ಯವಸ್ಥೆ ಒದಗಿಸಬೇಕು. ವೈದ್ಯರ ಕೊರತೆ ಇರುವ ಬಗ್ಗೆ  ವರದಿ ನೀಡಬೇಕು. ಯಾವುದೇ ಸಮಸ್ಯೆ ಉಲ್ಭಣವಾಗದಂತೆ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು. ಖಾಸಗಿ ಆಸ್ಪತ್ರೆಗಳನ್ನು ಮೀರಿಸುವಂತಹ ವೈದ್ಯಕೀಯ ಸೇವೆ ನೀಡುವುದರ ಮೂಲಕ ಜನರಲ್ಲಿ ಸರ್ಕಾರಿ ಆಸ್ಪತ್ರೆಗಳ ಕುರಿತು ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಬಿ. ಎಸ್. ಪಾಟೀಲ ಹೇಳಿದರು.

ಮುಂದಿನ ಪೀಳಿಗೆಗೆ ಕೆರೆ, ಕಟ್ಟೆ, ಬಾವಿ ಸೇರಿದಂತೆ ಜಲಮೂಲಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಇದರ ಸಂರಕ್ಷಣ ಜೊತೆಗೆ ಒತ್ತುವರಿಯಾಗಂದಂತೆ ಕ್ರಮ ವಹಿಸಬೇಕು. ಅಗತ್ಯವಿದ್ದಲ್ಲಿ ನಿರ್ಮಾಣ ಮಾಡಿಕೊಂಡು ಸುಸಜ್ಜಿತವಾಗಿಟ್ಟುಕೊಳ್ಳಬೇಕು. ಅಗತ್ಯವಿದ್ದೇಡೆ ನೀರು ಸಂರಕ್ಷಣಾ ಮಾಡಿ ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಿ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿನ ಕೆರೆ ಕಟ್ಟೆ ಮತ್ತು ರಾಜ್‍ಕಾಲುವೆ ನಿರ್ವಹಣೆಗೆ ಜೊತೆಗೆ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆಅವರು  ಸೂಚನೆ ನೀಡಿದರು.

ಸ್ವಚ್ಛತೆಗೆ ಆದ್ಯತೆ

ಘನತ್ಯಾಜ್ಯ ವಿಲೇವಾರಿಯಲ್ಲಿ ಜಿಲ್ಲೆ ಮಾದರಿಯಾಗಬೇಕು. ಸಾರ್ವಜನಿಕರಲ್ಲಿ ನಮ್ಮ ನಗರ ಎಂಬ ಭಾವನೆ ಮೂಡಬೇಕು. ಈ ದಿಸೆಯಲ್ಲಿ ಸ್ವಯಂ ಸೇವಕರನ್ನು  ಬಳಸಿಕೊಂಡು ಅಚ್ಚುಕಟ್ಟಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಯಲು ಶೌಚ ಮುಕ್ತ ಗ್ರಾಮಗಳಾಗಬೇಕು. ಅಧಿಕಾರಿಗಳು ಜನರೊಂದಿಗೆ ಬೆರೆತು ಜನರ ಮನವೊಲಿಸುವ ಪ್ರಯತ್ನ ಮಾಡಬೇಕು. ಬಯಲು ಶೌಚ ಪದ್ಧತಿಗೆ ಮುಕ್ತಿ ಹಾಕಬೇಕು. ಪ್ರತಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳನ್ನು ದಾಸ್ತಾನಿಟ್ಟುಕೊಂಡು ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾತನಾಡಿ, ಜಿಲ್ಲೆಯ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಮಿಷನ್ ವಿದ್ಯಾಪುರ ಮೂಲಕ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುತ್ತಿದೆ. ಒನಕೆ ಓಬವ್ವ ಕರಾಟೆ ತರಬೇತಿ,  ಬಿಸಿಎಂ ಹಾಸ್ಟೇಲ್‍ನ ಯಲಗೂರೇಶ ನಾಯಕ ಎಂಬ ವಿದ್ಯಾರ್ಥಿ ಐಎಎಸ್ ರ್ಯಾಂಕ್ ಪಡೆದಿದ್ದು, ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಪ್ರಸಕ್ತ ಸಾಲಿನ ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ 60 ಜನ ವಿದ್ಯಾರ್ಥಿಗಳಿಗೆ ಎರಡು ದಿನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಸುಮಾರು 5580 ಸಿಬ್ಬಂದಿಗಳಿಗೆ ಮಹಿಳಾ  ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ  ಎಫ್ರಾನ್-ಸಮವಸ್ತ್ರಗಳನ್ನು  ವಿತರಿಸುವ ಮೂಲಕ ಶುದ್ಧ, ಸ್ವಚ್ಛ ಆಹಾರ ತಯಾರಿಕೆ ಜೊತೆಗೆ ಶಿಸ್ತುಬದ್ಧತೆ ಪ್ರದರ್ಶನದೊಂದಿಗೆ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆರ್ಥಿಕತೆಯನ್ನು ಸದೃಢಗೊಳಿಸಲು ಪ್ರಯತ್ನಿಸಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕೆಯಲ್ಲಿ ಈ ಬಾರಿ ಜಿಲ್ಲೆ  11ನೇ ರ್ಯಾಂಕ್ ಪಡೆಯುವ ಮೂಲಕ ಶೈಕ್ಷಣಿಕ ಗುಣಮಟ್ಟದ ಸುಧಾರಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ  ಎಂದು ಹೇಳಿದರು.

ಈ ಸಭೆಯಲ್ಲಿ ಲೋಕಾಯುಕ್ತ ಎಸ್. ಪಿ. ಅನಿತಾ ಹದ್ದಣ್ಣವರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಸಂತೋಷ ಕುಂದರ, ಎಎಸ್ಪಿ ಶಂಕರ ಮಾರಿಹಾಳ, ಜಿ. ಪಂ. ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ವಲಯ ಅರಣ್ಯಾಧಿಕಾರಿ ಪ್ರಶಾಂತ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌