ವಿಜಯಪುರ: ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಬ್ರಿಟೀಷರ ವಿರುದ್ಧ ಹೋರಾಡಿದ ಧೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರು ಇಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವತಿಯಿಂದ ಆಯೋಜಿಸಲಾದ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರ ಸಬಲೀಕರಣವಾಗಬೇಕೆಂಬ 12ನೇ ಶತಮಾನದ ಬಸವಾದಿ ಶರಣರ ಆಶಯದಂತೆ ಮಹಿಳೆಯರ ಮುನ್ನಲೆಗೆ ಪೂರಕವಾಗಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯದ ಹವಾನಿಯಂತ್ರಣ ಬಸ್ಸುಗಳನ್ನು ಹೊರತುಪಡಿಸಿ ಶೇ. 94 ರಷ್ಟು ರಾಜ್ಯದ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಇಂದಿನ 21ನೇ ಶತಮಾನದಲ್ಲಿ ಎಲ್ಲ ರಂಗಗಳಲ್ಲೂ ಮಹಿಳೆ ಮುಂಚೂಣಿಯಲ್ಲಿರಲು ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸಹಕಾರಿಯಾಗಲಿದೆ. ಸಮಾಜದಲ್ಲಿ ಮಹಿಳೆಯರ ಬಹುದೊಡ್ಡ ಪಾತ್ರವಿದೆ. ಮಹಿಳೆ ತ್ಯಾಗಜೀವಿ, ಮಹಿಳೆ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ಎಲ್ಲ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕ ಮತ್ತು ಸಮರ್ಥವಾಗಿ ನಿಭಾಯಿಸುವ ಮಹಿಳೆಯರ ಪ್ರತಿಯಾಗಿ ಸಮಾಜ ಹಾಗೂ ಸರಕಾರದ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿದರು.
ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಸಹಕಾರಿಯಾಗುವುದರೊಂದಿಗೆ ಮಹಿಳಾ ಸಬಲೀಕರಣದ ಶರಣರ ಆಶಯದಂತೆ ಸಮಾನತೆಯತ್ತ ನಮ್ಮ ಸರಕಾರ ಹೆಜ್ಜೆ ಇಟ್ಟಿದೆ. ಬ್ರಿಟಿಷರ್ ವಿರುದ್ದ ಹೋರಾಡಿದ ಧೀರ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರನ್ನು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕಿಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ನಾಗಠಾಣ ಕಾಂಗ್ರೆಸ್ ಶಾಸಕ ವಿಠ್ಠಲ ಕಟಕದೊಂಡ ಅವರು ಮಾತನಾಡಿ, ಶಕ್ತಿ ಯೋಜನೆ ಜಾರಿಯಿಂದ ಜನಸಾಮಾನ್ಯ, ಬಡವರಿಗೆ ಅನುಕೂಲ ಒದಗಿಸುವ ಯೋಜನೆಯಾಗಿದೆ. ಮಹಿಳೆಯರ ಅಭ್ಯುದಯಕ್ಕಾಗಿ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದ್ದು ನಮ್ಮ ಸರಕಾರ ನುಡಿದಂತೆ ನಡೆಯುವ ಸರಕಾರವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ. ಈ ಯೋಜನೆಯಡಿ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಮಹಿಳೆಯರು 6 ರಿಂದ 12 ವರ್ಷದ ಬಾಲಕಿಯರು, ಲಿಂಗತ್ವ ಅಲ್ಪಸಂಖ್ಯಾತರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾಗಿದ್ದು, ರಾಜ್ಯದೊಳಗೆ ಯಾವುದೇ ದೂರದ ಮಿತಿ ಇರುವುದಿಲ್ಲ ಎಂದು ಅವರು ಹೇಳಿದರು.
ಟಿಕೆಟ್ ಪಡೆದು ಸಾರಿಗೆ ಬಸ್ಸಿನಲ್ಲಿ ಸಂಚರಿಸಿದ ಸಚಿವರು
ಈ ಕಾರ್ಯಕ್ರಮದ ನಂತರ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸಿಟಿ ಬಸ್ಸಿನಲ್ಲಿ ಕುಳಿತ ಸಚಿವರು ಟಿಕೆಟ್ ಪಡೆದು ಸೆಟ್‍ಲೈಟ್ ಬಸ್ ನಿಲ್ದಾಣದವರೆಗೆ ಸಂಚರಿಸಿ ಬಸ್ ನಿಲ್ದಾಣದಲ್ಲಿರುವ ಮಹಿಳಾ ಪ್ರಯಾಣಿಕರಿಗೆ ಶುಭಕೋರಿದರು. ಅಲ್ಲದೇ, ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಸ್ಪಿ ಎಚ್. ಡಿ. ಆನಂದಕುಮಾರ, ಜಿ. ಪಂ. ಸಿಇಓ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಅಬ್ದುಲ್ ಹಮೀದ್ ಮುಶ್ರಿಫ್, ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಶಹಾಪುರ, ದಿನೇಶ ಹಳ್ಳಿ, ಆಸೀಫ್ ಶಾನವಾಲೆ, ರಾಜು ಚವ್ಹಾಣ, ಮಾಜಿ ಸದಸ್ಯ ಅಬ್ದುಲರಜಾಕ ಹೊರ್ತಿ, ಜಿ. ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ಕೇಂದ್ರ ಕಚೇರಿಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಡಿ. ಕೊಟ್ರಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಎಸ್. ಹಿರೇಮಠ, ನಿಗಮದ ಮಾಂತೇಶ ಕರಾಳೆ, ಜಗನ್ನಾಥ ಜೋಗಣ್ಣವರ, ಜೆ. ಕೆ. ಹುಗ್ಗೆಣ್ಣವರ ಸೇರಿದಂತೆ ಕೆ ಕೆ ಆರ್ ಟಿ ಸಿ ಅಧಿಕಾರಿಗಳು ಉಪಸ್ಥಿತರಿದ್ದರು.