ವಿಜಯಪುರದಲ್ಲಿ ಜೂ. 29 ರಿಂದ ಎರಡು ದಿನ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ- ಡಾ. ಅರ್ಜುನ ಗೊಳಸಂಗಿ

ವಿಜಯಪುರ: ದಲಿತ ಪ್ರಜ್ಞೆಯೊಂದಿಗೆ, ಅಹಿಂದ ಪರಂಪರೆಯಲ್ಲಿ ಶೋಷಿತರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗದುಗಿನ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಬೆಳ್ಳಿ ಸಂಭ್ರಮ ಅಂಗವಾಗಿ ಜೂ. 29 ಮತ್ತು 30 ರಂದು ಎರಡು ದಿನಗಳ ಕಾಲ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಈ ಸಮ್ಮೇಳನ ನಡೆಯಲಿದ್ದು, ಇದನ್ನು ಅರ್ಥಪೂರ್ಣವಾಗಿ, ಪ್ರಬುದ್ಧ ಭಾರತ ನಿರ್ಮಾಣ ಹಾಗೂ ನಮ್ಮ ಸವಿಂಧಾನ ನಮ್ಮ ರಕ್ಷಣೆಯ ಆಶಯದೊಂದಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ, ನಾನಾ ಗೋಷ್ಠಿಗಳು, ಸಂವಾದ, ಬುದ್ಧವಂದನೆ, ಸಮತಾ ಹಾಡುಗಳು, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.  ಪುಸ್ತಕ ಮಳಿಗೆಗಳು, ಚಿತ್ರಕಲೆ ಪ್ರದರ್ಶನ ಕೂಡ ಆಯೋಜಿಸಲಾಗಿದೆ.  ರಾಜ್ಯದ 30 ಜಿಲ್ಲೆಗಳಿಂದ ಚಿಂತಕರು, ದಲಿತ ಲೇಖಕರು, ಪ್ರಗತಿಪರ ಹೋರಾಟಗಾರರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.  ಸಮ್ಮೇಳನಕ್ಕಾಗಿ ಸುಮಾರು ಎರಡು ಸಾವಿರ ಜನರ ಆಗಮನದ ನಿರೀಕ್ಷೆಯಿದೆ.  ನೋಂದಣಿಗೆ ಉಚಿತ ವ್ಯವಸ್ಥೆ ಮಾಡಲಾಗಿದೆ.  ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ರಾಜ್ಯ ಕಾರ್ಯಕಾರಿ ಸಮಿತಿ, ಜಿಲ್ಲಾಧ್ಯಕ್ಷರ ಸಮಿತಿಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ.  ಅಲ್ಲದೇ, ಸಾರ್ವಜನಿಕರು ಸಮ್ಮೇಳನದ ಸರ್ವಾಧ್ಯಕ್ಷರ ಹೆಸರನ್ನು ಸೂಚಿಸಬಹುದಾಗಿದೆ ಎಂದು ಅವರು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯ ಮಾರ್ಗದಲ್ಲಿ ಮುನ್ನಡೆಯುತ್ತಿರುವ ದಲಿತ ಸಾಹಿತ್ಯ ಪರಿಷತ್ ಎಲ್ಲ ಪಂಗಡಗಳನ್ನು ಸೇರಿಸಿಕೊಂಡು, ಸಾಹಿತ್ಯ ಹಾಗೂ ಸಮಾಜವನ್ನು ಒಟ್ಟೊಟ್ಟಿಗೆ ಮುನ್ನಡೆಸಿಕೊಂಡು ಹೋಗುತ್ತಿದೆ.  ದಲಿತ ಸಾಹಿತ್ಯ ಪರಿಷತ್ ಈಗಾಗಲೇ ಒಂಬತ್ತು ಸಮ್ಮೇಳನಗಳನ್ನು ಮಾಡಿದ್ದು, ವಿಜಯಪುರದಲ್ಲಿಯೇ 2008ರಲ್ಲಿ ನಡೆದ ಸಮ್ಮೇಳನದಲ್ಲಿ ಖ್ಯಾತ ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿತ್ತು.  ನಂತರ ಡಾ. ಅರವಿಂದ ಮಾಲಗತ್ತಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ. ಚೆನ್ನಣ್ಣ ವಾಲೀಕಾರ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ಸತ್ಯಾನಂದ ಪಾತ್ರೋಟ, ಡಾ. ಸಮತಾ ದೇಶಮಾನೆ, ಅಲ್ಲಾ ಗರಾಜ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿತ್ತು.  ಪ್ರಸಕ್ತ ಸಮ್ಮೇಳನದ ಸರ್ವಾಧ್ಯಕ್ಷರನ್ನು ಇನ್ನು ಕೆಲ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಡಾ. ಅರ್ಜುನ ಗೊಳಸಂಗಿ ತಿಳಿಸಿದರು.

ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ವೈ. ಎಂ. ಭಜಂತ್ರಿ, ದೊಡ್ಡಣ್ಣ ಭಜಂತ್ರಿ, ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ಪತ್ರಕರ್ತ ಸುಭಾಷ ಹೊದ್ಲುರ, ಡಾ. ಎಚ್. ಬಿ. ಕೋಲಾರ, ಸುಜಾತಾ ಚಲವಾದಿ, ಶ್ರೀನಾಥ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌