ವಿಜಯಪುರ: ಗ್ರಾಮ ಪಂಚಾಯಿತಿಗಳು ಮತ್ತು ಗ್ರಾ. ಪಂ. ಜನಪ್ರತಿನಿಧಿಗಳ ಹಿತ ಕಾಪಾಡಲು ಸದಾ ಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಯಕ್ಕುಂಡಿ ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡ ಮತ್ತು ಅರ್ಜುಣಗಿ ಗ್ರಾಮದಲ್ಲಿ ಎನ್. ಆರ್. ಎಲ್. ಎಂ. ಕಟ್ಟಡ, ಘನತ್ಯಾಜ್ಯ ಘಟಕ ಹಾಗೂ ಗೋದಾಮು ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಜಲ ಜೀವನ ಮಿಶನ್ ಯೋಜನೆ(ಜೆಜೆಎಂ) ಜಾರಿ ಸಂದರ್ಭದಲ್ಲಿ ಸರಕಾರ ಫಲಾನುಭವಿಗಳಿಂದ ವಂತಿಗೆ ಮತ್ತು ಮತ್ತು ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಮೀಸಲು ಹಣದಲ್ಲಿ ಶೇಕಡಾವಾರು ನಿಗದಿ ಮಾಡಿ ಹಣ ಪಡೆಯುವಂತೆ ಸರಕಾರ ಆದೇಶ ನೀಡಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಜೆಜೆಎಂ ಯೋಜನೆಗೆ ಸಂಪೂರ್ಣ ಹಣವನ್ನು ಅಲ್ಲಿನ ರಾಜ್ಯ ಸರಕಾರವೇ ಭರಿಸಿತ್ತು. ಈ ವಿಚಾರವನ್ನು ಪ್ರಸ್ತಾಪಿಸಿ ನಾನು ಈ ಹಿಂದೆ ಸರಕಾರವನ್ನು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದೆ. ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ರಾಜ್ಯಾದ್ಯಂತ ಈ ಯೋಜನೆಯ ಸಂಪೂರ್ಣ ಹಣವನ್ನು ಭರಿಸಿತು. ಈ ವಿಷಯ ಬಹುತೇಕರಿಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಗ್ರಾ. ಪಂ. ಗಳಿಗೆ ನೀಡಲಾದ ಹಣವನ್ನು ಸಂಪೂರ್ಣವಾಗಿ ಆಯಾ ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಸರಕಾರದ ಇತರ ಯೋಜನೆಗಳಿಗೆ ಈ ಹಣವನ್ನು ಹಂಚಿಕೆ ಮಾಡಬಾರದು. ಇದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದೆ. ಗ್ರಾಮ ಪಂಚಾಯಿತಿಗಳು ಇತರ ಗ್ರಾ. ಪಂ. ಗಳಿಗೆ ಮಾದರಿಯಾಗುವಂತೆ ಯೋಜನೆ ರೂಪಿಸಬೇಕು. ಈ ಯೋಜನೆಗಳಿಂದ ಹಣ ಉಳಿತಾಯವಾಗಿ ಆ ಹಣವನ್ನು ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವಂತಾಗಬೇಕು ಎಂದು ಹೇಳಿದ ಅವರು, ಬಿಜ್ಜರಗಿ ಗ್ರಾ. ಪಂ. ಮಾದರಿ ಕೆಲಸವನ್ನು ಉದಾಹರಣೆಯಾಗಿ ನೀಡಿದರು.
ಇಡೀ ಬಿಜ್ಜರಗಿ ಗ್ರಾಮದಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸಿ ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಗ್ರಾಮದಲ್ಲಿ ರಸ್ತೆ ಬದಿ ದೀಪಗಳಿಗೆ ವಿದ್ಯುತ್ ಬಳಸಲಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಸುಮಾರು ರೂ. 10 ರಿಂದ 15 ಸಾವಿರ ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ. ಈ ಹಣವನ್ನು ರಸ್ತೆ, ಚರಂಡಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ. ಇದೇ ಮಾದರಿಯಲ್ಲಿ ಇತರ ಗ್ರಾಮ ಪಂಚಾಯಿತಿಗಳು ಇತರರಿಗೆ ಮಾದರಿಯಾಗುವಂತೆ ಯೋಜನೆಗಳನ್ನು ರೂಪಿಸಿ ಗ್ರಾಮೀಣಾಭಿವೃದ್ಧಿಗೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ವಿಧಾನ ಪರಿಷತ ಸದಸ್ಯರು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರು ಮತ್ತು ಅಧ್ಯಕ್ಷರಿಗೆ ಕೇರಳ ಮಾದರಿಯಲ್ಲಿ ಗೌರವ ಧನ ಹೆಚ್ಚಳ ಮಾಡುವಂತೆ ಸದನದಲ್ಲಿ ಎಂಟು ಬಾರಿ ವಿಷಯ ಪ್ರಸ್ತಾಪಿಸಿದ್ದೇನೆ. ಸದನದ ಹೊರಗೂ ಹೋರಾಟ ಮಾಡಿದ್ದೇನೆ. ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹಿತಕಾಯಲು ಸದಾ ಮುಂಚೂಣಿಯಲ್ಲಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹೆಬ್ಬಾಳಟ್ಟಿ ಶ್ರೀ ಚಂದ್ರಗಿರಿ ಸದಾಶಿವಮಠದ ಶ್ರೀ ಸಿದ್ದಲಿಂಗಯ್ಯ ಮಹಾಸ್ವಾಮಿಗಳು, ಎಡಿ ನರೇಗಾ ಭಾರತಿ ಹಿರೇಮಠ, ಗ್ರಾ. ಪಂ. ಅಧ್ಯಕ್ಷೆ ಲಕ್ಕವ್ವ ಕಾಂಬಳೆ, ಚನ್ನಪ್ಪ ಕೊಪ್ಪದ, ಅಶೋಕ ಕಾಖಂಡಕಿ, ರಮೇಶ ದೇಸಾಯಿ, ಮಲ್ಲಪ್ಪ ಕೆಂಪವಾಡ, ಮುದಕನಗೌಡ ಪಾಟೀಲ, ರಫೀಕ ಸೋನಾರ, ಪಿಡಿಓ ಬಿ. ಎಚ್. ಮುಜಾವರ, ಗ್ರಾ. ಪಂ. ಅಧಿಕಾರಿಗಳು, ಸಿಬ್ಬಂದಿ, ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.