ವಿಜಯಪುರ: ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಕಾರ್ಪೋರೇಟರ್ ಶಿವರುದ್ರ ಬಾಗಲಕೋಟ ನೇತೃತ್ವದಲ್ಲಿ ಸ್ಥಳೀಯರು ನಗರದ ಜೋರಾಪುರ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವರುದ್ರ ಬಾಲಕೋಟ, ನಗರಾದ್ಯಂತ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ಕುಡಿಯಲು ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡುವಂತೆ ಗಾಂಧಿಚೌಕ್ ಪಿ ಎಸ್ ಐ ರಬಕವಿ ಹೇಳಿದಾಗ ಶಿವರುದ್ರ ಬಾಗಲಕೋಟ ಮತ್ತು ಪಿ ಎಸ್ ಐ ನಡುವೆ ಮಾತಿನ ಚಕಮಕಿ ನಡೆಯಿತು. ಪಿ ಎಸ್ ಐ ಮಾತಿಗೆ ಒಪ್ಪದೆ ಸ್ಥಳೀಯರು ರಸ್ತೆ ತಡೆ ಮುಂದುವರೆಸಿದರು. ಬೈಕ್ ಸವಾರರೊಬ್ಬರು ರಸ್ತೆ ದಾಟಿ ಮುನ್ನಡೆಯುವಾಗ ಮಹಿಳೆಯರು ಆ ಬೈಕ್ ನ್ನು ತಡೆದು ನಿಲ್ಲಿಸಿದ ಘಟನೆಯೂ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಬೈಕ್ ಸವಾರ ತೆರಳಲು ಅನುವು ಮಾಡಿಕೊಟ್ಟರು.
ಈ ಮಧ್ಯೆ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಲಮಂಡಳಿ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆಗ, ಸ್ಥಳೀಯರು ಪ್ರತಿಭಟನೆಯನ್ನು ಹಿಂಪಡೆದರು.