ಜೂ. 17, 18 ರಂದು ಬಸವ ನಾಡಿನಲ್ಲಿ ರಾಜ್ಯ ಮಟ್ಟದ 11ನೇ ಕದಳಿ ಮಹಿಳಾ ಸಮಾವೇಶ

ವಿಜಯಪುರ: ಜೂ. 17 ಮತ್ತು 18 ರಂದು ಬಸವ ನಾಡು ವಿಜಯಪುರದಲ್ಲಿ ರಾಜ್ಯ ಮಟ್ಟದ ಕದಳಿ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ನಾಡಿನಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ, ಜಿಲ್ಲಾ ಶರಣ ಸಾಹಿತ್ಯ ಪರಿಷತ, ರಾಜ್ಯ ಮತ್ತು ಜಿಲ್ಲಾ ಕದಳಿ ಮಹಿಳಾ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಗುರು ಸಂಗನಬಸವ ಸಮುದಾಯ ಭವನದಲ್ಲಿ ಈ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಈ ಸಮಾವೇಶವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಾಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಲಿದ್ದಾರೆ.  ಹಿರಿಯ ಸಾಹಿತಿ ಶಶಿಕಲಾ ವಸ್ತ್ರದ ಸಮಾವೇಶದ ಸರ್ವಾಧ್ಯಕ್ಷರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಉದ್ಘಾಟನೆ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಶ್ರೀಕ್ಷೇತ್ರ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಗಳು, ಗದಗ- ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.  ಸಂಸದ ರಮೇಶ ಜಿಗಜಿಣಗಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.  ಸಕ್ಕರೆ, ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಿಳಾ ವಿವಿ ಕುಲಪತಿ ಡಾ. ಬಿ. ಕೆ. ತುಳಸಿಮಾಲಾ ಮುಖ್ಯ ಅತಿಥಿಗಳಾಗಿ ಪಾಲ್ಗೋಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಛಿಯಲ್ಲಿ ಅಪ್ಪಾರಾವ ಅಕ್ಕೋಣಿ ಮಾತನಾಡಿದರು

ಈ ಸಮಾವೇಶದಲ್ಲಿ ಸುಮಾರು 2000 ಮಹಿಳೆಯರು ಪಾಲ್ಗೋಳ್ಳಲಿದ್ದಾರೆ.  ಎರಡು ದಿನ ನಾನಾ ಗೋಷ್ಠಿಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಕದಳಿ ವೇದಿಕೆ ಶರಣ ಸಾಹಿತ್ಯ ಪರಿಷತ ಮಹಿಳಾ ಘಟಕವಾಗಿದ್ದು, ಶರಣರ ತತ್ವಗಳನ್ನು ಮನೆಮನೆಗೆ ತೆರಳಿ ಪ್ರಚಾರ ಮತ್ತು ಪ್ರಸಾರ ಮಾಡುತ್ತಿದೆ.  ಕರ್ನಾಟಕವಷ್ಟೇ ಅಲ್ಲ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ದೆಹಲಿ, ತೆಲಂಗಾಣ ರಾಜ್ಯಗಳಲ್ಲೂ ವೇದಿಕೆಯ ಘಟಕಗಳು ಇವೆ.  ಶರಣರ ಕ್ರಾಂತಿ ಜಗತ್ತಿಗೆ ಮೌಲ್ಯಯುತವಾಗಿದ್ದು, 12ನೇ ಶತಮಾನದಲ್ಲಿ ಶರಣರು ಮಹಿಳೆಯರಿಗೆ ಸಾಮಾಜಿಕ ಮತ್ತು ರಾಜಕೀಯವಾಗಿ ಸಮಾನತೆ ನೀಡಿದ್ದಾರೆ.  ವಿಶ್ವದಲ್ಲಿ ಧರ್ಮ ಲಾಂಛನ ಧರಿಸುವ ಅವಕಾಶ ಇರುವ ಏಕೈಕ ಧರ್ಮ ಶರಣರ ಧರ್ಮವಾಗಿದೆ.  ಮಹಿಳೆಯರಿಗೆ ಪುರುಷರಂತೆಯೇ ಎಲ್ಲ ಧಾರ್ಮಿಕ ಸ್ಥಳಗಳಿಗೆ ತೆರಳುವ ಅವಕಾಶವಿದೆ.  ವೇದಿಕೆಯು ಮಹಿಳೆಯರ ಮೂಲಕ ಶರಣರ ಸಂದೇಶ ಸಾರುವುದರಿಂದ ಇಡೀ ಕುಟುಂಬ ಶರಣರ ತತ್ವಗಳನ್ನು ಅನುಸರಿಸಲು ಸಾಧ್ಯವಾಗಲಿದೆ.  ಈಗಾಗಲೇ 10 ಸಮಾವೇಶಗಳನ್ನು ಮಾಡಲಾಗಿದೆ.  ಸಮ್ಮೇಳನಕ್ಕಾಗಿ 12 ನಾನಾ ಸಮಿತಿ ರಚನೆ ಮಾಡಲಾಗಿದೆ ಎಂದು ಅಪ್ಪಾರಾವ ಅಕ್ಕೋಣೆ ತಿಳಿಸಿದರು.

ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಡಾ. ಉಷಾದೇವಿ ಹಿರೇಮಠ, ಸಾಹಿತಿಗಳಾದ ವಿ. ಸಿ. ನಾಗಠಾಣ, ಡಾ. ವಿ. ಡಿ. ಐಹೊಳ್ಳಿ, ಎಂ. ಐ. ಕುಮಟಗಿ, ಆರ. ಆರ್. ಹಂಚಿನಾಳ, ಕಾಶೀನಾಥ ಅಣ್ಣೆಪ್ಪನವರ, ಪಿ. ಎಸ್. ಹಿರೇಮಠ, ವಿದ್ಯಾವತಿ ಅಂಕಲಗಿ, ಕಮಲಾಕ್ಷಿ ಗೆಜ್ಜಿ, ಶಾರದಾ ಕೊಪ್ಪ, ಭಾರತಿ ಭುಂಯ್ಯಾರ, ವಿದ್ಯಾ ಕೋಟೆಣ್ಣವರ, ನಿಕಟಪೂರ್ವ ಅಧ್ಯಕ್ಷ ಎಂ. ಜಿ. ಯಾದವಾಡ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌