70 ಜನ ಹೊಸಬರಿಗೆ ಟಿಕೆಟ್ ನೀಡಿದ್ದೂ ಸೋಲಿಗೆ ಕಾರಣ- ಈ ನಿರ್ಧಾರ ಮಾಡಿದವರನ್ನು ನೇಣಿಗಾದರೂ ಹಾಕಿ, ಕಾಲನ್ನಾದರೂ ತೆಗೀರಿ- ರಮೇಶ ಜಿಗಜಿಣಗಿ

ವಿಜಯಪುರ: 70 ಜನ ಹೊಸಬರಿಗೆ ಟೆಕೆಟ್ ನೀಡಿದ್ದೂ ಬಿಜೆಪಿ ಸೋಲಿಗೆ ಪ್ರಮುಖ ಕಾರಣ.  ಈ ನಿರ್ಧಾರ ಕೈಗೊಂಡವರನ್ನು ನೇಣಿಗಾದರೂ ಹಾಕಿ ಅಥವಾ ಅವರ ಕಾಲನ್ನಾದರೂ ತೆಗೆಯಿರಿ.  ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕಿಡಿ ಕಾರಿದ್ದಾರೆ.

ವಿಜಯಪುರ ನಗರದ ಹೊರವಲಯದಲ್ಲಿರುವ ಅಲಿಯಾಬಾದ ಗುಡ್‌ ಶೆಡ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

70 ಜನ ಹೊಸಬರಿಗೆ ಟಿಕೆಟ್ ಕೊಡುವ ಅವಶ್ಯಕತೆ ಇರಲಿಲ್ಲ.  ಹೊಸಬರಿಗೆ ಅವಕಾಶ ನೀಡಿಬೇಕು.  ಆದರೆ, ಅದು ಮಿತಿಯಲ್ಲಿರಬೇಕು.  ಈ 70ರಲ್ಲಿ ಎಷ್ಟು ಜನ ಗೆದ್ದಿದ್ದಾರೆ? 10 ಸೀಟುಗಳಲ್ಲಿ ಮಾತ್ರ ಗೆಲುವಾಗಿದೆ.  ಅದರ ಬದಲು 70 ಜನ ಹಳಬರಿಗೆ ಟಿಕೆಟ್ ನೀಡಿದ್ದರೆ ಅವರಲ್ಲಿ ಕನಿಷ್ಠ 35 ಸೀಟುಗಳಲ್ಲಿ ಗೆಲ್ಲಬಹುದಿತ್ತು.  70 ಜನ ಹೊಸಬರಿಗೆ ಟಿಕೆಟ್ ನೀಡಲು ಯಾರು ಸಲಹೆ ಮಾಡಿದ್ದಾರೋ ಅವರಿಗೆ ಬಿಟ್ಟಿದ್ದು, ಅವರನ್ನು ನೇಣಿಗಾದರೂ ಹಾಕಿ ಅಥವಾ ಅವರ ಕಾಲನ್ನಾದರೂ ತೆಗೆಯಿರಿ.  ಅದಕ್ಕೂ ನಮಗೇನೂ ಸಂಬಂಧವಿಲ್ಲ.  ಮಾಜಿ ಸಿಎಂ ಜಗದೀಶ ಶೆಟ್ಟರ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ತಪ್ಪಿಸಿದ್ದು ಕೂಡ ಉತ್ತರ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನೆಡೆಗೆ ಕಾರಣವಾಗಿದೆ ಎಂದು ಸಂಸದರು ಪ್ರತಿಕ್ರಿಯೆ ನೀಡಿದರು.

ಚುನಾವಣೆ ಅಂಡರ್ ಕರೆಂಟ್ ಗ್ರಹಿಸಲಿಲ್ಲ

ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾಕೆ ಸೋಲಾಗಿದೆ ಎಂಬುದು ತಮಗೂ ಗೊತ್ತಿದೆ.  ನಮಗೂ ಗೊತ್ತಿದೆ.  ಕೊನೆ ಘಳಿಗೆವರೆಗೆ ನಮಗಾರಿಗೂ ಅಂಡರ್ ಕರೆಂಟ್ ಗೊತ್ತಾಗಲಿಲ್ಲ.  ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿ ಸ್ಕೀಂ ಗಳೂ ಸೋಲಿಗೆ ಪ್ರಮುಖ ಕಾರಣ.  ಇದು ನಮಗೆ ಗೊತ್ತಾಗಲೇ ಇಲ್ಲ.  ಇಷ್ಟು ವರ್ಷ ರಾಜಕೀಯದಲ್ಲಿರುವ ನನಗೂ ಇದು ಅರ್ಥವಾಗಲಿಲ್ಲ.  ವಿಜಯಪುರ ಜಿಲ್ಲೆಯಲ್ಲಿ ನಾಲ್ಕೈದು ಬಿಜೆಪಿ ಶಾಸಕರು ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವಿತ್ತು.  ಆದರೆ, ಹಾಗಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿಜಯಪುರ ಹೊರವಲಯದ ಅಲಿಯಾಬಾದ ಬಳಿ ಸಂಸದ ರಮೇಶ ಜಿಗಜಿಣಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು

ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ

ಇದೇ ವೇಳೆ, ರಾಜ್ಯ ವಿಧಾನ ಸಭೆ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯ ಸರಕಾರ ಗ್ಯಾರಂಟಿ ಸ್ಕೀಂ ಗಳ ಘೋಷಣೆ ಮಾಡಿದೆ.  ಇದಕ್ಕೂ ಲೋಕಸಭೆ ಚುನಾವಣೆಗೂ ಸಂಬಂಧವಿಲ್ಲ.  ಕಾಂಗ್ರೆಸ್ಸಿನವರು ದೇಶದಲ್ಲಿ ಏನೂ ಮಾಡಲು ಸಾಧ್ಯವಿಲ್ಲ.  ದೇಶವನ್ನೇ ಮಾರಿಕೊಳ್ಳು ಪ್ರಯತ್ನಿಸಿದ್ದಾರೆ.  ಮೋದಿ ಸಾಹೇಬರು ಅಧಿಕಾರದಲ್ಲಿರುವ ಕಾರಣ ದೇಶ ಸುಭದ್ರವಾಗಿದೆ.  ಬೇರೆಯವರ ಕೈಯ್ಯಲ್ಲಿ ದೇಶದ ಭವಿಷ್ಯವಿಲ್ಲ ಎಂದು ಅವರು ತಿಳಿಸಿದರು.

2024ರಲ್ಲೂ ಬಿಜೆಪಿ ಅಧಿಕಾರಕ್ಕೆ, ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ

ಯಾವ ಪಕ್ಷದವರಿದ್ದರೂ ಈ ಸಲವೂ ಮೋದಿಯವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ.  ಬಿಜೆಪಿ ಸರಕಾರ ಖಂಡಿತವಾಗಿಯೂ ಮತ್ತೆ ಅಧಿಕಾರಕ್ಕೆ ಬರಲಿದೆ.  ಮೋದಿಯವರೇ ಈ ದೇಶದ ಪ್ರಧಾನಿಯಾಗುತ್ತಾರೆ ಎಂದು ನಮಗೆ ಶೇ. 100 ರಷ್ಟು ವಿಶ್ವಾಸವಿದೆ.  ರಾಜ್ಯದ ಗ್ಯಾರಂಟಿ ಸ್ಕೀಂ ಗಳು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ.  ಕಳೆದ ಬಾರಿ ಎಲ್ಲ ಪಕ್ಷದವರು ಸೇರಿ ಬಿಜೆಪಿಯನ್ನು ಸೋಲಿಸಲು ಪ್ರಯತ್ನಿಸಿದರು.  ಆದರೆ, 28ರಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು ಎಂದು ರಮೇಶ ಜಿಗಜಿಣಗಿ ತಿಳಿಸಿದರು.

ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಕೊರತೆ ಇದೆ ಆ ಹುಡುಗ ನಾಯಕ, ಆ ಹುಡುಗಿ ನಾಯಕಿಯಾಗಲು ಸಾಧ್ಯವೇ?

ಇದೇ ವೇಳೆ, ರಾಜಕಾರಣದಲ್ಲಿ ಆಶ್ವಾಸನೆ, ಭರವಸೆ ಸಾಮಾನ್ಯ.  ಗ್ಯಾರಂಟಿ ಕಾರ್ಡ್ ರಾಜ್ಯ ಸರಕಾರಕ್ಕೆ ಮಾತ್ರ ಸೀಮಿತ.  ಲೋಕಸಭೆ ಚುನಾವಣೆಗೆ ಇದು ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಕೊರತೆ ಇದೆ.  ಇದರಿಂದ ನಮಗೆ ಹೆಚ್ಚಿನ ಲಾಭವಾಗಲಿದೆ.  ಕಾಂಗ್ರೆಸ್ಸಿನಲ್ಲಿರುವ ಆ ಹುಡುಗ ನಾಯಕನಾ? ಆ ಹುಡುಗಿ ನಾಯಕಿಯಾ? ಖರ್ಗೆಯಂಥವರು ಹಿರಿಯರು.  ಈ ಹಿಂದೆಯೂ ಕೂಡ ದಲಿತರು ದೇಶದ ಪ್ರಧಾನಿಯಾಗಲು ಬಿಟ್ಟಿಲ್ಲ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ರಾಜ್ಯದಲ್ಲಿ ದಲಿತರು ಸಿಎಂ ಆಗುವುದು ಗ್ಯಾರಂಟಿ

ದಲಿತರ ಬಗ್ಗೆ ದೇಶದ ಜನರ ಭಾವನೆ ನಮಗೂ ಗೊತ್ತಿದೆ.  ದಲಿತ ಸಿಎಂ ಬೇಡಿಕೆ ನೂರಕ್ಕೆ 101 ಪರ್ಸೆಂಟ್ ಈಡೇರಲಿದೆ.  ಅದನ್ನು ಯಾರೂ ತಪ್ಪಿಸಲು ಆಗುವುದಿಲ್ಲ.  ನೀವೂ ನೋಡುತ್ತೀರಿ.  ಇದು ತಪ್ಪಲು ಸಾಧ್ಯವಿಲ್ಲ.  ದಲಿತ ಸಿಎಂ ಆಗೆ ಆಗುತ್ತಾರೆ.  ಇನ್ನು ದಲಿತರೆಲ್ಲ ಏಳಲಿದ್ದಾರೆ.  ನಾನು ಬಹಳ ಮಾತನಾಡುವುದು ಬೇಡ ಎಂದು ಅವರು ಹೇಳಿದರು.

ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರ

ರಾಜ್ಯದಲ್ಲಿ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗುತ್ತ ಬಂದರೂ ಬಿಜೆಪಿ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನೂ ಘೋಷಣೆ ಮಾಡದಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಸಾಕಷ್ಟು ಜನ ನಾಯಕರಿದ್ದಾರೆ.  ಪ್ರತಿಪಕ್ಷದ ನಾಯಕನ ಘೋಷಣೆ ಆಗಲಿದೆ.  ನಾನು ಲೋಕಸಭೆ ಸದಸ್ಯ.  ಹೀಗಾಗಿ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ.  ನನಗದೂ ಸಂಬಂಧವೂ ಇಲ್ಲ.  ನಾನು ಶಾಸಕನಾಗಿದ್ದರೆ ಇಂಥವರನ್ನೇ ಮಾಡಿ ಎಂದು ಹೇಳುತ್ತಿದ್ದೆ ಎಂದು ಹೇಳಿದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ ಅವರನ್ನೇ ಮಾಡಲಿ.  ಯಾರು ಬೇಕಾದವರನ್ನೇ ಮಾಡಲಿ ನನ್ನದೇನೂ ಅಭ್ಯಂತರವಿಲ್ಲ ಎಂದು ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು.

Leave a Reply

ಹೊಸ ಪೋಸ್ಟ್‌