ಚಾಮರಾಜನಗರ: ಉಚಿತವಾಗಿ ಪ್ರಯಾಣಿಸಲು ಬಸ್ಸು ಹತ್ತುವಾಗ ಮಹಿಳೆಯರು ಶಕ್ತಿ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಬಸ್ ಬಾಗಿಲು ಮುರಿದು ಕೈಗೆ ಬಂದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ.
ರಾಜ್ಯ ಸರಕಾರ ಬಸ್ಸಿನಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸಲು ಶಕ್ತಿ ಯೋಜನೆ ಘೋಷಿಸಿದ್ದು, ಈಗ ಮಹಿಳೆಯರು ಹೆಚ್ಚು ಪ್ರಯಾಣ ಮತ್ತು ಪ್ರವಾಸ ಆರಂಭಿಸಿದ್ದಾರೆ. ಈ ಯೋಜನೆ ಮಹಿಳೆಯರ ಪಾಲಿಗೆ ವರದಾನವಾಗಿದೆ. ಆದರೆ, ಈ ಯೋಜನೆ ಜಾರಿಯಿಂದಾಗಿ ಪ್ರತಿದಿನ ಒಂದಿಲ್ಲೊಂದು ಪ್ರಸಂಗಗಳು ನಗೆ ಮತ್ತು ಅಚ್ಚರಿ ತರಿಸುತ್ತಿವೆ.
ಇಂಥದ್ದೆ ಒಂದು ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ. ಸೋಮವಾರ ಮಣ್ಣೆತ್ತಿನ ಅಮವಾಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಮಲೆಮಹಾದೇಶ್ವರ ಬೆಟ್ಟಕ್ಕೆ ಮಾದೇಶ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದಾರೆ. ಅದರಲ್ಲೂ ಸ್ತ್ರೀಯರ ದಂಡು ಹೆಚ್ಚು ಕಂಡು ಬಂದಿದೆ. ಕೊಳ್ಳೆಗಾಲದಿಂದ ಮಲೆಮಹಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಮಹಿಳೆಯರು ಹತ್ತುವಾಗ ನಾನು ಮೊದಲು ಹತ್ತಬೇಕು ಎಂಬು ಧಾವಂತದಲ್ಲಿ ನೂಕು ನುಗ್ಗಲು ಉಂಟಾಗಿದೆ. ಪರಿಣಾಮ ಬಸ್ಸಿನ ಬಾಗಿಲು ಕಿತ್ತು ಕೈಗೆ ಬಂದಿದೆ.
ಮಹಿಳೆಯರು ಮುರಿದು ಹಾಕಿದ ಬಸ್ಸಿನ ಬಾಗಿಲು ಕಂಡಕ್ಟರ್ ಗೆ ಸಂಕಷ್ಟ ತಂದೊಡ್ಡಿದೆ. ಅಲ್ಲದೇ, ಅಲ್ಲಿ ನೆರೆದಿದ್ದ ಜನರೂ ಗಾಬರಿಯಾಗಿ ನೋಡುಂತಾಗಿದೆ. ಬಸ್ಸಿಗೆ ಹಾನಿಯಾದರೆ ಅದರ ಖರ್ಚನ್ನು ಆ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಭರಿಸಬೇಕಿದೆ. ಈ ಘಟನೆಯಿಂದ ಗಾಬರಿಯಾದ ಬಸ್ ಕಂಡಕ್ಟರ್ ಬಾಗಿಲನ್ನು ಕೈಯಲ್ಲಿ ಹಿಡಿದು ಪೆಚ್ಚುಮೊರೆ ಹಾಕಿಕೊಂಡು ನಿಂತಿದ್ದು, ಆತನ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ಸಮಾಧಾನದಿಂದ ವರ್ತಿಸಿದರೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯನ್ನು ತಡೆಗಟ್ಟಬಹುದಾಗಿದೆ. ಧಾವಂತದ ಬದಲು ನಿಧಾನವೇ ಪ್ರಧಾನವಾದರೆ, ಜೀವನ ಸುಗಮವಾಗಲಿದೆ.