ವಿಜಯಪುರ: ಕಳೆದ ಎರಡ್ಮೂರು ವರ್ಷಗಳಿಂದ ಕೊರೊನಾದಿಂದಾಗಿ ಕಳೆಗುಂದಿದ್ದ ಕಾರಹುಣ್ಣಿಮೆ ಈ ಬಾರಿ ಗತವೈಭವಕ್ಕೆ ಮರಳಿತ್ತು. ಅದೇ ರೀತಿ ಈಗ ಮಣ್ಣೆತ್ತಿನ ಅಮವಾಸ್ಯೆಗೂ ಮತ್ತೆ ಹಳೆಯ ಕಳೆ ಬಂದಿದೆ.
ಉತ್ತರ ಕರ್ನಾಟಕ ಅದರಲ್ಲೂ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ಎತ್ತುಗಳೆಂದರೆ ಕುಟುಂಬ ಸದಸ್ಯರಿದ್ದಂತೆ. ಅವುಗಳ ಬಗ್ಗೆ ರೈತರಿಗೆ ಇರುವ ಪ್ರೀತಿ, ವಿಶ್ವಾಸ ವರ್ಣಿಸಲು ಸಾಧ್ಯವಿಲ್ಲ. ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ಬರುವ ಮಣ್ಣೆತ್ತಿನ ಅಮವಾಸ್ಯೆ ದಿನ ರೈತರು ಎತ್ತುಗಳ ಪೂಜೆ ಮಾಡುತ್ತಾರೆ. ಮಣ್ಣೆತ್ತಿನ ಅಮವಾಸ್ಯೆ ದಿನ ಎತ್ತುಗಳು ಇಲ್ಲದವರು ಮಣ್ಣಿನಿಂದ ಮಾಡಿರುವ ಜೋಡೆತ್ತುಗಳಿಗೆ ಪೂಜೆ ಮಾಡುತ್ತಾರೆ.
ರೈತರು ಜೋಡೆತ್ತಿಗೆ ವಿಶೇಷ ಪೂಜೆ ಮಾಡಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುವುದು ಸಂಪ್ರದಾಯವಾಗಿದೆ. ಉತ್ತರ ಕರ್ನಾಟಕ ರೈತರ ಪಾಲಿಗೆ ಮಣ್ಣೆತ್ತಿನ ಅಮಾವಾಸ್ಯೆ ಎಂದರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
ಈ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಮಣ್ಣೆತ್ತುಗಳಿಗೆ ಮತ್ತೆ ಬೇಡಿಕೆ ಬಂದಿದೆ. ಈ ಮಣ್ಣೆತ್ತುಗಳನ್ನು ತಲೆತಲಾಂತರಗಳಿಂದ ತಯಾರಿಸುತ್ತ ಬಂದಿರುವ ಕುಟುಂಬಗಳಿಗೆ ಈಗ ಕೈತುಂಬ ಕೆಲಸ ತಂದಿದೆ. ಇಲ್ಲಿನ ಕಾಳೆ ಮತ್ತು ಕಾಸುಂದೆ ಕುಟುಂಬಗಳು ಮಣ್ಣೆತ್ತಿನ ಮೂರ್ತಿ ತಯಾರಿಸುವಲ್ಲಿ ವ್ಯಸ್ತರಾಗಿದ್ದಾರೆ. ಜನರು ಮಣ್ಣಿನಿಂದ ತಯಾರಿಸಲಾದ ಜೋಡೆತ್ತುಗಳ ಮೂರ್ತಿಯನ್ನು ಮನೆಯ ದೇವರ ಜಗಲಿಯ ಮೇಲೆ ಪ್ರತಿಷ್ಠಾಪನೆ ಮಾಡಿ, ಪೂಜಿಸಿ ಪ್ರಾರ್ಥಿನೆ ಸಲ್ಲಿಸುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳೆಲ್ಲರೂ ಸೇರಿ ಚಿಕ್ಕದೊಂದು ಬುಟ್ಟಿಯಲ್ಲಿ ಮಣ್ಣಿನ ಎತ್ತುಗಳನ್ನು ಹಿಡಿದುಕೊಂಡು ಗ್ರಾಮದಲ್ಲಿನ ಮನೆ ಮನೆಗೆ ಹೋಗಿ ಆರತಿ ಮಾಡಿಸಿಕೊಳ್ಳುವ ಸಂಪ್ರದಾಯೂ ಇದೆ. ಈ ಸಂದರ್ಭದಲ್ಲಿ ಮಹಿಳೆಯರು ಜೋಡೆತ್ತುಗಳಿಗೆ ಆರತಿ ಮಾಡಿ ದವಸ, ಧಾನ್ಯಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇಂದಿಗೂ ಜಾರಿಯ.ಲ್ಲಿದೆ.
ಮಣ್ಣೆತ್ತುಗಳನ್ನು ತಯಾರಿಸುವಲ್ಲಿ ನಿರತವಾಗಿರುವ ಯುವಕ ಗಜಾನನ ಕಾಳೆ ಮಾತನಾಡಿ, ನಮ್ಮ ಪೂರ್ವಜರಿಂದಲೂ ಹಿಂದೂ ಸಂಪ್ರದಾಯದಂತೆ ಮಣ್ಣಿನ ಮೂರ್ತಿಗಳನ್ನು ಮಾಡುತ್ತಿದ್ದೇವೆ. ಗಣೇಶ ವಿಗ್ರಹ, ಎತ್ತುಗಳು, ದೇವಿ ಮೂರ್ತಿಗಳನ್ನು ಮಾಡುತ್ತಿದ್ದೇವೆ. ಐದು ತಲೆಮಾರುಗಳಿಂದ ಈ ಕಲೆ ಉಳಿಸಿಕೊಂಡು ಬಂದಿದ್ದೇವೆ. ಸಾರ್ವಜನಿಕರಿಂದ ಸಾಕಷ್ಟು ಬೇಡಿಕೆ ಇದೆ. ಬೇರೆ ಬೇರೆ ರೀತಿಯ ಎತ್ತುಗಳ ಬೇಡಿಕೆ ಇದೆ. ನಮ್ಮದು ರೈತರ ನಾಡು. ಅದಕ್ಕಾಗಿ ಪ್ರತಿಯೊಬ್ಬರು ಹೆಮ್ಮೆಯಿಂದ ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ. ಈಗ ಮುಂಚೆಯಂತೆ ಆಕಳು, ಎತ್ತುಗಳ ಸಾಕಣೆ ಕಡಿಮೆಯಾಗಿದೆ. ಹೀಗಾಗಿ ನಗರ ಪ್ರದೇಶಗಳ ಜನತೆ ಮನೆಯಲ್ಲಿ ಮಣ್ಣಿನ ಮೂರ್ತಿಗಳನ್ನು ಖರೀದಿಸಿ ಪೂಜೆ ಮಾಡುವುದು ಗಮನಾರ್ಹವಾಗಿದೆ ಎನ್ನುತ್ತಾರೆ.