30 ವರ್ಷದ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಮೂತ್ರ ಪಿಂಡದ ಯಶಸ್ವಿ ಕಸಿ ಮಾಡಿದ ವೈದ್ಯರು- ವಿಶ್ವದಲ್ಲಿಯೇ ಅತೀ ಅಪರೂಪದ ಪ್ರಕರಣ

ಬೆಂಗಳೂರು: ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡಗಳನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ರೋಬೋಟಿಕ್‌ ಎನ್‌-ಬ್ಲಾಕ್‌ ವಿಧಾನದ ಮೂಲಕ ವೈದ್ಯರು ಕಸಿ  ಮಾಡುವಲ್ಲಿ ಯಶಸ್ವಿಯಾದ ವಿಶ್ವದಲ್ಲಿಯೇ ಅತೀ ಅಪರೂಪದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.   

ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಮೋಹನ್ ಕೇಶವಮೂರ್ತಿ, ಡಾ. ಶ್ರೀಹರ್ಷ ಹರಿನಾಥ ಅವರನ್ನೊಳಗೊಂಡ ತಜ್ಞವೈದ್ಯರ ತಂಡ ಈ ಅಪರೂಪದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿ ಗಮನ ಸಳೆದಿದೆ.

ಈ ಕುರಿತು ಮಾತನಾಡಿದ ಡಾ. ಕೇಶವಮೂರ್ತಿ, 30 ವರ್ಷದ ವ್ಯಕ್ತಿಯು ದೀರ್ಘಕಾಲದಿಂದ ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾಗಿ, ಹಿಮೋಡಯಾಲಿಸಿಸ್‌ ಮಾಡಿಕೊಳ್ಳುತ್ತಿದ್ದರು.  ಇವರಿಗೆ ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾಗಿತ್ತು.  ಈ ಮಧ್ಯೆ, 13 ತಿಂಗಳ ಮಗುವೊಂದು ಉಸಿರುಗಟ್ಟಿ ಸಾವಪ್ಪಿದ್ದರಿಂದ ಅವರ ಪೋಷಕರ ಒಪ್ಪಿಗೆ ಮೇರೆಗೆ ಆ ಸಣ್ಣ ಮಗುವಿನ ಕಿಡ್ನಿಯನ್ನು ದಾನವಾಗಿ ಪಡೆಯಲಾಯಿತು.  ಈ ಮಗು ಕೇವಲ 7.30 ಕೆಜಿ ತೂಕ ಹೊಂದಿತ್ತು. 30 ವರ್ಷದ ಈ ವ್ಯಕ್ತಿ 50 ಕೆಜಿ ತೂಕ ಹೊಂದಿದ್ದರು.  ಹೀಗಾಗಿ ಈ ಕಿಡ್ನಿ ಕಸಿ ಮಾಡುವುದು ವೈದ್ಯರಿಗೆ ಸವಾಲಾಗಿತ್ತು.  ಆದರೆ, ಈ ಸವಾಲಾಗಿ ಸ್ವೀಕರಿಸಿದ ವೈದ್ಯರು ರೋಬೋಟಿಕ್ ಎನ್-ಬ್ಲಾಕ್ ಮೂಲಕ ಕಿಡ್ನಿಯನ್ನು ಕಸಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ರೋಬೋಟಿಕ್‌ ಎನ್‌-ಬ್ಲಾಕ್‌ ನವೀನ ತಂತ್ರಜ್ಞಾನ ಕಸಿ ಮಾಡಿದ ಮೂತ್ರಪಿಂಡಗಳನ್ನು ಸ್ವೀಕರಿಸುವವರ ದೇಹದ ತೂಕಕ್ಕೆ ಅನುಗುಣವಾಗಿ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.  ಸುಮಾರು ನಾಲ್ಕು ಗಂಟೆಗಳಷ್ಟು ಸುದೀರ್ಘವಾಗಿ ಈ ಶಸ್ತ್ರಚಿಕಿತ್ಸೆ ನಡೆಯಿತು.  ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ, ರೋಗಿಯನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ, ಆರೈಕೆ ಮಾಡಲಾಯಿತು.  12 ದಿನಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ವಿವರಣೆ ನೀಡಿದರು.

ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ಮೂತ್ರಪಿಂಡ ಕಸಿಯಲ್ಲಿ ರೋಬೋಟಿಕ್‌ ಅಳವಡಿಕೆಯಿಂದ ಯಾವುದೇ ಕಷ್ಟಕರ ಶಸ್ತ್ರಚಿಕಿತ್ಸೆಯಾದರೂ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ.  ಅದರಲ್ಲೂ ಸಣ್ಣ ಮಗುವಿನ ಕಿಡ್ನಿಯನ್ನು ದೊಡ್ಡವರಿಗೆ ಅಳವಡಿಸುವುದು ಒಂದು ಸವಾಲಾಗಿತ್ತು.  ಈ ವಿನೂತನ ಪ್ರಯತ್ನವನ್ನು ನಮ್ಮ ವೈದ್ಯರ ತಂಡ ಇರುವ ನೂತನ ಟೆಕ್ನಾಲಜಿ ಬಳಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ್ದಾರೆ.  ಈ ಮೂಲಕ ಇದು ವಿಶ್ವದಲ್ಲಿಯೇ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಹೇಳಿದರು.

Leave a Reply

ಹೊಸ ಪೋಸ್ಟ್‌