ವಿಜಯಪುರ: ಗೋವುಗಳ ಗಣತಿ ನಡೆಯಬೇಕು. ಯಾವ ಆರ್ ಎಸ್ ಎಸ್ ನಾಯಕರು ಗೋವುಗಳನ್ನು ಪೋಷಿಸುತ್ತಿದ್ದಾರೆ? ಗೋವುಗಳನ್ನು ಹೇಗೆ ಸಾಕುತ್ತಿದ್ದಾರೆ ಎಂಬ ಬಗ್ಗೆಯೂ ಗಣತಿ ನಡೆಯಬೇಕು ಎಂದು ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನಿಜವಾಗಿಯೂ ಗೋವುಗಳಿಗೆ ಕಾಳಜಿ ಇದ್ದರೆ ಕೂಡಲೇ ಗೋಮುಕ್ತಿ ಕಾನೂನು ಜಾರಿಗೊಳಿಸಿ ಅನುಷ್ಠಾನಗೊಳಿಸಬೇಕು. ಗೋವುಗಳ ರಕ್ಷಣೆ ಬಗ್ಗೆ ಮಾತನಾಡುವ ಅನೇಕರು ಕೋವಿಡ್ ಸಂದರ್ಭದಲ್ಲಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆ ಮಾಡಲಿಲ್ಲ. ಗೋವುಗಳನ್ನು ಸಾಕಲು ಬಾರದವರು, ಗೋವುಗಳನ್ನು ಪೋಷಿಸದವರು ಗೋವುಗಳ ರಕ್ಷಣೆ ಕುರಿತು ಮಾತನಾಡುತ್ತಿದ್ದಾರೆ. ಕೇವಲ ಗೋವನ್ನು ರಾಜಕೀಯವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಲದ್ದಿ ಜೀವಿಗಳು ರಚಿಸಿದ ಪಠ್ಯಕ್ರಮವನ್ನು ಬುದ್ದಿಜೀವಿಗಳ ಸಲಹೆ ಪಡೆದು ಬದಲಾವಣೆ
ರಾಜ್ಯ ಬಿಜೆಪಿ ಸರಕಾರ ಲದ್ದಿಜೀವಿಗಳ ಮೂಲಕ ರಚಿಸಿದ ಪಠ್ಯಕ್ರಮವನ್ನು ಈಗಿನ ಕಾಂಗ್ರೆಸ್ ಸರಕಾರ ಬುದ್ದಿಜೀವಿಗಳ ಮೂಲಕ ತಿದ್ದುಪಡಿ ಮಾಡುವ ಕೆಲಸ ಮಾಡುತ್ತಿದೆ ಎಂದು ಎಸ್. ಎಂ. ಪಾಟೀಲ ಗಣಿಹಾರ ಸ್ಪಷ್ಟಪಡಿಸಿದರು.
ಲದ್ದಿ ಜೀವಿಗಳ ಮೂಲಕ ಬಿಜೆಪಿ ಸರಕಾರ ರೂಪಿಸಿರುವ ಪಠ್ಯಕ್ರಮವನ್ನು ಈಗ ಕಾಂಗ್ರೆಸ್ ಸರಕಾರ ಬುದ್ಧಿಜೀವಿಗಳ ಮೂಲಕ ತಿದ್ದುವ ಕೆಲಸ ಮಾಡುತ್ತಿದೆ. ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಹಣ ಖರ್ಚು ಮಾಡಿ ಪಠ್ಯಕ್ರಮ ರೂಪಿಸಿದೆ. ಇದನ್ನು ಬಿಜೆಪಿ ಮರೆತಂತದೆ. ಪಠ್ಯಕ್ರಮ ರೂಪಿಸಲು ಶಾಶ್ವತವಾದ ಆಯೋಗವನ್ನು ರಚಿಸುವ ಮೂಲಕ ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳ ಹಿತ ಕಾಪಾಡಲು ಮುಂದಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರು ಆರ್ ಎಸ್ ಎಸ್ ಕನ್ನಡಕ ಧರಿಸಿ ರಚಿಸಿದ ಪಠ್ಯವನ್ನು ತೆಗೆದು ಹಾಕಲಾಗಿದೆ. ಭಗತಸಿಂಗ್ ಇಡೀ ದೇಶದ ಆಸ್ತಿ. ಪ್ರೊ. ಬರಗೂರ ರಾಮಚಂದ್ರಪ್ಪ ಅವರ ಅನುಭವ ಪ್ರಶ್ನೆ ಮಾಡುವ ಬಿಜೆಪಿಗರು ರೋಹಿತ್ ಚಕ್ರತೀರ್ಥ ಅವರ ಶೈಕ್ಷಣಿಕ ಹಿನ್ನೆಲೆ ಏನು ಎಂದು ಅವರು ಪ್ರಶ್ನಿಸಿದರು.
ಹಿಟ್ಲರ್ ಮೀರಿಸುವ ಆಡಳಿತ ನಡೆಯುತ್ತಿದೆ
ಕೇಂದ್ರದಲ್ಲಿ ಬಿಜೆಪಿ ಸರಕಾರ ಇಂದು ಸರ್ವಾಧಿಕಾರಿ ಹಿಟ್ಲರ್ ನ್ನು ಮೀರಿಸುವ ರೀತಿಯಲ್ಲಿ ಅಧಿಕಾರ ನಡೆಸುತ್ತಿದೆ. ರಾಜ್ಯ ಬಿಜೆಪಿ ಮುಖಂಡರೂ ಇದಕ್ಕೆ ಹೊರತಾಗಿಲ್ಲ ಎಂದು ಅವರು ಕಿಡಿ ಕಾರಿದರು.
ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕಾ ಖರ್ಗೆ ಅವರ ಶೈಕ್ಷಣಿಕ ಹಿನ್ನೆಲೆ ಪ್ರಶ್ನೆ ಮಾಡುವ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಏನು? ಎಂಬುದನ್ನು ಬಹಿರಂಗ ಪಡಿಸಬೇಕು. ಪ್ರಧಾನಿಯವರ ಶೈಕ್ಷಣಿಕ ಮಾಹಿತಿ ತಿಳಿದುಕೊಳ್ಳುವುದನ್ನೂ ದಮನ ಮಾಡುವ ಕೆಲಸ ನಡೆಯುತ್ತಿದೆ. ಈಗಾಗಲೇ ಪ್ರಿಯಾಂಕಾ ಖರ್ಗೆ ಅವರು ತಮ್ಮ ಅಫಿಡೆವೆಟ್‌ನಲ್ಲಿ ಎಲ್ಲ ವಿವರ ನೀಡಿದ್ದಾರೆ. ಆದರೆ, ಮೋದಿ ಅವರು ಏಕೆ ತಮ್ಮ ವಿದ್ಯಾರ್ಹತೆ ಬಗ್ಗೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಲವ್ ಜಿಹಾದ್ ಪ್ರಕರಣಗಳು ದೇಶದಲ್ಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜಾತಿ ನೋಡಿ ಪ್ರೀತಿಯಾಗುವುದಿಲ್ಲ. ವಿನಾಕಾರಣ ಲವ್ ಜಿಹಾದ್ ವಿವಾದ ಸೃಷ್ಟಿಸಲಾಗುತ್ತಿದೆ. ಪ್ರೀತಿಗೆ ಜಾತಿ, ಧರ್ಮದ ಮಿತಿ ಇಲ್ಲ. ಬಿಜೆಪಿಯವರಿಗ ಮಾಡಲು ಏನೂ ಕೆಲಸವಿಲ್ಲ. ಗ್ಯಾರಂಟಿ, ಅಕ್ಕಿ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿಯೇ ವಿದ್ಯುತ್ ಬೆಲೆ ಏರಿಕೆಯಾಗಿತ್ತು. ವಿದ್ಯುತ್ ನಿಯಂತ್ರಣ ಆಯೋಗದ ಬೆಲೆ ಏರಿಕೆ ಮಾಡಿದೆ. ಅದರಲ್ಲಿ ಸರಕಾರದ ಪಾತ್ರ ಎಳ್ಳಷ್ಟೂ ಇಲ್ಲ. ಉಚಿತ ವಿದ್ಯುತ್ತಿಗೂ ಅದಕ್ಕೂ ಸಂಬಂಧವಿಲ್ಲ. ಆದರೂ ಬಾಡಿಗೆ ಜನರನ್ನು ಬಳಸಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಸ್. ಎಂ. ಪಾಟೀಲ ಗಣಿಹಾರ ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನಾಗರಾಜ ಲಂಬು, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.