ವಿಜಯಪುರ: ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನೀಡುವ ಅಕ್ಕಿ ಪ್ರಮಾಣ ಮತ್ತು ಇದರಲ್ಲಿ ರಾಜ್ಯ ಸರಕಾರದ ಪಾತ್ರವನ್ನು ಮುಖ್ಯಮಂತ್ರಿ ಎಸ್. ಸಿದ್ಧಾರಮಯ್ಯ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಆಗ್ರಹಿಸಿ್ದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾತ್ರವನ್ನು ಸ್ಪಷ್ಟವಾಗಿ ಜನರ ಮುಂದೆ ಹೇಳುವ ಮೂಲಕ ಜನರಲ್ಲಿರುವ ಗೊಂದಲವನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಕ್ಕಿ ವಿಷಯವಾಗಿ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ರಾಜ್ಯ ಸರಕಾರ ಜನರ ದಿಕ್ಕು ತಪ್ಪಿಸುತ್ತಿದೆ. ಇದರಿಂದಾಗಿ ಜನರು ರೋಸಿ ಹೋಗಿದ್ದಾರೆ. ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಸ್ಪಷ್ಟವಾಗಿ ಜನರ ಮುಂದೆ ವಿವರಿಸಬೇಕು. ಕೇಂದ್ರ ಸರಕಾರದಿಂದ ಪಡೆದುಕೊಳ್ಳುವ 5 ಕೆಜಿ ಸೇರಿಸಿ 10 ಕೆಜಿ ಅಕ್ಕಿ ನೀಡುತ್ತಿರೋ ಅಥವಾ ಅದನ್ನು ಸೇರಿ 15 ಕೆಜಿ ಅಕ್ಕಿ ನೀಡುತ್ತಿರೋ ಎಂಬುದನ್ನು ಸ್ಪಷ್ಟವಾಗಿ ಜನರ ಮುಂದೆ ವಿವರಿಸಬೇಕು. ಕೇಂದ್ರ ಸರಕಾರದ ಸಹಭಾಗಿತ್ವವನ್ನು ಒಪ್ಪಿಕೊಳ್ಳಬೇಕು ಎಂದು ರಮೇಶ ಜಿಗಜಿಣಗಿ ಆಗ್ರಹಿಸಿದ್ದಾರೆ.