ಜೀವನದಲ್ಲಿ ಯೋಗ ರೂಢಿಸಿಕೊಂಡು ಸದೃಢ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕು- ಸಂಸದ ರಮೇಶ ಜಿಗಜಿಣಗಿ ಕರೆ

ವಿಜಯಪುರ: ದೇಶದ ಋಷಿ ಮುನಿಗಳಿಂದ ಕೊಡುಗೆಯಾಗಿ ಬಂದ  ಬಹು ಪುರಾತನವಾದ ಯೋಗವನ್ನು ಪ್ರತಿಯೊಬ್ಬರು ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸದೃಢ ಆರೋಗ್ಯ ಹೊಂದುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕು  ಎಂದು ಸಂಸದ ರಮೇಶ ಜಿಗಜಿಣಗಿ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಹಯೋಗದಲ್ಲಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯಪುರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು
ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸದೃಢತೆಗೆ ಯೋಗ ಸಹಕಾರಿಯಾಗಿದ್ದು, ಕೇವಲ ಒಂದು ದಿನಕ್ಕೆ ಮಾತ್ರ್ರ ಸೀಮಿತಗೊಳಿಸದೇ ಪ್ರತಿನಿತ್ಯ, ನಿರಂತರವಾಗಿ ಯೋಗ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಯೋಗ ಆಚರಣೆಯಿಂದ ಮಾನಸಿಕ ಹಾಗೂ ದೈಹಿಕ ಸ್ಥಿತಿ ಉತ್ತಮ ಪಡಿಸುವುದರೊಂದಿಗೆ ಚೈತನ್ಯಶೀಲರನ್ನಾಗಿಸುತ್ತದೆ ಎಂದು ಹೇಳಿದರು.

ಸಾಮೂಹಿಕ ಯೋಗಾಭ್ಯಾಸ

ವಸುದೈವ ಕುಟುಂಬಕ್ಕಾಗಿ ಯೋಗ ಹಾಗೂ ಹರ್ ಆಂಗನ್ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗಾಸಕ್ತರಿಗೆ, ಪತಂಜಲಿಯ ಯೋಗ ಸಮಿತಿಯ ಶ್ರೀಮತಿ ಸುನಿತಾ ಅಶೋಕ ಬಿರಾದಾರ, ಬಿಎಲ್‍ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಹಾಗೂ ಕರ್ಪೂರಮಠ ಕಾಲೇಜಿನ ವಿದ್ಯಾರ್ಥಿನಿಯರಾದ ಹರ್ಷಿತಾ ರಾಯವಾಡಿ ಹಾಗೂ ಮಧು ಬೆಳ್ಳುಂಡಗಿ ಯೋಗಾಭ್ಯಾಸ ಮಾಡಿಸಿದರು.
ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ಹೊಸಮನಿ, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳಾದ ಡಾ.ಆರ್.ಎಸ್.ಪಾಟೀಲ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, 36-ಎನ್‍ಸಿಸಿ ಅಧಿಕಾರಿ ರೆಸಪಾಲ್‍ಸಿಂಗ್ ಹಾಗೂ ಪುನೀತ್, ನೆಹರು ಯುವ ಕೇಂದ್ರದ ರಾಹುಲ್ ಡೋಂಗ್ರೆ, ಎನ್. ಎಸ್. ಎಸ್ ಅಧಿಕಾರಿಗಳು, ನಾನಾ ಕಾಲೇಜುಗಳ ಪ್ರಾಚಾರ್ಯರು ಆಯುರ್ವೇದ ಕಾಲೇಜ್, ಯುನಾನಿ ಮೆಡಿಕಲ್ ಕಾಲೇಜ್, ಪತಂಜಲಿ ಯೋಗ ಸಂಸ್ಥೆ ಪದಾಧಿಕಾರಿಗಳು, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿರಿಯ ವೈದ್ಯಾಧಿಕಾರಿ ಡಾ. ವಿದ್ಯಾವತಿ ಎಂ. ಅಥಣಿ ಪ್ರಾರ್ಥಿಸಿದರು.  ಸಂಗೀತಾ ಹಳ್ಳೂರ ಮತ್ತು ತಂಡದವರು ನಾಡಗೀತೆ ಹಾಡಿದರು.  ವೈದ್ಯಾಧಿಕಾರಿ ಡಾ. ವಿ. ಬಿ. ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌