ಕೆ ಇ ಆರ್ ಸಿ ವಿದ್ಯುತ್ ದರ ಹೆಚ್ಚಿಸಿದೆ- ಜುಲೈ ಮೊದಲ ವಾರ ದೆಹಲಿಗೆ ಭೇಟಿ ನೀಡುತ್ತೇನೆ- ಎಂ. ಬಿ. ಪಾಟೀಲ

ವಿಜಯಪುರ: ವಿದ್ಯುತ್ ದರ ಹೆಚ್ಚಳ ಸರಕಾರ ಕೈಗೊಂಡ ನಿರ್ಧಾರವಲ್ಲ.  ಅದು ಸ್ವಾಯತ್ತ ಸಂಸ್ಥೆಯಾಗಿರುವ ಕೆ. ಇ. ಆರ್‌. ಸಿ ಮಾಡಿರುವ ತೀರ್ಮಾನವಾಗಿದೆ.  ವಿದ್ಯುತ್ ದರ ಹೆಚ್ಚಳಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬರುವ ಮುಂಚೆಯೇ ಕೆ. ಇ. ಆರ್‌. ಸಿ ವಿದ್ಯುತ್ ದರ ಹೆಚ್ಚಳ ಮಾಡಿದೆ.  ವಿದ್ಯುತ್ ದರ ಹೆಚ್ಚಳಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.  ಮುಖ್ಯಮಂತ್ರಿಗಳು ಈಗಾಗಲೇ ದರ ಹೆಚ್ಚಳ ಹಿಂಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಆದರೂ ನಾನೂ ಕೂಡ ಸಿಎಂ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಕೈಗಾರಿಕೋದ್ಯಮಿಗಳಿಗೆ ಮನವಿ

ಕೈಗಾರಿಕೋದ್ಯಮಿಗಳು ದಯವಿಟ್ಟು ಸಹಕರಿಸಲು ಮನವಿ ಮಾಡುತ್ತೇನೆ.  ದಯವಿಟ್ಟು ಸಹಕಾರ ಮಾಡಿ.  ಇದು ಕೆ. ಇ. ಆರ್‌. ಸಿ ಆಗಾಗ ಮಾಡುವ ಪ್ರಕ್ರಿಯೆಯಾಗಿದೆ.  ಇದು ನಾವು ಮಾಡುವ ಕೆಲಸವಲ್ಲ.  ಕೆ. ಇ. ಆರ್. ಸಿ. ಯವರು ಈಗ ಮಾಡಿದ್ದಾರೆ.  ಮುಂದೆಯೂ ಅವರು ಮಾಡುತ್ತಾರೆ.  ಕಾಲಕಾಲಕ್ಕೆ ಪರಿಷ್ಕರಣೆ ಮಾಡುತ್ತಾರೆ.  ಸಿಎಂ ಜೊತೆ ಚರ್ಚೆ ಮಾಡಿ ಏನು ಸಾಧ್ಯವೋ ಆ ಕೆಲಸ ಮಾಡುತ್ತೇನೆ.  ಸಿಎಂ, ಇಂಧನ ಸಚಿವರ ಜೊತೆಯೂ ಮಾತನಾಡುತ್ತೇನೆ ಎಂದು ಸಚಿವರು ಹೇಳಿದರು.
ಅಕ್ಕಿ ಹಂಚಿಕೆಯಲ್ಲಿ ಕೇಂದ್ರ ರಾಜಕೀಯ ಮಾಡಬಾರದು

ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ.  ಬಡವರು ತಿನ್ನುವ ಅಕ್ಕಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ.  ನಾವು ಪತ್ರ ಬರೆದಾಗ ಅವರು ಉತ್ತರ ಬರೆದರು.  ಮುಖ್ಯಮಂತ್ರಿಗಳು ಮಾತನಾಡಿದಾಗ ಅವರು 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ ಎಂದು ಹೇಳಿದ್ದರು.  ಈಗ ಇಲ್ಲ ಎನ್ನುತ್ತಿದ್ದಾರೆ.  ಹೀಗಾಗಿ ಬಡವರ ಅನ್ನದ ಜೊತೆ ಇವರು ರಾಜಕೀಯ ಮಾಡುವುದು ಸರಿಯಾದುದಲ್ಲ.  ನಾವು ಪುಕ್ಕಟವಾಗಿ ಅಕ್ಕಿ ಕೇಳುತ್ತಿಲ್ಲ.  ನಮಗೆ ಬದ್ಧತೆ ಇದೆ.  ನಾಲ್ಕು ದಿನ ವಿಳಂಬವಾಗಬಹುದು.  ಆದರೆ, ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಸಿಎಂ, ನಮ್ಮ ಸರಕಾರ ನುಡಿದಂತೆ ನಡೆಯುತ್ತೇವೆ.  10 ಕೆಜಿ ಆಹಾರ ಧಾನ್ಯ ಕೊಟ್ಟೆ ಕೊಡುತ್ತೇವೆ ಎಂದು ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದರು.

ಅಕ್ಕಿ, ಗೋದಿ ವಿತರಣೆ ವಿಚಾರ

ಸ್ಥಳೀಯ ಆಹಾರ ಧಾನ್ಯಗಳನ್ನು ವಿತರಿಸುವ ಪ್ರಸ್ತಾವನೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ಥಳೀಯ ಆಹಾರ ಧಾನ್ಯ ನೀಡುವುದು ಅಷ್ಟು ಸುಲಭವಲ್ಲ.  ಜೋಳ ಮತ್ತು ರಾಗಿ ಹಂಚಿಕೆ ಕುರಿತು ಚರ್ಚೆ ನಡೆದಿದೆ.  ಆದರೆ, ನಮಗೆ ಬೇಕಾದಷ್ಟು ಜೋಳ, ಗೋದಿ ಸಿಗುವುದಿಲ್ಲ.  ಇತ್ತೀಚಿನ ದಿನಗಳಲ್ಲಿ ಜೋಳ ಬೆಳೆಯುವುದೂ ಕಡಿಮೆಯಾಗಿದೆ ಎಂದು ಹೇಳಿದರು.

ಸಿಎಂ, ಸಚಿವರು ದೆಹಲಿ ಭೇಟಿ ವಿಚಾರ, ನಾನೂ ದೆಹಲಿಗೆ ಹೋಗುತ್ತೇನೆ

ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಜೊತೆ, ಕೆಲವು ಜನ ಸಚಿವರು ದೆಹಲಿ ಭೇಟಿ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಜೊತೆ ಕೆಲವು ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದರು.

ನಾವೂ ಕೂಡ ದೆಹಲಿಗೆ ಭೇಟಿ ನೀಡಲಿದ್ದೇವೆ.  ಈ ಕುರಿತು ರೋಡ್ ಮ್ಯಾಪ್ ತಯಾರು ಮಾಡುತ್ತಿದ್ದೇವೆ.  ಜೂ. 27 ರಂದು ನಮ್ಮ ಕೈಗಾರಿಗೆ ಇಲಾಖೆಯ ಸಂಬಂಧ ಅಂತಿಮ ಸಭೆ ನಡೆಸಿ ಈ ಸಭೆಯಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯ ರೂಪಿಸಬೇಕು ಎಂಬುದನ್ನು ಚರ್ಚಿಸುತ್ತೇವೆ.  ಜುಲೈ ಮೊದಲ ವಾರ ದೆಹಲಿಗೆ ತೆರಳಿ ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಲಿದ್ದೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌