ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಒಂಬತ್ತು ವರ್ಷಗಳ ಸಾಧನೆಯನು ಜನರಿಗೆ ತಲುಪಿಸಲು ಜೂ. 26 ರಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗುಮ್ಮಟ ನಗರಿಗೆ ಭೇಟಿ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಜೂ. 26 ರಂದು ಮ. 3ಕ್ಕೆ ನಗರದ ಸಂಗನಬಸವ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಗಾಟಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸರಕಾರದ ಒಂಬತ್ತು ವರ್ಷಗಳ ಸಾಧನೆ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ಕುರಿತು ಬೂತ್ ಮಟ್ಟದಲ್ಲಿ ಜನರಿಗೆ ತಿಳಿಸುವ ಕೆಲಸವ್ನು ಬಿಜೆಪಿ ಮಾಡಲಿದೆ. ಕಾಂಗ್ರೆಸ್ ಐದು ಗ್ಯಾರಂಟಿ ಕಾರ್ಡ್‌ಗಳಿಂದ ಅಧಿಕಾರಕ್ಕೆ ಬಂದಿದೆ. ಆದರೆ ಅಧಿಕಾರಕ್ಕೇರಿದ ನಂತರ ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡದೆ, ಜನರ ದಿಕ್ಕು ತಪ್ಪಿಸುತ್ತಿದೆ. ಎಲ್ಲರಿಗೂ ಉಚಿತ ಎಂದು ಹೇಳಿ ಈಗ ಇದೇ ಗ್ಯಾರಂಟಿ ಸ್ಕೀಂ ಗಳಿಗೆ ಷರತ್ತು ವಿಧಿಸುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ಎಲ್ಲರಿಗೂ 200 ಯುನಿಟ್ ಉಚಿತ ಎಂದು ಹೇಳಿ ಈಗ ವಿದ್ಯುತ್ ದರ ದುಪ್ಪಟ್ಟು ಮಾಡಿದೆ. 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಹೇಳಿ ಈಗ ಕೇಂದ್ರ ಸರಕಾರದ ವಿರುದ್ಧ ಆರೋಪಿಸುತ್ತಿದೆ. ಆಹಾರ ಭದ್ರತೆಗೆ ಅದರದೇ ಆದ ಕಮಿಟ್‌ಮೆಂಟ್ ಇರುತ್ತದೆ. ಕೇಂದ್ರದ ವಿರುದ್ಧ ಆರೋಪ ಮಾಡುವುದನ್ನು ಕೈಬಿಟ್ಟು ಕೇಂದ್ರ ಸರಕಾರ ನೀಡುವ 5 ಕೆಜಿ ಅಕ್ಕಿಯನ್ನು ಹೊರೆತುಪಡಿಸಿ 10 ಕೆಜಿ ಅಕ್ಕಿಯನ್ನು ರಾಜ್ಯದ ಜನತೆಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸವರಾಜ ಬಿರಾದಾರ, ಚಂದ್ರಶೇಖರ ಕವಟಗಿ ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಸುರೇಶ ಬಿರಾದಾರ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.