ವಿಜಯಪುರ ಜಿಓಸಿಸಿ ಬ್ಯಾಂಕಿನ ನಾನಾ ಡಿಜಿಟಲ್ ಸೇವೆಗಳಿಗೆ ಚಾಲನೆ ನೀಡಿದ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಜಿಲ್ಲೆಯಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಇಂದು ಬೃಹದಾಕಾರವಾಗಿ ಬೆಳೆಯಲು ವಚನಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಸಾಠೆ, ಬಿ. ಎಂ. ಪಾಟೀಲ ಅವರಂಥ ಮಹನೀಯರ ದೂರದೃಷ್ಠಿ ಮತ್ತು ಕೊಡುಗೆ ಅಪಾರ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ನಗರದಲ್ಲಿರುವ ಸರಕಾರಿ ನೌಕರರ ಸಹಕಾರಿ (ಜಿಓಸಿಸಿ) ಬ್ಯಾಂಕಿನಲ್ಲಿ ಫೋನ್ ಪೆ, ಗೂಗಲ್ ಪೆ, ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಡಿಜಿಟಲ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಹಿರಿಯರು ಶತಮಾನಗಳ ಹಿಂದೆ ಕಂಡ ಕನಸುಗಳ, ಹೊಂದಿದ್ದ ದೂರದೃಷ್ಠಿಯ ಫಲ ಈಗ ಜಿಲ್ಲೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ. ಶತಮಾನಗಳ ಹಿಂದೆ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಬಿ. ಎಲ್. ಡಿ. ಇ ಸಂಸ್ಥೆ ಮತ್ತು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನ್ನು ಪ್ರಾರಂಭಿಸಿದರು. ತನು, ಮನ, ಧನ ಉಪಯೋಗಿಸಿ 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿ ಬೆಳಕಿಗೆ ತಂದರು. ಅದೇ ರೀತಿ ಶ್ರೀ ಬಂಥನಾಳ ಶಿವಯೋಗಿಗಳು ನಗರವಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲಿಯೂ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೆ ನಾಂದಿ ಹಾಡಿದರು ದಿ. ಬಿ. ಎಂ. ಪಾಟೀಲ ಅವರು ಬಿ. ಎಲ್. ಡಿ. ಸಂಸ್ಥೆಯನ್ನು ಮುನ್ನಡೆಸಿ ಆಧುನಿಕ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಹೊಸ ಸ್ಪರ್ಷ ನೀಡಿದರು. ಸಾಠೆ ಅವರು ಜಿಓಸಿಸಿ ಬ್ಯಾಂಕ್ ಸ್ಥಾಪಿಸಿದರು. ಅದೇ ರೀತಿ, ಬಾಗಲಕೋಟೆ ಜಿಲ್ಲೆಯಲ್ಲಿ ಬಿವಿವಿಎಸ್ ಮತ್ತು ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯನ್ನು ಅಲ್ಲಿನ ಹಿರಿಯರು ಪ್ರಾರಂಭಿಸಿ ಆ ಜಿಲ್ಲೆಗಳು ಅಭಿವೃದ್ಧಿಯಾಗಲು ಕಾರಣರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

ವಿಜಯಪುರ ಜಿಓಸಿಸಿ ಬ್ಯಾಂಕಿನಲ್ಲಿ ಡಿಜಿಟ್ ಸೇವೆಗಳಿಗೆ ಸಚಿವ ಎಂ. ಬಿ. ಪಾಟೀಲ ಚಾಲನೆ ನೀಡಿದರು

ಸಾಠೆ ಅವರು ಆರಂಭಿಸಿದ ಜಿಓಸಿಸಿ ಬ್ಯಾಂಕ್ ಈಗ ಶತಮಾನ ಪೂರೈಸಿದೆ. ಆದರೆ, ಅವರ ಭಾವಚಿತ್ರ ಕೂಡ ಇಲ್ಲದಿರುವುದು ಅವರ ಸರಳತೆಗೆ ಸಾಕ್ಷಿಯಾಗಿದೆ. ಇದು ರಾಜ್ಯದ ಸರಕಾರಿ ನೌಕರರ ಮೊದಲ ಸಹಕಾರಿ ಬ್ಯಾಂಕ್ ಎಂದರೂ ತಪ್ಪಲ್ಲ. ಈ ಬ್ಯಾಂಕು ಈಗ ಅತ್ಯಾಧುನಿಕ ಸೌಲಭ್ಯಗಳನ್ನು ಪ್ರಾರಂಭಿಸಿದ್ದು, ಸದಸ್ಯರು ಹಾಗೂ ಅವರ ಕುಟುಂಬವರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರ ಅಭ್ಯುದಯಕ್ಕೆ ನೆರವಾಗಬೇಕು. ಯಾವುದೇ ಭೇದ- ಭಾವ ಮಾಡದೇ ಜನಪರ ಕೆಲಸ ಮಾಡಬೇಕು. ರಾಜ್ಯಾದ್ಯಂತ ಈ ಬ್ಯಾಂಕ್ ತನ್ನ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಎಂ. ಬಿ. ಪಾಟೀಲ ಶುಭ ಕೋರಿದರು.
ಈ ಸಂದರ್ಭದಲ್ಲಿ ಶಾಸಕರಾದ ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ವಿಧಾನ ಪರಿಷತ ಸದಸ್ಯ ಹಣಮಂತ ನಿರಾಣಿ, ಬ್ಯಾಂಕಿನ ಅಧ್ಯಕ್ಷ ಹಣಮಂತ ಕೊಣದಿ, ಉಪಾಧ್ಯಕ್ಷ ಅಲ್ಲಾಬಕ್ಷ ವಾಲಿಕಾರ, ನಿರ್ದೇಶಕರಾದ ಅರವಿಂದ ಹೂಗಾರ, ಈರಪ್ಪ ತೇಲಿ, ಭೀಮನಗೌಡ ಬಿರಾದಾರ, ಅರ್ಜುನ ಲಮಾಣಿ, ಸುರೇಶ ಶೇಡಶ್ಯಾಳ, ಜಯಶ್ರೀ ಬೆಣ್ಣಿ, ಸದಾಶಿವ ದಳವಾಯಿ, ಆನಂದಗೌಡ ಬಿರಾದಾರ, ಪ್ರಶಾಂತ ಚನಗೊಂಡ, ಉಮೇಶ ಗುಡ್ನಾಳ, ಅಶೋಕ ಚನಬಸುಗೊಳ, ನೀಲಾ ಇಂಗಳೆ, ಚಂದ್ರಶೇಖರ ಜಿತ್ತಿ, ಬ್ಯಾಂಕಿನ ಜನರಲ್ ಮ್ಯಾನೇಜರ್ ಎಂ. ವಿ. ಪರ್ವತಿ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌