ವಿಜಯಪುರ: ಜಿಲ್ಲೆಯಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಹಾರಾಷ್ಟ್ರ ಕೋಯ್ನಾ ಜಲಾಷಯದಿಂದ 3 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸರಕಾರದಕ್ಕೆ ಮನವಿ ಮಾಡಲು ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕುಡಿಯುವ ನೀರಿನ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಈಗಾಗಲೇ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಕೇವಲ ಶೇ. 1 ರಷ್ಟು ಮಾತ್ರ ಬಿತ್ತನೆಯಾಗಿದೆ. ಅಲ್ಲದೇ, ಬಹುತೇಕ ಕೆರೆಗಳು ಬತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕೋಯ್ನಾದಿಂದ 3 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಅಲ್ಲಿನ ಸರಕಾರಕ್ಕೆ ಮನವಿ ಮಾಡಲು ಮುಖ್ಯಮಂತ್ರಿಗಳ ಮೂಲಕ ಒತ್ತಡ ಹಾಕಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ವಾರಕ್ಕೊಮ್ಮೆ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆಯಾದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಮತ್ತು ಈ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಸರಕಾರದ ಮೇಲೆ ಜನ ಅಪಾರ ನಿರೀಕ್ಷೆ, ನಂಬಿಕೆ ಇಟ್ಟಿದ್ದಾರೆ. ಕಳೆದ 30 ವರ್ಷಗಳಲ್ಲಿ ಅಭೂತಪೂರ್ವ ಜನಾದೇಶ ನೀಡಿದ್ದಾರೆ. ಇದನ್ನು ಉಳಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ಅದಕ್ಕೆ ತಕ್ಕಂತೆ ಪ್ರಾಮಾಣಿಕ, ತ್ವರಿತವಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಸರ್ವಜನಾಂಗದ ಶಾಂತಿಯ ತೋಟದ ಕಲ್ಪನೆಯಲ್ಲಿ, ರಾಜ್ಯದ ಸಂಸ್ಕೃತಿ, ಪರಂಪರೆ, ಗತವೈಭವ ಮುಂದುವರೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ಈಗಾಗಲೇ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಶೀಘ್ರದಲ್ಲಿ ಪಾರದರ್ಶಕವಾಗಿ ಒಬ್ಬರೂ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ಯಾವುದೇ ಅಕ್ರಮ, ಅವ್ಯವಹಾರ, ಸ್ವಜನ ಪಕ್ಷಪಾತ ಮಾಡಬಾರದು. ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎಲ್ಲ ಫಲಾನುಭವಿಗಳಿಗೂ ಯೋಜನೆ ತಲುಪಬೇಕು ಎಂದು ಅವರು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಿದರು.
ಯಾವುದೇ ತಾರತಮ್ಯ ಮಾಡದೇ ವಿಜಯಪುರ ನಗರದಲ್ಲಿ ಅಭಿವೃದ್ಧಿ ಮಾಡಬೇಕು. ಜಾತಿ, ಧರ್ಮ ನೋಡಿ ಕೆಲಸ ಮಾಡಬಾರದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೂ ಮೂಕ ಪ್ರೇಕ್ಷಕರಾಗಬಾರದು ಎಂದು ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರಿಗೆ ಸಚಿವರು ಸೂಚನೆ ನೀಡಿದರು.
ಅಧಿಕಾರಿಗಳು ಎರಡು ಪ್ರಮುಖ ಸಂಗತಿಗಳ ಬಗ್ಗೆ ಗಮನ ಹರಿಸಬೇಕು. ಪ್ಲ್ಯಾನ್ ಎ ಪ್ರಕಾರ ಮುಂಗಾರು ಆರಂಭವಾದರೆ ಅಗತ್ಯವಾಗಿರುವ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ದಾಸ್ತಾನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು. ಮಳೆ ಕೊರತೆಯಾದರೆ ಪ್ಲ್ಯಾನ್ ಬಿ. ಸಿದ್ದಪಡಿಸಿರಬೇಕು. ಆಗ ಎದುರಾಗುವ ಕುಡಿಯುವ ನೀರು, ಕಾರ್ಮಿಕರಿಗೆ ಕೆಲಸ, ಜಾನುವಾರುಗಳಿಗೆ ನೀರು ಮತ್ತು ಮೇವಿನ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಈಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಶಿಕ್ಷಕರ ಕೊರತೆ ನೀಗಿಸಲು ಗುತ್ತಿಗೆ ಆಧಾರದ ಮೇಲೆ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು.
ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ರೂ. 9 ಕೋ. ಖರ್ಚುಮಾಡಿ bಿಜಯಪುರ ನಗರದ ಐತಿಹಾಸಿಕ ತೆರೆದ ಭಾವಿಗಳನ್ನು ಪುನರುಜ್ಜೀವನ ಮಾಡಿಸಿದ್ದೆ. ಆ ನೀರನ್ನು ಕುಡಿಯುವ ಬದಲು ದಿನಬಳಕೆಗೆ ಪೂರೈಸಲು ಎಲ್ಲ ವ್ಯವಸ್ಥೆ ಮಾಡಿದ್ದೆ. ಈ ಹಿಂದೆ ಪೌರಾಯುಕ್ತರಿಗೆ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಈಗಲಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಸಂಗ್ರಹವಾಗಿ ನಿಂತಿರುವ ನೀರು ಬಳಕೆಯಾಗದಿದ್ದರೆ ಮತ್ತೆ ಕೊಳಚೆಯಾಗಿ ಮಾರ್ಪಡುತ್ತದೆ. ಈ ನೀರು ಬಳಕೆಯಿಂದ ನೀರಿನ ಬೇಡಿಕೆಯನ್ನು ತಗ್ಗಿಸಬಹುದು. ಅತೀ ಶೀಘ್ರದಲ್ಲಿ ನಾನೂ ಬರುತ್ತೇವೆ. ಅಧಿಕಾರಿಗಳೊಂದಿಗೆ ತೆರಳಿ ಪುನರುಜ್ಜೀವನ ಮಾಡಿರುವ ಪ್ರಾಚೀನ ಬಾವಡಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಅವರು ಹೇಳಿದರು.
ಸಕ್ಕರೆ, ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ನಾನು ಈ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವನಾಗಿದ್ದಾಗ ರೂ. 2.40 ಕೋ. ಖರ್ಚು ಮಾಡಿ ಐತಿಹಾಸಿಕ ತಾಜಬಾವಡಿ ನೀರನ್ನು ಜಿಲ್ಲಾಸ್ಪತ್ರೆಯಲ್ಲಿ ದಿನಬಳಕೆಗೆ ಉಪಯೋಗಿಸಲು ಯೋಜನೆ ರೂಪಿಸಿದ್ದೆ. ಈಗ ಅದು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಕೊಲ್ಹಾರ ಮತ್ತು ಮನಗೂಳಿ ಪಟ್ಟಣಗಳಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಗುತ್ತಿಗೆದಾರರ ಮೇಲೆ ಅಧಿಕಾರಿಗಳಿಗೆ ನಿಯಂತ್ರಣ ಇಲ್ಲವೇ? ಗುತ್ತಿಗೆದಾರ ಹೇಳಿದ ಮಾತು ಕೇಳದಿದ್ದರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಇದೇ ವೇಳೆ, ವಿಜಯಪುರ ಜಿಲ್ಲೆಯ ನಾಗಠಾಣ ಮತ್ತು ಇಂಡಿ ಮತಕ್ಷೇತ್ರಗಳ ವ್ಯಾಪ್ತಿಯ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಯನ್ನು 12 ತಿಂಗಳಲ್ಲಿ ಮುಗಿಸಲು ಕಾಲಾವಕಾಶ ನೀಡಿದ್ದರೂ ಇನ್ನೂ ಸಮರ್ಪಕವಾಗಿ ನಡೆಯದಿರುವ ಬಗ್ಗೆ ಎಂ. ಬಿ. ಪಾಟೀಲರು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ವರ್ಷಗಳಲ್ಲಿ ಶಾಖಾ ಕಾಲುವೆಗಳು ಯಾಕೆ ಪೂರ್ಣ ಮಾಡಿಲ್ಲ? ಟಕ್ಕಳಕಿ- ದಿಂಡವಾರ- ಸಂಕನಾಳ ಶಾಖಾ ಕಾಲುವೆ ಏಕೆ ಮಾಡಿಲ್ಲ? ನನಗೆ ಪ್ರೊಗ್ರೆಸ್ ರಿಪೊರ್ಟ್ ನೀಡಿ. ನಾನೇ ಪರಿಶೀಲನೆಗೆ ಬರುತ್ತೇನೆ ಎಂದು ಅವರು ಅಧಿಕಾರಿಗಳಿಗೆ ಎಂ. ಬಿ. ಪಾಟೀಲ ಎಚ್ಚರಿಕೆ ನೀಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಗುತ್ತಿಗೆದಾರರು ಎರಡು ಕಾರಣಗಳಿಂದ ನಾನಾ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಒಂದು ವಿವಾದ, ಮತ್ತೋಂದು ಬಿಲ್ ನೀಡದ ಹಿನ್ನೆಲೆ ಗುತ್ತಿಗೆದಾರರು ಕೆಲಸ ಬಿಟ್ಟು ಹೋಗಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಹಂಚನಾಳ ಕೆರೆಗೆ ಕಾಯಕಲ್ಪ ಕಲ್ಪಿಸದಿದ್ದರೆ ಸಹಿಸುವುದಿಲ್ಲ
ಇದೇ ವೇಳೆ, ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಹಂಚಿನಾಳ ಕೆರೆಗೆ ವಿಜಯಪುರ ನಗರದ ಒಳಚರಂಡಿ ನೀರು ಹರಿಸಲಾಗುತ್ತಿದೆ. ಈ ಕೆರೆಯ ಸುತ್ತಮುತ್ತ ವಾಸಿಸುವುದು ಕಷ್ಟಕರವಾಗಿದೆ. ಬೇಗನೆ ಅಲ್ಲಿ ಮಾನವೀಯತೆ ದೃಷ್ಠಿಯಿಂದಾದರೂ ಶುದ್ಧಿಕರಣ ಘಟಕ ಸ್ಥಾಪಿಸಬೇಕು. ಇಲ್ಲದಿದ್ದರೆ ಡಿಸಿ ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಅಲ್ಲಿಗೆ ಕರೆದೊಯ್ದು ಕೂಡಿಸುತ್ತೇನೆ. ಅಲ್ಲಿ ಕೊಳವೆ ಭಾವಿ ಕೊರೆದು ನಿಮಗೆ ನೀರು ಕೊಡಿಸುತ್ತೇನೆ. ಇಲ್ಲದಿದ್ದರೆ, ಆ ಕೆರೆಗೆ ಒಳಚರಂಡಿ ನೀರು ಸರಬರಾಜು ಬೇರೆ ಕಡೆ ವ್ಯವಸ್ಥೆ ಮಾಡಿ. ಅಲ್ಲಿಗೆ ಒಳಚರಂಡಿ ನೀರು ಬಿಡಬೇಡಿ. ಇದನ್ನು ಸಹಿಸಲು ಸಾಧ್ಯವಿಲ್ಲ. 100 ದಿನಗಳಲ್ಲಿ ನೀರು ಶುದ್ಧಿಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಇಕಾರಿಗಳಿಗೆ ಅವರು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಶಾಲಾ ಮಕ್ಕಳಿಗೆ ಸ್ಪೋರ್ಟ್ಸ್ ಶೂ ಚಿಂತನೆ
ಶಾಲಾ ಮಕ್ಕಳಿಗೆ ಈಗ ನೀಡಲಾಗುತ್ತಿರುವ ಶೂಗಳ ಬದಲಾಗಿ ಸ್ಪೋರ್ಟ್ಸ್ ಶೂಗಳನ್ನು ನೀಡಲು ಹೊಸ ನೀತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ. ಇದರಿಂದ ಮಕ್ಕಳಿಗೆ ಕಂಫರ್ಟ್ ಆಗಲಿದ್ದು, ಆರೋಗ್ಯಕ್ಕೂ ಪೂರಕವಾಗಲಿದೆ. ಈ ಕುರಿತು ಸರಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲು ಪ್ರಯತ್ನ ಮಾಡುವುದಾಗಿ ಸಚಿವರು ತಿಳಿಸಿದರು.
ಪಿಯು ಶಿಕ್ಷಣ ಇಲಾಖೆ ಜಿ. ಪಂ. ವ್ಯಾಪ್ತಿಗೆ ಸೇರಿಸಲು ಕ್ರಮ
ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಪಿಯು ಶಿಕ್ಷಣವನ್ನೂ ಜಿ. ಪಂ. ವ್ಯಾಪ್ತಿಗೆ ಸೇರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ಸಿಇಓಗೆ ಅವರು ಸೂಚನೆ ನೀಡಿದರು.
ವಿಜಯಪುರ ಜಿಲ್ಲೆಯಲ್ಲಿರುವ ಎಲ್ಲ ಶಾಲೆ- ಕಾಲೇಜುಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಆರು ತಿಂಗಳಲ್ಲಿ ಶೌಚಾಲಯ ನಿರ್ಮಿಸಬೇಕು. ಒಂದು ವೇಳೆ ನಿರ್ಮಿಸದಿದ್ದರೆ ಪಿಯು ಉಪನಿರ್ದೇಶಕರ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ಲೋಹಗಾಂವ ಅಂಗನವಾಡಿ ಮಾದರಿಯಾಗಿ ಪರಿಗಣಿಸಿ
ತಿಕೋಟಾ ತಾಲೂಕಿನ ಲೋಹಗಾಂವ ಗ್ರಾಮದಲ್ಲಿರುವ ಅಂಗನವಾಡಿ ಇತರರಿಗೆ ಮಾದರಿಯಾಗಿದೆ. ಪ್ಲೆಸ್ಕೂಲ್ ಥರ ಇದೆ. ಅಲ್ಲಿಗೆ ಭೇಟಿ ನೀಡಿ ಅದೇ ಮಾದರಿಯಲ್ಲಿ ಜಿಲ್ಲಾದ್ಯಂತ ಬದಲಾವಣೆ ಮಾಡಿ. ಹೊಸ ಬದಲಾವಣೆ ತನ್ನಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ವ್ಯವಸ್ಥೆ ಸರಿ ಪಡಿಸಬೇಕು. ಬಿಸಿಯೂಟ, ಮೊಟ್ಟೆ ಹಂಚಿಕೆಯಲ್ಲಿ ಅವ್ಯವಹಾರ ತಡೆಯಬೇಕು. ಗ್ರಾಮಗಳಲ್ಲಿ ಕಾರ್ಯಕ್ರಮಗಳಿಗೂ ಬಿಸಿಯೂಟ ಯೋಜನೆಯ ಆಹಾರ ಧಾನ್ಯ ಬಳಸಲಾಗುತ್ತಿದ್ದು ಇದನ್ನು ತಡೆಯಬೇಕು. ಬಿಸಿಯೂಟ ಆಹಾರ ಧಾನ್ಯ ಶಾಲಾ ಮಕ್ಕಳಿಗೆ ನೀಡಲಿ. ಆದರೆ, ಊರಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮಗಳಿಗೂ ಇದೇ ಆಹಾರ ಧಾನ್ಯಗಳ ಬಳಕೆ ಬೇಡ ಎಂದು ಹೇಳಿದರು.
ಖಾಸಗಿ ಕಾರ್ಯಕ್ರಮಗಳಲ್ಲಿ ಉಳಿಯುವ ಆಹಾರವನ್ನು ಪಡೆಯಬೇಡ ಅಂಗನವಾಡಿಗಳಿಗೆ ಪಡೆಯಬೇಡಿ. ಗುಣಮಟ್ಟದ ಊಟ ನೀಡಿ. ಅವರಿಗೆ ಬಿಸಿಯೂಟ ಆಹಾರ ಧಾನ್ಯ ದುರ್ಬಳಕೆ ತಡೆಯಲು ಕ್ರಮ ಕೈಗೊಳ್ಳಿ ಎಂದು ಅವರು ಜಿಲ್ಲಾಧಿಕಾರಿ ಮತ್ತು ಜಿ. ಪಂ. ಸಿಇಓ ಅವರಿಗೆ ಸೂಚನೆ ನೀಡಿದರು.
ಆರೋಗ್ಯ ಇಲಾಖೆ ಅಧಿಕಾರಿಗೆ ತರಾಟೆ
ಆರೋಗ್ಯ ‘ಇಲಾಖೆ ಬಗ್ಗೆ ಸಾರ್ವಜನಿಕರಿಂದ ಬಹಳ ಕಂಪ್ಲೆಂಟ್ಸ್ ಇವೆ. ಜವಾಬ್ದಾರಿಯಿಂದ ಕೆಲಸ ಮಾಡಿ. ಒಬ್ಬರಿಗೆ 9 ಕಡೆ ಪ್ರಭಾರ ನೀಡಬೇಡಿ. ಸಿಇಓ ಸೂಚನೆಯಂತೆ ಕೆಲಸ ಮಾಡಿ. ನಿಮ್ಮ ಮನಸ್ಸಿಗೆ ಬಂದಂತೆ ಮಾಡಬೇಡಿ. ಶಿಸ್ತು ಇರಲಿ. ವಾದ ಮಾಡಬೇಡಿ. ಸಿಇಓ ಸಭೆ ನಡೆಸಿ ಪರಿಶೀಲನೆ ಮಾಡಿ. ನೀವೇ ಜವಾಬ್ದಾರರು. ನೀವು ಬದಲಾವಣೆಯಾಗಬೇಕು. ಇಲ್ಲದಿದ್ದರೆ ಬದಲಾವಣೆ ಮಾಡಿಕೊಂಡು ಹೋಗಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವರು ಎಚ್ಚರಿಕೆ ನೀಡಿದರು.
ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಿ
ಎನ್.ಟಿ.ಪಿ.ಸಿ ಯಿಂದ ನಮ್ಮ ಜಿಲ್ಲೆಯಲ್ಲಿ ಪರಿಸರ ಮಾಲಿನ್ಯ ಅತೀ ಹೆಚ್ಚಾಗುತ್ತಿದೆ. ಹೀಗಾಗಿ ಅವರಿಂದ ಸಿಎಸ್ಆರ್ ಫಂಡ್ ಪಡೆದು ಮರ ಬೆಳೆಸಬೇಕು. ಬರಪೀಡಿತ ಆಫ್ರಿಕಾ ದೇಶದಲ್ಲಿ ಗುಡ್ಡದಲ್ಲಿ ಗುಂಡಿ ತೋಡಿ ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿದ್ದಾರೆ. ಈ ರೀತಿ ಹೊಸ ಯೋಜನೆ ರೂಪಿಸಿ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ ಅವರಿಗೆ ಎಂ. ಬಿ. ಪಾಟೀಲ ಸೂಚನೆ ನೀಡಿದರು.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ
ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಪಾನಶಾಪ್, ದಾಬಾ, ಮನೆಗಳಲ್ಲಿ ಮದ್ಯ ಮಾರಾಟ ನಿಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ಕಂದಾಯ ಮತ್ತು ಆರ್ ಟಿ ಓ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಭ್ರಷ್ಟಾಚಾರವೂ ನಡೆಯುತ್ತಿದೆ. ಇದನ್ನು ತಡೆಯಬೇಕು ಎಂದು ಅವರು
ಪೊಲೀಸರು ಅಕ್ರಮ ಮರಳು ತಡೆಗಟ್ಟಬೇಕು. ಮಾರ್ಗಸೂಚಿ ಪ್ರಕಾರ ಮರಳು ಬಳಕೆ ಅವಕಾಶ ನೀಡಿ. ಅದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿಗಳು, ಪೊಲೀಸರು ಕ್ರಮ ಕೈಗೊಳ್ಳಬೇಕು. ಮಟಕಾ ಮತ್ತು ಜೂಜಾಟಕ್ಕೆ ಕಡಿವಾಣ ಹಾಕಬೇಕು ಎಂದು ಎಂ. ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ, ಜಿ. ಪಂ. ಸಿಇಓ ರಾಹುಲ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ, ಜಿಲ್ಲಾ ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಜಿ. ಪಂ. ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಹಾಗೂ ಹುತಾತ್ಮ ಯೋಧರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.