ವಿಜಯಪುರ: ಮುಂಗಾರು ಹಂಗಾಮು ಆರಂಭವಾಗಿ ಜೂನ್ ತಿಂಗಳು ಮುಗಿಯುತ್ತ ಬಂದರೂ ಮೇಘರಾಜ ಮಳೆ ಸುರಿಸುತ್ತಿಲ್ಲ. ವರಣನ ದೇವನ ಕೃಪೆಗಾಗಿ ಜನರು ಹಾತೊರಯುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ದೇವೇಂದ್ರ ಮಳೆ ಸುರಿಸಲಿ ಎಂದು ಜನರು ದೇವರ ಪೂಜೆ, ಶಿವಲಿಂಗಕ್ಕೆ ಜಲಪೂಜೆ, ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಮಕ್ಕಳ ಸಾಂಕೇತಿಕ ಮದುವೆ ಮಾಡುವುದು ತಾವೆಲ್ಲರೂ ಕೇಳಿರ್ತೀರಿ ಮತ್ತು ನೋಡಿರ್ತೀರಿ.
ಆದರೆ, ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಜನರು ವಿಚಿತ್ರ ಆಚರಣೆ ನಡೆಸಿದ ಘಟನೆ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಇನ್ನೂ ಆರಂಭವಾಗಿಲ್ಲ. ಹೀಗಾಗಿ ಕೇವಲ ಶೇ. 1 ರಷ್ಟು ಭೂಮಿಯಲ್ಲಿ ಮಾತ್ರ ಅನ್ನದಾತರು ಬಿತ್ತನೆ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಆಗಾಗ ಮೋಡ ಕವಿಯುತ್ತಿದೆಯಾದರೂ ನೀರು ಹನಿಗಳು ಮಾತ್ರ ಬರುತ್ತಿಲ್ಲ. ಹೀಗಾಗಿ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಹೀಗಾಗಿ ಹಿತಚಿಂತಕರೊಬ್ಬರ ಮಾರ್ಗದರ್ಶನದಂತೆ ಕಲಕೇರಿ ಗ್ರಾಮದಲ್ಲಿ ವಿಚಿತ್ರ ಆಚರಣೆಯೊಂದು ನಡೆದಿದೆ. ಗ್ರಾಮದ ರೈತರು ಮತ್ತು ಗ್ರಾಮಸ್ಖರು ಸೇರಿಕೊಂಡು ಮಳೆಗಾಗಿ ಪ್ರಾರ್ಥಿಸಿ ಊರಿನ ರುದ್ರಭೂಮಿಯಲ್ಲಿರುವ ಗೋರಿಗಳಿಗೆ ನೀರುಣಿಸಿದ್ದಾರೆ. ನೀರು ತುಂಬಿದ ಟ್ಯಾಂಕರ್ ತಂದ ಜನರು ಮೊದಲಿಗೆ ಗೋರಿಗಳಿಗೆ ಉದ್ದವಾದ ಹಾರಿ ಅಂದರೆ ಕಬ್ಬಿಣದ ಸಲಾಕೆಯಿಂದ ಗೋರಿಯ ಒಳಗೆ ಒಂದು ರಂಧ್ರ ಮಾಡಿದ್ದಾರೆ. ನಂತರ ಟ್ಯಾಂಕರಿಗೆ ಪೈಪು ಜೋಡಿಸಿ ನೀರು ಚಾಲೂ ಮಾಡಿದ್ದಾರೆ. ಈ ಸಂದರ್ದಲ್ಲಿ ಉಪಸ್ಥಿತರಿದ್ದ ಸ್ವಾಮೀಜಿಯ ಪಾದಪೂಜೆ ನೆರವೇರಿಸಿದ್ದಾರೆ. ಅಲ್ಲದೇ, ನಂತರ ನೀರನ್ನು ಗೋರಿಗಳ ಮೇಲೆ ಕೊರೆಯಲಾದ ರಂಧ್ರದ ಮೂಲಕ ಒಳಗೆ ಹರಿಸಿದ್ದಾರೆ.
ಶವಗಳ ಬಾಯಿಗೆ ನೀರು ಹಾಕಿದರೆ ಮಳೆ ಬರುವ ವಿಚಿತ್ರ ನಂಬಿಕೆ
ಶವಗಳ ಬಾಯಿಗೆ ನೀರು ಹಾಕಿದರೆ ಮಳೆಯಾಗುತ್ತದೆ ಎಂಬ ವಿಚಿತ್ರ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಹಿಂದೆಯೂ ಕೆಲವೊಂದು ಸಲ ಬೇರೆ ಬೇರೆ ಗ್ರಾಮಗಳಲ್ಲಿಯೂ ಈ ಆಚರಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕಲಕೇರಿ ಗ್ರಾಮಸ್ಖರು ಅದೇ ಗ್ರಾಮದ ವಾಗೀಶ ಹಿರೇಮಠ ಸ್ವಾಮೀಜಿ ನೇತೃತ್ವದಲ್ಲಿ ಈ ವಿಚಿತ್ರ ಆಚರಣೆ ಪೂರ್ಣಗೊಳಿಸಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಇದೇ ಸ್ವಾಮೀಜಿ ಗೋರಿಯೊಂದರ ಮೇಲೆ ಕುಳಿತು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಖರು ಹೀಗೆ ಪೈಪ್ ಮೂಲಕ ಶವದ ಬಾಯಿಗೆ ನೀರು ಹಾಕಿದರೆ ಮಳೆಯಾಗುತ್ತದೆ ಎಂಬುದು ಬಲವಾದ ನಂಬಿಕೆಯಾಗಿದೆ. ಈ ಹಿಂದೆ ಕೂಡ ಬರಗಾಲ ಎದುರಾದಾಗ ಈ ರೀತಿ ಮಾಡಿದ್ದೇವೆ. ಮಳೆಗಾಗಿ ಪ್ರಾರ್ಥಿಸಿ ಶವಗಳ ಬಾಯಿಗೆ ನೀರುಣಿಸಿದಾಗ ಆ ನೀರನ್ನು ಶವಗಳು ಸೇವಿಸುತ್ತವೆ. ಈ ಶವಗಳು ನೀರು ಕುಡಿದು ತೃಪ್ತಿಯಾದರೆ ಮಳೆ ಬರುತ್ತದೆ ಎಂಬುದ ಇವರ ಗಾಢ ನಂಬಿಕೆಯಾಗಿದೆ.
ಈ ವಿಚಿತ್ರ ಆಚರಣೆ ಬಳಿಕ ಗ್ರಾಮಕ್ಕೆ ಮರಳಿದ ಜನರು ಬಂದ ದಾರಿಯಲ್ಲಿ ಜನ ಕೊಡದಿಂ ನೀರು ಹಾಕಿದ್ದಾರೆ. ನಂತರ ಸ್ವಾಮೀಜಿ ಕುಂಬಳಕಾಯಿಯ ಮೇಲೆ ಕರ್ಪೂರ ಇಟ್ಟು ಪೂಜೆ ಮಾಡಿ ನಂತರ ಕುಂಬಳಕಾಯಿ ಒಡೆದ ಬಳಿಕ ಎಲ್ಲರೂ ತಂತಮ್ಮ ಮನೆಗಳಿಗೆ ತೆರಳಿದ್ದಾರೆ.
ಕಳೆದ ವರ್ಷವೂ ನಡೆದಿತ್ತು ಈ ವಿಚಿತ್ರ ಆಚರಣೆ
ಗ್ರಾಮದಲ್ಲಿ ಸ್ವಾಮೀಜಿಯೊಬ್ಬರು ಸ್ಮಶಾನದಲ್ಲಿ ಹೂಳಲಾಗಿರುವ ಶವಗಳ ಬಾಯಿಗೆ ನೀರು ಹಾಕಿದರೆ ಮಳೆಯಾಗುತ್ತದೆ ಎಂದು ಹೇಳಿದ್ದರಂತೆ. ಕಳೆದ ವರ್ಷ ಮಳೆ ಬಾರದಿದ್ದಾಗ ಈ ರೀತಿ ಆಚರಣೆ ಮಾಡಲಾಗಿತ್ತು. ವಿಚಿತ್ರ ಎಂಬಂತೆ ಈ ಆಚರಣೆ ಬಳಿಕ ಮಳೆಯು ಬಂದಿತ್ತಂತೆ. ಈ ವರ್ಷ ಜೂನ್ ಕಳೆಯುತ್ತ ಬಂದರೂ ಮಳೆಯಾಗಿಲ್ಲ. ಈ ವರ್ಷವೂ ಮತ್ತೆ ಗೋರಿಯಲ್ಲಿರುವ ಶವದ ಬಾಯಿಗೆ ನೀರು ಬಿಡುವ ಕೆಲಸ ಮಾಡಿದ್ದಾರೆ. ಈ ಆಚರಣೆ ಮುಗಿದ 10 ದಿನದೊಳಗೆ ಮಳೆ ಆಗಲಿದೆ ಎಂದೂ ಸ್ವಾಮೀಜಿ ಹೇಳಿದ್ದಾರೆ. ಈ ವಿಷಯ ಈಗ ಸಾಕಷ್ಟು ಚರ್ಚೆಗೂ ಗ್ರಾಸ ಒದಗಿಸಿದೆ. ಈ ವಿಚಿತ್ರ ಆಚರಣೆಯಿಂದ ಮಳೆಯಾಗುತ್ತಾ ಎಂದೂ ಜನ ಚರ್ಚಿಸುತ್ತಿದ್ದಾರೆ.