ವ್ಯಕ್ತಿಯನ್ನು ಅರೆಬೆತ್ತಲೆಯಾಗಿ ಕೂಡಿ ಹಾಕಿದ ಆರೋಪ- ಬಂಕ್ ಮಾಲಿಕರ ವಿರುದ್ಧ ಕಠಿಣ ಕ್ರಮಕ್ಕೆ ಸಚಿವರ ಸೂಚನೆ- ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

ವಿಜಯಪುರ: ಡೀಸೆಲ್ ಬಾಕಿ ಹಣ ನೀಡಿಲ್ಲ ಎಂಬ ಆರೋಪದಡಿ ಪೆಟ್ರೋಲ್ ಬಂಕ್ ಮಾಲಿಕರು ವ್ಯಕ್ತಿಯೊಬ್ಬನನ್ನು ಸುಮಾರು 12 ದಿನಗಳಿಂದ ಬಂಕಿನಲ್ಲಿ ಅರೆಬೆತ್ತಲೆಯಾಗಿ ಕೂಡಿ ಹಾಕಿದ ಆರೋಪ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕೇಳಿ ಬಂದಿದೆ.

ಈ ಕುರಿತು ಮಾಧ್ಯಮಗಳ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುಮಾರ ಅವರಿಗೆ ಕರೆ ಮಾಡಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.

ಘಟನೆ ಹಿನ್ನೆಲೆ

ಮುದ್ದೇಬಿಹಾಳದ ಮೌನೇಶ ಪತ್ತಾರ ಎಂಬ ವ್ಯಕ್ತಿ ಪಟ್ಟಣದಲ್ಲಿರುವ ಭೋಸಲೆ ಪೆಟ್ರೋಲ್ ಬಂಕಿನಲ್ಲಿ ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ.  ತಮಿಳುನಾಡು ಮೂಲoದ ಶಿವಶಕ್ತಿ ಬೋರ್ ವೆಲ್ಸ್ ಉಸ್ತುವಾರಿಯಾಗಿ ಮೌನೇಶ ಪತ್ತಾರ ಕೆಲಸ ಮಾಡುತ್ತಿದ್ದ.  ಈ ಕಂಪನಿಗೆ ಸೇರಿದ ವಾಹನಗಳಿಗೆ ಭರತ ಬೋಸಲೆ ಎಂಬುವರಿಗೆ ಸೇರಿದ ಪೆಟ್ರೋಲ್ ಬಂಕಿನಲ್ಲಿ ಡೀಸೆಲ್ ಹಾಕಿಸಲಾಗಿತ್ತು.

ಮುದ್ದೇಬಿಹಾಳ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಪೆಟ್ರೋಲ್ ಬಂಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಆದರೆ, ಶಿವಶಕ್ತಿ ಬೋರವೆಲ್ಸ್ ನವರು ಕಳೆದ ನಾಲ್ಕೈದು ವರ್ಷಗಳಿಂದ ರೂ. 10 ರಿಂದ ರೂ. 15 ಲಕ್ಷ ಮೌಲ್ಯದ ಡೀಸೆಲ್ ಹಾಕಿಸಿಕೊಂಡು ಬಾಕಿ ಹಣ ನೀಡದೆ ಹೋಗಿದ್ದಾರೆ ಎನ್ನಲಾಗಿದೆ.  ಹೀಗಾಗಿ ಈ ಬೋರವೆಲ್ಸ್ ನವರಿಗೆ ಡೀಸೆಲ್ ಹಾಕಿಸುಲ್ಲಿ ಮಧ್ಯವರ್ತಿ ಪಾತ್ರ ವಹಿಸಿದ್ದ ಮೌನೇಶ ಪತ್ತಾರನಿಗೆ ಪೆಟ್ರೋಲ್ ಬಂಕಿನವರು ಹಣ ಕೇಳಿದ್ದಾರೆ.  ಆತ ನೀಡದಿದ್ದಾಗ ಕಳೆದ 12 ದಿನಗಳಿಂದ ಆತನನ್ನು ಅರೆಬೆತ್ತಲೆಯಾಗಿ ಕೂಡಿಸಿದ್ದಾರೆ.  ಈ ವಿಷಯ ತಿಳಿದ ಮೌನೇಶ ಪತ್ತಾರ ಪತ್ನಿ ರಂಗಮ್ಮ ಮತ್ತು ಮಕ್ಕಳಾದ ಸೌಮ್ಯ, ಸ್ನೇಹಾ, ಸಂದೇಶ ಹಾಗೂ ಚಂದ್ರು ಕಳೆದ ಮೂರು ದಿನಗಳಿಂದ ಪೆಟ್ರೋಲ್ ಬಂಕಿನಲ್ಲಿಯೇ ಕುಳಿತುಕೊಂಡಿದ್ದಾರೆ.  ತಮ್ಮ ಪತಿಯನ್ನು ವಿರುದ್ಧ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಕ್ಕೆ ರಂಗಮ್ಮ ಪತ್ತಾರ ಕಣ್ಣೀರು ಹಾಕಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ರಂಗಮ್ಮ ಪತ್ತಾರ, ಕಳೆದ ಮೂರು ದಿನಗಳಿಂದ ಪೆಟ್ರೋಲ್ ಬಂಕ್ ನವರು ತಮ್ಮ ಪತಿಯನ್ನು ಬಿಡುಗಡೆ ಮಾಡಿಲ್ಲ.  ಅಲ್ಲದೇ, ತಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಕೂಡ ಹೊರಗಡೆ ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ವರದಿ ಪ್ರಸಾರ, ತಕ್ಷಣ ಸ್ಪಂದಿಸಿದ ಸಚಿವ ಎಂ. ಬಿ. ಪಾಟೀಲ

ಈ ಅಮಾನವೀಯ ಘಟನೆಯ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ.  ಈ ಮಧ್ಯೆ ಹುಬ್ಬಳ್ಳಿ ಪ್ರವಾಸದಲ್ಲಿರುವ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಈ ವಿಷಯ ತಿಳಿದ ತಕ್ಷಣ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುನಾರ ಅವರಿಗೆ ದೂರವಾಣಿ ಕರೆ ಮಾಡಿ ಘಟನೆಯ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸಿ ಘಟನೆಯ ಸತ್ಯಾಸತ್ಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ವ್ಯಕ್ತಿಯನ್ನು ರಕ್ಷಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು 

ಈ ಮಧ್ಯೆ, ಸಚಿವರಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಮುದ್ದೇಬಿಹಾಳ ತಹಶೀಲ್ದಾರ್ ಟಿ ರೇಖಾ ಮತ್ತು ಪಿ. ಎಸ್. ಐ ಆರೀಫ್ ಮುಶಾಪುರೆ ವಿಚಾರಣೆ ನಡೆಸಿದ್ದಾರೆ.  ಅಲ್ಲದೇ, ಮೌನೇಶ ಪತ್ತಾರ ಅವರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.  ಈ ಸಂದರ್ಭದಲ್ಲಿ ರಂಗಮ್ಮ ಪತ್ತಾರ ತನ್ನ ಪತಿಯನ್ನು ರಕ್ಷಿಸಿ ಕೊಡುವಂತೆ ಪಿ. ಎಸ್. ಐ. ಆರೀಫ್ ಮುಶಾಪುರಿ ಅವರಿಗೆ ಕಾಲಿಗೆ ನಮಸ್ಕರಿಸಿದ್ದಾರೆ.

ಅಷ್ಟೇ ಅಲ್ಲ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೋಸಲೆ ಬಂಕ್ ನಲ್ಲಿ ಸಿಬ್ಬಂದಿಯ ವಿಚಾರಣೆ ನಡೆಸಿದ್ದ್ದಾರೆ.  ಅಲ್ಲದೇ, ಬಂಕ್ ನಲ್ಲಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಮಧ್ಯೆ, ಮೌನೇಶ ಪತ್ತಾರನನ್ನು ಪೊಲೀಸ್ ಠಾಣೆಗೆ ಕರೆಯೋದ್ಯದ ನಂತರ ಆತನ ಪತ್ನಿ ಮತ್ತು ಮಕ್ಕಳು ಕೂಡ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ತೆರಳಿದ್ದಾರೆ.

Leave a Reply

ಹೊಸ ಪೋಸ್ಟ್‌