ಬೆಂಗಳೂರು: ರಾಜ್ಯ ಸರಕಾರದ ಯುವನಿಧಿನ ಯೋಜನೆಯನ್ನು ಎಲ್ಲ ನಿರುದ್ಯೋಗಿಗಳಿಗೆ ವಿಸ್ತರಿಸುವಂತೆ ಆಗ್ರಹಿಸಿ ಎಐಡಿವೈಓ ಮುಖಂಡರ ನಿಯೋಗ ಸಿಎಂ ಎಸ್. ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಜೂ. 26 ಎಐಡಿವೈಓ ಸಂಸ್ಥಾಪನೆ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಸಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ ನೇತೃತ್ವದ ನಿಯೋಗ ಸಿಎಂ ಭೇಟಿ ಮಾಡಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ನಿರುದ್ಯೋಗಿಗಳ ಸಮಸ್ಯೆಗೆ ಸ್ಪಂದಿಸಲು ರಾಜ್ಯ ಸರಕಾರ ಯುವನಿಧಿ ಗ್ಯಾರಂಟಿ ಸ್ಕೀಂ ಘೋಷಿಸಿರುದ್ದು ಸ್ವಾಗತಾರ್ಹವಾಗಿದೆ. ಹಲವ ವರ್ಷಗಳಿಂದ ನಿರುದ್ಯೋಗಿಗಳಾಗಿರುವವರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ಐದು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಶುಲ್ಕವನ್ನು ರೂ. 1000 ಎಂದು ನಿಗದಿ ಪಡಿಸಿದ್ದು, ಇದು ದುಬಾರಿಯಾಗಿದೆ. ಇದನ್ನು ಹಿಂಪಡೆಯಬೇಕು. ಅಲ್ಲದೇ, ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಿಗೆ ತೆರಳುವ ನಿರುದ್ಯೋಗಿ ಯುವಕರಿಗೆ ಬಸ್ಸಿನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ನೇಮಕಾತಿಯಲ್ಲಿನ ಭ್ರಷ್ಟಾಚಾರ ತಡೆಯಬೇಕು. ಯುವಜನರನ್ನು ದಾರಿ ತಪ್ಪಿಸುವ ವಿಚ್ಚಿದ್ರಕಾರಿ ಶಕ್ತಿಗಳನ್ನು ಮಟ್ಟ ಹಾಕಬೇಕು. ದ್ವೇಷದ ರಾಜಕಾರಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೇಮಕಾತಿಗಾಗಿ ಎಲ್ಲಾ ತರಹದ ಅರ್ಜಿ ಶುಲ್ಕಗಳನ್ನು ಕೈಬಿಡಬೇಕು. ಯುವಜನತೆಯ ಸಾಂಸ್ಕೃತಿಕ ಅಧ:ಪತನಕ್ಕೆ ಕಾರಣವಾದ ಮಾಧ್ಯಮಗಳಲ್ಲಿನ ಅಶ್ಲೀಲತೆ, ಮಧ್ಯ ಮಾದಕ ವಸ್ತುಗಳಿಗೆ ಕಡಿವಾಣ ಹಾಕಬೇಕು ಸೇರಿದಂತೆ 10 ಬೇಡಿಕೆಗಳನ್ನು ಒಳಗೊಂಡಿರುವ ಮನವಿ ಪತ್ರವನ್ನು ಈ ನಿಯೋಗ ಮುಖ್ಯಮಂತ್ರಿಗೆ ಸಲ್ಲಿಸಿತು. ಈ ಮನವಿಗೆ ಎಸ್. ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ನಿಯೋಗದಲ್ಲಿ ಎಐಡಿವೈಓ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ, ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ರಾಜ್ಯ ಉಪಾಧ್ಯಕ್ಷ ಕೃಷ್ಣ, ರಾಜ್ಯ ಖಜಾಂಚಿ ಜಯಣ್ಣ, ರಾಜ್ಯ ಸಮಿತಿ ಸದಸ್ಯರಾದ ರಾಜಶೇಖರ, ಪೂರ್ಣಿಮ, ಸದಸ್ಯ ಅರುಣಕುಮಾರ ಉಪಸ್ಥಿತರಿದ್ದರು.