ಬಾಕಿ ಬಿಲ್ ಹಣ ಪಾವತಿಸಲು ಆಗ್ರಹ- ಗುತ್ತಿಗೆದಾರರ ಸಂಘದಿಂದ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

ವಿಜಯಪುರ: ಕಳೆದ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ. ಆರ್. ರೂಡಗಿ, ನಾನಾ ಇಲಾಖೆಗಳಲ್ಲಿ ಹಾಗೂ ನಿಗಮಗಳಲ್ಲಿ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರ ಬಿಲ್ ಗಳು ಕಳೆದ ಎರಡು ವರ್ಷದಿಂದ ಭಾಗಶಃ ಬಟವಡೆಯಾಗಿರುತ್ತವೆ.  ಇದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿ ತೀವ್ರ ತೂಂದರೆಯಾಗಿದೆ.  ಅಲ್ಲದೇ, ಮಾ. 2023 ಆರ್ಥಿಕ ವರ್ಷ ಮುಕ್ತಾಯ ಹಂತದಲ್ಲಿ ಅನುದಾನ ಬಿಡುಗಡೆ ನಿರೀಕ್ಷಿಸಲಾಗಿತ್ತು.  ಆದರೆ, ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ.  ಅಲ್ಲದೇ, ಇಂಥ ಸಂದಿಗ್ಧ ಪರಿಸ್ಥಿಯಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮತ್ತು ಹೊಸ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ ಅನುದಾನವು ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿತ್ತು.  ಆದರೆ, ಹೊಸ ಸರಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಬಿಲ್ ಗಳನ್ನು ಬಟವಾಡೆ ಮಾಡಬಾರದು ಎಂದು ಸ್ಥಗಿತಗೊಳಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಗುತ್ತಿಗೆದಾರರು ಕಳೆದ 2-3 ವರ್ಷಗಳಿಂದ ಹಣವು ಸಕಾಲಕ್ಕೆ ಬಿಡುಗಡೆಯಾಗದ ಕಾರಣ ಸ್ಥಳೀಯ ಹಣಕಾಸು ಸಂಸ್ಥೆಗಳಿಂದ ಮತ್ತು ಬ್ಯಾಂಕುಗಳಿಂದ ಬಡ್ಡಿ ರೂಪದಲ್ಲಿ ಪಡೆದಿರುವ ಸಾಲ ತೀರಿಸಲಾಗದ ಕಾರಣ ಆ ಹಣಕಾಸು ಸಂಸ್ಥೆಗಳು ನೋಟಿಸ್‍ ನೀಡುವ ಮೂಲಕ ಪಡೆದ ಸಾಲ ಹಾಗೂ ಬಡ್ಡಿಯನ್ನು ಶೀಘ್ರದಲ್ಲೇ ಹಣ ಪಾವತಿಸಲು ಒತ್ತಾಯಿಸುತ್ತಿದ್ದಾರೆ.  ಅಲ್ಲದೇ, ಕಾಮಗಾರಿಗಳಿಗೆ ಸಾಮಗ್ರಿ ಪೂರೈಸಿದ ಪೂರೈಕೆದಾರರೂ ಕೂಡ ತಮ್ಮ ಬಿಲ್‍ಗಳ ಪಾವತಿಸುವಂತೆ ಒತ್ತಾಯಿಸಿ ಬಡ್ಡಿಯನ್ನೂ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.  ಜೊತೆಗೆ ನಮ್ಮಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು. ಮೇಲ್ವಿಚಾರಕರು, ವಾಹನ ಚಾಲಕರು ಹಾಗೂ ಇನ್ನಿತರ ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಿದ ಸಂಬಳ ಬಿಡುಗಡೆ ಮಾಡಲು ತೊಂದರೆಯಾಗಿದೆ.  ಈ ರೀತಿ ಖಾಲಿ ಇರುವ ಸಿಬ್ಬಂದಿಗಳಿಗೆ ವೇತನ ನೀಡುವುದೂ ಕೂಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ಹೊರೆಯಾಗಿದೆ ಎಂದು ಸಿ. ಆರ್. ರೂಡಗಿ ಹೇಳಿದರು.

ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಬಾಕಿ ಬಿಲ್ಲೋ ಬೇಗ ಬಿಡುಗಡೆ ಮಾಡುವಂತೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು

ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅರುಣ ಎಸ್. ಮಠ ಮಾತನಾಡಿ, ವಿದ್ಯುತ್ ದರ ಕೂಡ ಹೆಚ್ಚಾಗಿರುವದರಿಂದ ಸಮಸ್ಯೆ ಉಲ್ಬಣಿಸುವಂತೆ ಮಾಡಿದೆ.  ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕೂಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ.  ಈ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿರುವ ಬಿಲ್ ನ್ನು ಬೇಗ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕೂಡಲೆ ಸಮಸ್ಯೆ ಬಗೆಹರಿಸದಿದ್ದರೆ ಲೋಕೋಪಯೋಗಿ ಇಲಾಖೆ ಎದುರು ನ್ಯಾಯ ಸಿಗುವವರೆಗೂ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಎ. ಎಸ್. ಪಾಟೀಲ. ಬಿ. ಎಸ್. ಬಿರಾದಾರ, ರುಣವಾಲ, ಶರಣಪ್ಪ ಆಲೂರ, ಎಸ್. ಸಿ. ಚಿಕ್ಕರೆಡ್ಡಿ, ಗುರು ಕೌಲಗಿ, ಎ. ಸಿ. ಗಫೂರ, ಜಿ. ಜಿ. ಸಾಲಗಾರ ಮಂಜುನಾಥ ಬಿರಾದಾರ, ಆರ್. ಎಸ್. ಚೋರಗಿ, ರಾಜು ಸಜ್ಜನ, ಎ. ಜಿ. ಪಾಟೀಲ, ಬಿ. ಬಿ. ತುಪ್ಪದ, ಎಸ್. ಎಸ್. ಕಬಾಡೆ, ಎಸ್. ಕೆ. ಅಂಗಡಿ, ಆರ್. ಎಸ್. ಮುರಳಾಪುರ. ಜಿ. ಆರ್. ಬಿರಾದಾರ, ರೋಹನ ಪಟೇಲ್, ಅಮೀರ ಪಟೇಲ್, ಜಯದೇವ ಬಿರಾದಾರ, ಜೆ. ಜಿ. ಕಲ್ಲೂರ, ಹಣನಂತ ಚಿಂಚಲಿ, ಲಕ್ಷ್ಮಣ ಮಡಗೊಂಡ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌