ವಿಜಯಪುರ: ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೆಸರನ್ಬು ನಾಮಕರಣ ಮಾಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಮಹಿಳೆಯರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸರಕಾರ ಘೋಷಿಸಿದ್ದ ಶಕ್ತಿ ಯೋಜನೆಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಜೂ. 11 ರಂದು ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮಹಿಳೆಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಸ್ಪೂರ್ತಿಯಾಗಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೆಸರನ್ನು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಸಾರ್ವಜನಿಕರಿಂದ ಬಹಳಷ್ಟು ಬೇಡಿಕೆ ಬಂದಿದ್ದವು. ಈ ಸಂದರ್ಭದಲ್ಲಿ ಬೇಡಿಕೆಯ ಕುರಿತು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಜನರಿಗೆ ಭರವಸೆ ನೀಡಿದ್ದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರೊಂದಿಗೆ ಹೋರಾಡಿ ಹುತಾತ್ಮಳಾದ ವೀರರಾಣಿ ಕಿತ್ತೂರು ಚೆನ್ನಮ್ಮ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅಲ್ಲದೇ, ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು 2013-18ರ ಅವಧಿಯಲ್ಲಿ ನಮ್ಮ ಸರಕಾರ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಐತಿಹಾಸಿಕ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ ಆರಂಭಿಸಲಾಗಿದೆ. ಅಲ್ಲದೇ, ಈ ವೃತ್ತದಲ್ಲಿ ರಾಣಿ ಚೆನ್ನಮ್ಮ ಅವರ ಬೃಹತ್ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ತಾವು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೆಸರನ್ನು ನಾಮಕರಣ ಮಾಡುವ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಚಿವರು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ ಸ್ಥಾಪಿಸಲು ಕ್ರಮ ಕೈಗೊಂಡಿದ್ದ ಎಂ. ಬಿ. ಪಾಟೀಲರು
ಸುಮಾರು ಐದು ದಶಕಗಳಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ ನಿರ್ಮಾಣ ನನೆಗುದಿಗೆ ಬಿದ್ದಿತ್ತು. 2013-18ರ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ. ಬಿ. ಪಾಟೀಲರು ಕಾನೂನು ಸೇರಿದಂತೆ ನಾನಾ ತೊಡಕುಗಳನ್ನು ನಿವಾರಿಸಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ ಆರಂಭಿಸಿದ್ದರು. ಈ ವೃತ್ತದಲ್ಲಿ ಪ್ರತಿಷ್ಠಾಪಿಸಲು ಚೆನ್ನಮ್ಮರ ಬೃಹತ್ ಪ್ರತಿಮೆಯೂ ಅನಾವರಣಕ್ಕೆ ಸಿದ್ದವಾಗಿದೆ.