ವಿಜಯಪುರ: ವಾಣಿಜ್ಯ ಮೌಲ್ಯವುಳ್ಳ ಮೀನುಗಾಳಾದ ಸೀ ಬಾಸ್, ಸುರಗಿ, ತಿಲಾಫಿಯಾ ಮೀನುಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸದೃಡವಾಗಬಹುದು ಎಂದು ಮಂಗಳೂರು ವಿಭಾಗದ ಸಾಗರೊತ್ಪನ ಮತ್ತು ರಪ್ತು ಅಭಿವೃದ್ದಿ ಪ್ರಾದಿಕಾರದ ಉಪನಿರ್ದೇಶಕ ರಾಜಕುಮಾರ ನಾಯ್ಕ ಹೇಳಿದರು.
ವಿಜಯಪುರ ನಗರದ ಹೊರವಲಯದಲ್ಲಿ ಭೂತನಾಳ ಕೆರೆ ಬಳಿ ಇರುವ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ,ದಲ್ಲಿ ಆಯೋಜಿಸಲಾಗಿದ್ದ ಸಮಗ್ರ ಮೀನು ಸಾಕಾಣಿಕೆÉ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೀ ಬಾಸ್ ಮೀನು ಕೃಷಿಯನ್ನು ಉತ್ತೆಜಿಸಲು ಸಾಗರೊತ್ಪನ ಮತ್ತು ರಪ್ತು ಅಭಿವೃದ್ದಿ ಪ್ರಾದಿಕಾರ, ಮಂಗಳೂರು ಸಂಸ್ಥೆಯು ಮುಂದಾಗಿದ್ದು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಫಲಾನುಭವಿಗಳು ಮುಂದೆ ಬಂದರೆ ಅವರಿಗೆ ಸೀ ಬಾಸ್ ಮೀನು ಕೃಷಿಗೆ ತಗಲುವ ಸುಮಾರು ರೂ. 6 ಲಕ್ಷ ಮೊತ್ತದ ಮೀನು ಮರಿಗಳು, ಆಹಾರ ಮತ್ತು ತಾಂತ್ರಿಕ ಸಲಹೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ವಿಜಯಪುರ ಜಿಲ್ಲಾ ಉಪ್ಪಾರ ಸಮಾಜದ ಮಹಿಳಾ ಅಧ್ಯಕ್ಷೆ ರೇಣುಕಾ ಪರಸಪ್ಪಗೋಳ ಮಾತನಾಡಿ, ಮಹಿಳಾ ಫಲಾನುಭವಿಗಳು ಮೀನುಗಾರಿಕೆಯಲ್ಲಿನ ಅಲಂಕಾರಿಕ ಮೀನು ಕೃಷಿ, ಹೈನು ಮತ್ತು ಮೀನು ಕೃಷಿ, ತೋಟಗಾರಿಕೆ ಮತ್ತು ಮೀನು ಕೃಷಿಗಳಲ್ಲಿ ತೊಡಗಿಸಿಕೊಂಡರೆ ಸ್ಥಳಿಯವಾಗಿ ಲಾಭಗಳಿಸುವ ಜೊತೆಗೆ ಉದ್ಯೋಗವನ್ನು ಸೃಷ್ಠಿಸಬಹುದು ಎಂದು ಹೇಳಿದರು.
ವಿಜಯಪುರ ಮತ್ಸ್ಯ ಸೇವಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ರ ಜಾಧವ ಮಾತನಾಡಿ, ಜಿಲ್ಲೆಯಲ್ಲಿ ಅಧಿಕವಾದ ಜಲಸಂಪನ್ಮೂಲ ಹೊಂದಿರುವುದರಿಂದ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ನಮ್ಮ ಸಂಸ್ಥೆಯಿಂದ ರೈತರಿಗೆ ಮಣ್ಣು ಮತ್ತು ನೀರಿನ ಪರೀಕ್ಷೆಯನ್ನು ಮಾಡಿಕೊಡಲಾಗುವುದು ಎಂದು ಹೇಳಿದರು.
ಭೂತನಾಳ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಸಹ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಿಜಯಕುಮಾರ ಎಸ್. ಮಾತನಾಡಿದರು.