ಯತ್ನಾಳರಿಂದ ಬಿಜೆಪಿಗೆ ಡ್ಯಾಮೇಜ್- ನಿರಾಣಿ: ನಾನಾರಿಗೂ ಹೆದರಲ್ಲ ನನ್ನ ರಾಜಕೀಯವೇ ಬೇರೆ- ಜಿಗಜಿಣಗಿ: ಯತ್ನಾಳ ಇಂಥ ರಾಜಕೀಯ ನಿಲ್ಲಿಸಲಿ- ನಡಹಳ್ಳಿ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮಾಜಿ ಸಚಿವ ಮುರುಗೇಶ ನಿರಾಣಿ, ಸಂಸದ ರಮೇಶ ಜಿಗಜಿಣಗಿ ಮತ್ತು ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಮುರುಗೇಶ ನಿರಾಣಿ,  ಹೇಳಿಕೆ ಮತ್ತು ವರ್ತನೆಯಿಂದ ಬಿಜೆಪಿಗೆ ಡ್ಯಾಮೇಜ್ ಆಗಿದ್ದು, ಅವರ ಪಾಪದ ಕೊಡ ತುಂಬಿದೆ ಎಂದು ವಾಗ್ದಾಳಿ ನಡೆಸಿದರು.

ಸಂಕೇಶ್ವರ ತ್ಯಾಗದಿಂದ ಯತ್ನಾಳ ಕೇಂದ್ರ ಸಚಿವರಾಗಿದ್ದರು

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅಂದಿನ ಸಂಸದ ವಿಜಯ ಸಂಕೇಶ್ವರ ಅವರು ಕಾರ್ಯ ಬಾಹುಳ್ಯದಿಂದಾಗಿ ಸಚಿವ ಸ್ಥಾನ ಒಪ್ಪಿರಲಿಲ್ಲ.  ಅವರ ತ್ಯಾಗ ಮತ್ತು ಸಲಹೆಯಂತೆ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಶಿಫಾರಸು ಮಾಡಿದ್ದರಿಂದ ಯತ್ನಾಳ ಅವರು ಕೇಂದ್ರ ಸಚಿವರಾಗಿದ್ದರು.  ಜವಳಿ ಮತ್ತು ರೇಲ್ವೆ ಸಚಿವರಾಗಿದ್ದರೂ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಮುರುಗೇಶ ನಿರಾಣಿ ಕಿಡಿ ಕಾರಿದರು.

ಭಾರತ ಅಣು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಮತ್ತು ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಪತನವಾಗುವ ವೇಳೆ ಇದೇ ಯತ್ನಾಳ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದರು.  ಆದರೆ, ಅಂದು ಬಿಜೆಪಿ ಮುಖಂಡ ಅನಂತಕುಮಾರ ಅವರು ಇವರನ್ನು ತಡೆದಿದ್ದರು.  ನಂತರ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಜೆಡಿಎಸ್ ಸೇರಿದ್ದರು ಆಗ ಅವರು ಟೋಪಿ ಹಾಕಿಕೊಂಡು ನಮಾಜ್ ಮಾಡಿದ್ದರು.  ಈಗ ಹಿಂದೂ ಹುಲಿ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಟೀಕಿಸಿದರು.

ಮಾಜಿ ಸಚಿವ ಮುರುಗೇಶ ನಿರಾಣಿ

ವಿಜಯಪುರದಲ್ಲಿ ಹೇಗೆ ಗೆದ್ದಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ, ಬೇರೆ ಜಿಲ್ಲೆಯಲ್ಲಿ ಬಿಡಲಿ ವಿಜಯಪುರ ಜಿಲ್ಲೆಯಲ್ಲೂ ಯಾರೊಬ್ಬ ಬಿಜೆಪಿ ಶಾಸಕರನ್ನು ಅವರು ಗೆಲ್ಲಿಸಲಿಲಿಲ್ಲ.  ಈ ಮುಂಚೆ ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ವಿಜಯ ಸಂಕೇಶ್ವರ, ನನಗೆ ಸೇರಿದಂತೆ ಎಲ್ಲರಿಗೂ ಬೈದಿದ್ದಾರೆ.  ಈಗಲೂ ಸ್ವಪಕ್ಷೀಯರ ವಿರುದ್ಧ ಮತ್ತೆ ಆರೋಪಿಸುತ್ತಿದ್ದಾರೆ ಎಂದು ಅವರು ದೂರಿದರು.

ಮಂದ್ಯಾಗ ಒದಿಯುವುದು, ಸಂದ್ಯಾಗ ಕಾಲ ಹಿಡಿಯುವ ಕೆಲಸ ಮಾಡಿದ್ದಾರೆ

ಇದೇ ವೇಳೆ, ಈ ಹಿಂದೆ ಶಾಸಕ ಯತ್ನಾಳ ಅವರು ಬಿಜೆಪಿಯಲ್ಲಿ ರೂ. 2500 ಕೋ. ಕೊಟ್ಟರೆ ಸಿಎಂ, ಮಂತ್ರಿ ಮಾಡಲು ರೂ. 100 ಕೋ., ರೂ. 10-25 ಕೋ. ಕೊಟ್ಟವರಿಗೆ ನಿಗಮ ಮಂಡಳಿ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದರು.  ಈಗ ಮತ್ತದೇ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ.  ಇದರಿಂದ ಬಿಜೆಪಿಗೆ ಡ್ಯಾಮೇಜ್ ಆಗಿದೆ ಎಂದು ಮಾಜಿ ಸಚಿವರು ಆರೋಪಿಸಿದರು.

ಮಂದ್ಯಾಗ ಒದಿಯುವುದು, ಸಂದ್ಯಾಗ ಕಾಲ ಹಿಡಿಯುವ ಕೆಲಸವನ್ನು ಯತ್ನಾಳ ಮಾಡಿದ್ದಾರೆ.  ಈ ಮುಂಚೆ ಎ. ಎಸ್. ಪಾಟೀಲ ನಡಹಳ್ಳಿ ವಿರುದ್ಧ ದೇವರ ಹಿಪ್ಪರಗಿಯಲ್ಲಿ ಹೀನಾಯವಾಗಿ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ.  ನಂತರ ಜೆಡಿಎಸ್ ನಿಂದ ವಿಜಯಪುರದಲ್ಲಿ ಸ್ಪರ್ಧಿಸಿ ಸೋತಿದ್ದು‌ ಯಾಕೆ? ಎಂದು ಪ್ರಶ್ನಿಸಿದ ಮುರುಗೇಶ ನಿರಾಣಿ, ಬೊಮ್ಮಾಯಿ ಸಿಎಂ‌ ಆಗಿದ್ದಾಗ ಜಾತಿ ಹೆಸರಿನಲ್ಲಿ ಬ್ಲ್ಯಾಕಮೇಲ್ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ವಿಜಯಪುರ ಸಭೆ ತಡೆಯಲು ಯತ್ನಾಳ ಪ್ರಯತ್ನ

ಆತ್ಮಾವಲೋಕನ ಸಭೆಗಳಲ್ಲಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆಯಲ್ಲಿ ತಾವು ಜೋಕರ್ ಎಂದು ಹೇಳಿಕೊಂಡು 3 ಗಂಟೆಗಳ ನಿಗದಿತ ಸಭೆಯಲ್ಲಿ ಇವರೇ 45 ನಿಮಿಷ ಮಾತನಾಡಿದ್ದಾರೆ.  ವಿಜಯಪುರ ಸಭೆ ವಿಳಂಬವಾಗಲಿ ಅಥವಾ ನಡೆಯಬಾರದು ಎಂದು ದುರುದ್ದೇಶ ಅವರಲ್ಲಿತ್ತು.  ಶಶಿಕಲಾ ಜೊಲ್ಲೆ ಅವರು ಸಂಸದ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದಕ್ಕೆ ಯತ್ನಾಳ ಬೆಂಬಲಿಗರು ಗೊಂದಲ‌ ಸೃಷ್ಠಿಸಿದ್ದಾರೆ.  ಯತ್ನಾಳ ನಿಗದಿತ ಸಮಯಕ್ಕಿಂತ ಮೂರೂವರೆ ಗಂಟೆ ವಿಳಂಬವಾದರೂ ಯತ್ನಾಳ ಸಭೆಗೆ ಬರಲಿಲ್ಲ.  ಬೇರೆ ಶಾಸಕರು ವಿಜಯಪುರಕ್ಕೆ ಬಂದಾಗ ಇವರು ಅವರನ್ನು ಸ್ವಾಗತಿಸುವುದು ಬಿಡಲಿ.  ಸಭೆಗೂ ಬರಲಿಲ್.  ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಜೊತೆ ವಿಷಯ ಹಂಚಿಕೊಂಡಿದ್ದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.

ಯತ್ನಾಳ ಪಾಪದ ಕೊಡ ತುಂಬಿದೆ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪಾಪದ ಕೊಡ ತುಂಬಿದೆ.  ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಲ್ಲ.  ಒಳ ಒಪ್ಪಂದ ಯತ್ನಾಳ ಮಾಡಿಕೊಂಡಿದ್ದಾರೆ.  ಆದರೆ, ನಾವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಕೆಲಸ ಮಾಡುತ್ತೇವೆ.  ನನ್ನ ವಿರುದ್ಧ ಆರೋಪ ಮಾಡುವ ಯತ್ನಾಳ ಅವರು, ನಿರಾಣಿ ಯಾರನ್ನು ಸೋಲಿಸಲು ಯಾರಿಗೆ, ಯಾವಾಗ ಹಣ ನೀಡಿದ್ದಾರೆ ಸ್ಪಷ್ಡಪಡಿಸಲಿ.  2012ರಲ್ಲಿ ನಾನು ಕೈಗಾರಿಕೆ ಸಚಿವನಾಗಿದ್ದಾಗ ಬಹುಮತ ಇಲ್ಲದಿದ್ದರೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿ. ಪಂ. ನಲ್ಲಿ ಬಿಜೆಪಿ ಸದಸ್ಯರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮಾಡಿದ್ದೆ.  ನೀವು‌ ಇಂಥ ಯಾವ ಕೆಲಸ ಮಾಡಿದ್ದೀರಿ? ನಾಲ್ಕು ವರ್ಷ ಬಿಜೆಪಿ ಅಧಿಕಾರದಲ್ಲಿದ್ದರೂ ವಿಜಯಪುರ ಮಹಾನಗರ ಪಾಲಿಕೆಗೆ ಯಾಕೆ ಚುನಾವಣೆ ನಡೆಸಲಿಲ್ಲ? ಸದಸ್ಯರ ಅಧಿಕಾರವನ್ನು ನೀವೆ ಅನುಭವಿಸಲಿಲ್ಲ? ಶುದ್ಧ ಹಸ್ತ ಎಂದು ಹೇಳಿಕೊಳ್ಳುವವರು ಅಧಿಕಾರಿಗಳಿಗೆ ಗೋಶಾಲೆ ಯಾಕೆ ಸಹಾಯ ನೀಡಲು‌ ಹೇಳಿದ್ದೀರಿ? ಎಂದು ಮುರುಗೇಶ ನಿರಾಣಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಬಬಲೇಶ್ವರಕ್ಕೆ ಪ್ರಚಾರಕ್ಕೆ ಮ. 3ಕ್ಕೆ ಸಮಯ ನಿಗದಿಯಾಗಿದ್ದರೂ ರಾತ್ರಿ 7ಕ್ಕೆ ಹೋಗಿ ಪ್ರಚಾರ ಮಾಡಿದಿರಿ.  ಅಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಯಾಕೆ ಮತ ಕೇಳಲಿಲ್ಲ? ಎಂದು ಪ್ರಶ್ನಿಸಿದ ಅವರು, 2ಎ ಮೀಸಲಾತಿ ಬೇಡಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದೀರಿ.  ವಿಜಯಪುರ ಜನ ಬಹಳ ಬುದ್ದಿವಂತರು ಮನಸ್ಸಯ ಮಾಡಿದರೆ ಗೋಳಗುಮ್ಮಟ ಕಟ್ಟಬಲ್ಲರು, ಇಲ್ಲದಿದ್ದರೆ ಬಾರಾ ಕಮಾನ್ ಮಾಡಬಹುದು ಎಂದು ಎಚ್ಚರಿಕೆ ನೀಡಿದರು.

ಇನ್ನು ಮುಂದಾದರೂ ತಮ್ಮ ವರ್ತನೆ, ಮಾತುಗಳ ಬಗ್ಗೆ ಎಚ್ಚರವಿರಲಿ.  ಈ ಹಿಂದೆ ಪಕ್ಷದಿಂದ ಉಚ್ಛಾಟಿಸಿದ ಸಂದರ್ಭದಲ್ಲಿ ಸುಧಾರಿಸುವುದಾಗಿ ಹೇಳಿ ಕೈಕಾಲು ಹಿಡಿದಾಗ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಒಂದು ಅವಕಾಶ ನೀಡಲಾಗಿದೆ.  ಆದರೆ, ಈಗ ಮತ್ತೆ ನಾಯಿ ಬಾಲದಂತೆ ವರ್ತಿಸುತ್ತಿದ್ದಾರೆ.  ರಾಜ್ಯ, ರಾಷ್ಟ್ರ ನಾಯಕರ ಗಮನಕ್ಕೆ ಈ ವಿಷಯ ತರುತ್ತೇವೆ.  ನಮಗೆ ಅಥವಾ ಅವರಿಗೆ ಹಾನಿಯಾದರೆ ತಪ್ಪಿಲ್ಲ, ಆದರೆ, ತಾ. ಪಂ., ಜಿ. ಪಂ. ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ತೊಂದರೆಯಾಗಬಾರದು.  ಅವರ ನಡತೆ ಸುಧಾರಿಸಬೇಕು, ಬಾಯಿಯಿಂದ ಬರುವ ಸಂಸ್ಕೃತ ಶಬ್ದಗಳು ಸುಧಾರಿಸಬೇಕು.  ವಿಧಾನ ಸಭೆ ಪ್ರತಿಪಕ್ಷದ ನಾಯಕನ ಆಯ್ಕೆ ವರಿಷ್ಠರಿಗೆ ಬಿಟ್ಟಿದ್ದು, ನಮ್ಮ ಕೈಯ್ಯಲ್ಲಿ ಇಲ್ಲ.  ಹೈಕಮಾಂಡ ಬಾಗಲಕೋಟೆ ಸಭೆಯ ಭಿನ್ನಮತ ಕುರಿತು ಯಾವುದೇ ವರದಿ ಕೇಳಿಲ್ಲ.  ಯತ್ನಾಳ ವಿಜಯಪುರದಲ್ಲಿ ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.

ಅವರು ಯಾವ ಯೋಜನೆ ರೂಪಿಸಿದರೂ ಅಲ್ಲಿ ಟೋಪಿ ಹಾಕುವ ಕೆಲಸ ಮಾಡಿದ್ದಾರೆ.  ಬೇರೆಯವರು, ಕಾರ್ಯಕರ್ತರ ಹಣದಲ್ಲಿ ಹೊಸ ಉದ್ಯಮ ಮಾಡಿ ಆ ಕಾರ್ಖಾನೆಗಳಿಗೆ ಕೀಲಿ ಹಾಕುತ್ತಾರೆ.  ಜ್ಞಾನಯೊಗಿ ಸಕ್ಕರೆ ಕಾರ್ಖಾನೆ ಇದಕ್ಕೆ ಉದಾಹರಣೆ.  ನಾವಿಬ್ಬರೂ ಅಣ್ಣ-ತಮ್ಮಂದಿರಂತೆ ಇದ್ದೇವು, ಈ ಸಂಬಂಧ ಹದಗೆಡಲು ಅವರೇ ಕಾರಣ ಎಂದು ಅವರು ಹೇಳಿದರು.

ಪಂಚಮಸಾಲಿ ಹೊಸ ಪೀಠ ಸ್ಥಾಪನೆ ವಿಚಾರ

ರಾಜ್ಯದಲ್ಲಿ ಪಂಚಮಸಾಲಿ ಸಮಾಜ ದೊಡ್ಡದಿದೆ.  ಈಗ ಇರುವ 80 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಎರಡು ಪೀಠ ಮಾಡುತ್ತೇವೆ.  ಸಮಾಜದ ಎಲ್ಲ ಜನರಿಗೂ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ಸ್ವಾಮೀಜಿಗಳ ಸೇವೆ ಸಿಗುವಂತಾಗಬೇಕು ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ

ಇದೇ ವೇಳೆ ಖಾರವಾಗಿ ಪ್ರತಿಕ್ರಿಯೆ ನೀಡಿದ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ಸಭೆ ನಡೆಯಬಾರದು ಎಂಬ ಉದ್ದೇಶದಿಂದ ಗಲಾಟೆ ನಡೆಸಲಾಗಿದೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒಂಬತ್ತು ವರ್ಷಗಳ ಸಾಧನೆಗಳು ವಿಜಯಪುರ ಜನರಿಗೆ ತಿಳಿಯಬಾರದು ಎಂಬ ದುರುದ್ದೇಶದಿಂದ ಸಭೆಗೆ ಅಡ್ಡಿ ಪಡಿಸಲಾಗಿದೆ.  ಪಕ್ಷದಲ್ಲಿನ ಕೆಲವು ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ.  ಪ್ರಧಾನಿಯವರ ಒಂಬತ್ತು ವರ್ಷಗಳ ಸಾಧನೆ ಹೇಳಲು ಬಿಟ್ಟಿಲ್ಲ ಎಂದು ಆರೋಪಿಸಿದರು.

ನಾನು ಯಾರ ವಿರೋಧಿಯೂ ಅಲ್ಲ, ಯಾರಿಗೂ ಹೆದರುವುದಿಲ್ಲ

ನನ್ನ ಪರ, ವಿರೋಧ ಮಾಡುವವರ ಬಗ್ಹೆ ಯೋಚಿಸಲ್ಲ.  ಈ ಹಿಂದೆಯೂ ಬೇಕಾದಷ್ಟು ವಿರೋಧ ಮಾಡಿದರೂ‌ ನಾನು ಹೆದರಿಲ್ಲ, ಹೆದರೋದಿಲ್ಲ.  ದೇವರ ಆಶೀರ್ವಾದವಿದೆ.  ಯಾವ ಗೊಡವೆಗೂ ಹೋಗಿಲ್ಲ, ಎಂದೂ ಜಾತಿ ಮಾಡಿಲ್ಲ, ಜಾತಿಯವರನ್ಮು ಕಟ್ಟಿಕೊಂಡು ತಿರುಗಾಡಿಲ್ಲ.  ಕಾರಿನಲ್ಲಿ ಯಾರನ್ನೂ ಕೂಡಿಸಿಲ್ಲ.  ಯಾವ ಗುತ್ತಿದಾರರೂ ನನ್ನ ಕಚೇರಿಗೆ ಬರುವುದಿಲ್ಲ.  ಕೇಂದ್ರದಿಂದ ಸಾಕಷ್ಟು ಹಣ ತಂದರೂ ರಸ್ತೆ ಭೂಮಿಪೂಜೆ ಮಾಡಿಲ್ಲ.  ಬಡವರು, ಜನಸಾನಾನ್ಯರ ಜೊತೆ ಇರುವುದರಿಂದಲೇ ಜನರು ನನ್ನನ್ನು 11 ಚುನಾವಣೆಗಳಲ್ಲಿ ಗೆಲ್ಲಿಸಿದ್ದಾರೆ.  ಈ ಸಾಮಾನ್ಯ, ಬಡಜನರ ಜೊತೆ ಕೊನೆಯವರೆಗೂ ಇರುತ್ತೇನೆ.  ನನ್ಮ ರಾಜಕಾರಣ ಯಾರಿಗೂ ತಿಳಿಯುವುದಿಲ್ಲ.  ನಾಯಕರ ಜೊತೆ ಇರುವುದಿಲ್ಲ.  ಕಳೆದ ಚುನಾವಣೆಯಲ್ಲಿಯೂ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದಾರೆ.  ಆದರೂ ನಾನು ಯಾರಿಗೂ ಈ ಕುರಿತು ಚಕಾರ ಎತ್ತಿಲ್ಲ.  ಈ ಘಟನೆ ನನ್ನ ಮನಸ್ಸಿಗೆ ನೋವು ತಂದಿದೆ.  ಅವರು ಚೆನ್ನಾಗಿ ಮಾತನಾಡಿದರೆ ನಾನೂ ಚೆನ್ನಾಗಿ ಮಾತನಾಡುತ್ತೇನೆ.  ಅವರು ಕೊಳಕು ಮಾತನಾಡಿದರೆ ನಾನೂ ಕೊಳಕು ಮಾತನಾಡುವೆ.  ಯಾರು ಘಟಬಂಧನ ಮಾಡಿಕೊಂಡರೂ ನನಗೆ ಪರಿಣಾಮ ಬೀರುವುದಿಲ್ಲ.  ದೇಶದಲ್ಲಿ ಘಟಬಂಧನ ಪರಿಣಾಮ ಬೀರುವುದಿಲ್ಲ.  ಬೇರೆ ದೇಶಗಳಿಗೆ ಹೋದರೆ ಜನ‌ ಕೈ ಕುಲುಕುತ್ತಾರೆ.  ಆದರೆ, ಪ್ರಧಾನಿ ನರೇಂದ್ರ ಮೋದಿ ಬೇರೆ ದೇಶಕ್ಕೆ ಹೋದಾಗ ಜನ ಕಾಲು ಮುಗಿಯುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಇದೇ ವೇಳೆ ಸುದ್ದಿಗೋಷ್ಠಿಗೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಮಾಜಿ ಶಾಸಕ ಎ. ಎಸ್. ಪಾಟೀ ನಡಹಳ್ಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ವಿಜಯಪುರ ಜಿಲ್ಲೆಯಲ್ಲಿ ನಾವು ಏಳು ಜನ ಸೋತಿರಬಹುದು.  ಆದರೆ, ಬಿಜೆಪಿ ಶಕ್ತಿ ಕಡಿಮೆಯಾಗಿಲ್ಲ.  ವಿಜಯಪುರ ಸಭೆಯಲ್ಲಿ ಯತ್ನಾಳ ಬೆಂಬಲಿಗರ‌ ನಡೆಯನ್ನು ಖಂಡಿಸುತ್ತೇನೆ.  ಸನ್ನಾನ್ಯ ಬಸನಗೌಡರೇ ಈ ರೀತಿ ರಾಜಕಾರಣವನ್ನು ನಿಲ್ಲಿಸಿ.  ನೀವು ಒಬ್ಬರೆ ಗೆದ್ದಿದ್ದೀರಿ ಇಂಧ್ರ ಚಂದ್ರ ಎಂದುಕೊಂಡಿದ್ದರೆ ತಪ್ಪು.  ನೀವೂ ಸೋರಿದ್ದೀರಿ, ನಾವೂ ಸೋತಿದ್ದೇವೆ.  ನಮ ಜಿಲ್ಲೆಯಲ್ಲಿ ಕಾರ್ಯಕರ್ತರನ್ನು ಹುರುದುಂಬಿಸುವ ಕೆಲಸ ಮಾಡಬೇಕೇ ಹೊರತು ಈ ರೀತಿ ರಾಜಕಾರಣ ಸರಿಯಲ್ಲ.  ಇದನ್ನು ನಾನು ಖಂಡಿಸುತ್ತೇನೆ.  ನಮ್ಮ ಜಿಲ್ಲೆಯ ಸಂಸದರು, ನಿರಾಣಿ ಎಲ್ಲರೂ ಮುಖಂಡರು ಒಂದಾಗಿ ಈ ರೀತು ಬ್ಲ್ಯಾಕಮೇಲ್ ರಾಜಕಾರಣವನ್ನು ಎದುರಿಸಲು ಗಟ್ಟಿಯಾಗಿದ್ದೇವೆ, ಸಿದ್ಧರಾಗಿದ್ದೇವೆ.  ಈ ರೀತಿ ರಾಜಕಾರಣ ನಮ್ಮ ಜಿಲ್ಲೆಯಲ್ಲಿ ನಡೆಯಲು ಅವಕಾಶಗಳನ್ನು ಮಾಡಿಕೊಡುವುದು ಬೇಡ ಎಂದು ಎ. ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ವಿಧಾನ ಸಭೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತ ಅಭ್ಯರ್ಥಿಗಳಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳ್ಳಿ ಮತ್ತು ಬಿಜೆಪಿ ಮುಖಂಡ ಸುರೇಶ ಬಿರಾದಾರ ಜೊತೆ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌