ಪ್ರಧಾನಿ ಅಕ್ಕಿ ನೀಡುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ- ಸಂಸದ ರಮೇಶ ಜಿಗಜಿಣಗಿ ತರಾಟೆ

ವಿಜಯಪುರ: ಪ್ರಧಾನ ಮಂತ್ರಿಗಳು ಅವರಪ್ಪನ ಮನೆಯಿಂದ ಅಕ್ಕಿ ಕೊಡುತ್ತಾರಾ? ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಕಾಂಗ್ರೆಸ್ ಸರಕಾರ ಅಕ್ಕಿಯನ್ನು ಕೊಟ್ಟಿದ್ದು ಯಾರಪ್ಪನ ಮನೆಯಿಂದ? ಅದು ಸಹ ರಾಜ್ಯದ ಜನತೆಯ ಹಣದಿಂದಲೇ ಎಂಬುದು ಅವರು ಮರೆತಂತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸದಾಗಿ ಸಿಎಂ ಆದ ಮೇಲೆ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಹೆಮ್ಮೆಯ ಪ್ರಧಾನಿಗಳನ್ನು ವಿನಾಕಾರಣ ಟೀಕಿಸುವುದರಲ್ಲಿ ಅರ್ಥವಿಲ್ಲ.  ಇಡೀ ವಿಶ್ವವೇ ಪ್ರಧಾನಿ ಮೋದಿಜಿ ಅವರನ್ನು ವಿಶ್ವಗುರು ಎಂದು ಮನ್ನಣೆ ನೀಡಿದೆ. ವಿಶ್ವದ ಸೂಪರ್ ಪವರ್ ರಾಷ್ಟ್ರಗಳು ಕೂಡ ಮೋದಿಜೀ ಅವರ ನಾಯಕತ್ವವನ್ನು ಮೆಚ್ಚಿವೆ.  ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಜೀ ಅವರನ್ನು ಏಕವಚನದಲ್ಲಿ ಟೀಕಿಸುವುದು ಮೂರ್ಖತನ ಮತ್ತು ಹುಚ್ಚುತನದ ಪರಮಾವಧಿಯಾಗಿದೆ.  ಈ ರೀತಿ ಏಕವಚನದಲ್ಲಿ ಟೀಕೆ ಮಾಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಅವರು ಹೇಳಿದ್ದಾರೆ.

ಮಾತನಾಡುವಾಗ ತೂಕ ಇರಬೇಕು.  ಮೋದಿಜಿ ಅವರನ್ನು ಟೀಕೆ ಮಾಡುವ ಬದಲು ಜನರಿಗೆ ನೀಡುವ ಗ್ಯಾರಂಟಿ ಅನುಷ್ಠಾನ ಮಾಡಲು ಸಿಎಂ ಮುಂದಾಗಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌