ವಿಜಯಪುರ: ದೇಶದಲ್ಲಿರುವ ಎಲ್ಲ ನಿವಾಸಿಗಳು ಸಹೋದರರು. ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬುದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ಆಶಯವಾಗಿತ್ತು. ಈ ಆಶಯ ಸಾಕಾರಗೊಳಿಸಲು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಏಕರೂಪ ನಾಗರಿಕ ಸಂಹಿತೆ ಡಾ. ಬಿ. ಆರ್. ಅಂಬೇಡ್ಕರ ಅವರ ಕನಸು ಮತ್ತು ಆಶಯವಾಗಿತ್ತು. ಹೀಗಾಗಿ ಅವರ ಆಶಯ ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ದಿಟ್ಟ ಹೆಜ್ಜೆ ಇರಿಸಿರುವುದು ಪ್ರತಿಯೊಬ್ಬ ನಾಗರಿಕರು ಹೆಮ್ಮೆ ಪಡುವ ಸಂಗತಿ ಎಂದು ತಿಳಿಸಿದ್ದಾರೆ.
ಇಡೀ ದೇಶವೇ ಒಂದೇ ಮನೆ. ಇಲ್ಲಿರುವ ಎಲ್ಲರೂ ಸಹೋದರರು. ಹೀಗಾಗಿ ಬೇರೆ ಬೇರೆ ಕಾನೂನು ಬೇಡ. ಹೀಗಾಗಿ ಏಕರೂಪದ ಕಾನೂನು ಇರಬೇಕು ಎಂಬುದು ಡಾ. ಬಿ. ಆರ್. ಅಂಬೇಡ್ಕರ ಅವರ ನಿಲುವಾಗಿತ್ತು. ಹೀಗಾಗಿ ಪ್ರಧಾನಿ ಮೋದಿ ಈ ಆಶಯ ಸಾಕಾರಕ್ಕಾಗಿ ಮುಂದಾಗಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಏಕತೆ ಮತ್ತಷ್ಟು ಬಲಗೊಳ್ಳುತ್ತದೆ.
ಸಂವಿಧಾನ ರಚನೆ ಸಭೆಯಲ್ಲಿಯೂ ಸಹ ಏಕರೂಪ ನಾಗರಿಕ ಸಂಹಿತೆ ಜಾರಿ ಅವಶ್ಯಕತೆ, ಮಹತ್ವದ ಕುರಿತು ಚರ್ಚೆ ನಡೆದಿತ್ತು. ಅದೇ ರೀತಿ ಭಾರತೀಯ ಸಂವಿಧಾನದಲ್ಲಿಯೂ ಸಹ ಏಕರೂಪದ ನಾಗರಿಕ ಸಂಹಿತೆ ಪ್ರತಿಪಾದನೆಯ ಉಲ್ಲೇಖವಿದೆ. ಹೀಗಾಗಿ ಈ ಏಕರೂಪ ನಾಗರಿಕ ಸಂಹಿತೆ ಜಾರಿ ಸಂವಿಧಾನದ ಆಶಯ ಸಹ ಸಾಕಾರ ರೂಪದ ಒಂದು ಹೆಜ್ಜೆ ಸಹ ಹೌದು.
ಈ ಹಿಂದೆ ಕಾಶ್ಮೀರಕ್ಕೂ ವಿಶೇಷ ಸ್ಥಾನಮಾನ ನೀಡಲು ಡಾ. ಬಿ. ಆರ್. ಅಂಬೇಡ್ಕರ್ ಅವರು ಪ್ರಬಲವಾಗಿ ವಿರೋಧಿಸಿದ್ದರು. ಆದರೆ ಪಂ. ಜವಾಹರಲಾಲ ನೆಹರೂ ಅವರ ಒತ್ತಡದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ದೊರಕಿತು. ಪರಿಣಾಮ ದಶಕ ಕಳೆದರೂ ಅಲ್ಲಿರುವವರ ಬಾಳು ಹಸನಾಗಲಿಲ್ಲ. ಅಲ್ಲಿನ ಜನ ನೋವಿನಲ್ಲಿ ಮತ್ತು ಭಯದಲ್ಲಿ ಬದುಕುವಂತಾಯಿತು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ದಿಟ್ಟತನ ನಿರ್ಧಾರದಿಂದಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವೂ ರದ್ದಾಗಿದೆ. ಇದರಿಂದ ಜನರಲ್ಲಿ ಹೊಸ ಚೈತನ್ಯ ಮೂಡಿದೆ. ಈ ಮೂಲಕ ಡಾ. ಬಿ. ಆರ್. ಅಂಬೇಡ್ಕರ ಅವರ ಕನಸು ಸಾಕಾರಗೊಂಡಿದೆ. ಈಗ ಮತ್ತೊಮ್ಮೆ ಮೋದಿ ಅವರು ಡಾ. ಬಿ. ಆರ್. ಅಂಬೇಡ್ಕರ ಅವರ ಆಶಯದನ್ವಯ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಹೆಜ್ಜೆ ಇಡುತ್ತಿದ್ದಾರೆ. ಇದು ಅಭಿಮಾನದ ಸಂಗತಿ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.