ವಿಜಯಪುರ: ವಿಜಯಪುರ, ಇಂಡಿ, ಸಿಂದಗಿ ಮತ್ತು ಬಸವನ ಬಾಗೇವಾಡಿ ತಾಲೂಕುಗಳಲ್ಲಿ ಬಡ ರೈತರು ಸರಕಾರಿ ಪಡಾ ಜಮೀನನ್ನು ಸುಮಾರು 20 ರಿಂದ 30 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಇದನ್ನು ಸಕ್ರಮಗೊಳಿಸಿ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರದ ಆದೇಶದಂತೆ ಅಕ್ರಮ ಸಾಗುವಳಿ ಜಮೀನನ್ನು ಸಕ್ರಮಗೊಳಿಸಿ ಹಕ್ಕು ಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು. ಅಲ್ಲದೇ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಪತ್ರ ಸಲ್ಲಿಸಿರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ವಿಜಯಪುರ, ಇಂಡಿ, ಸಿಂದಗಿ, ಬಸವನ ಬಾಗೇವಾಡಿ ತಾಲೂಕುಗಳಲ್ಲಿ ಬಡ ರೈತರು ಸರಕಾರಿ ಪಡಾ ಜಮೀನನ್ನು ಕಳೆದ ಸುಮಾರು 20 ರಿಂದ 30 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಸರಕಾರದ ಆದೇಷದಂತೆ ಅಕ್ರಮ ಸಾಗುವಳಿ ಜಮೀನನ್ನು ಸಕ್ರಮಗೊಳಿಸಿ. ಹಕ್ಕು ಪತ್ರ ಕೊಡುವಂತೆ ಆಗ್ರಹಿಸಿ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಅರ್ಜಿ ಫಾರ್ಮ್ ಸಂಖ್ಯೆ ನಂಬರ್ 50, 53 ಮತ್ತು 57 ಹೀಗೆ ಸರಕಾರ ಕೇಳಿದಾಗ ಪ್ರತಿ ಸಲ ಅರ್ಜಿ ಫಾರ್ಮ್ ಗಳನ್ನು ಭರ್ತಿ ಮಾಡಿ ನೀಡಲಾಗಿದೆ. ಆದರೆ, ಸರಕಾರವು ಪ್ರತಿ ತಾಲೂಕಿಗೆ ಒಂದರಂತೆ ಭೂ ಹಂಚಿಕೆ ಕಮೀಟಿ ರಚಿಸಿ ಭೂ ಹಂಚಿಕೆ ಮಾಡಬೇಕು. ಆದರೆ, ಸರಕಾರವು ಭೂ ಹಂಚಿಕೆ ಮಾಡುತ್ತಿಲ್ಲ. ಅದರ ಬದಲಿಗೆ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಮುಂತಾದ ಇಲಾಖೆಗಳಿಂದ ತೆರವುಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
20 ರಿಂದ 30 ವರ್ಷಗಳಿಂದ ಪಡ ಬಿದ್ದಿದ್ದ ಜಮೀನುಗಳನ್ನು ಈ ಬಡ ಕುಟುಂಬಗಳನ್ನು ತಮ್ಮ ಶ್ರಮ ಮತ್ತು ಹಣ, ವಿನಯೋಗಿ ಮಾಡಿ ಭೂಮಿಯನ್ನು ಪಲವತ್ತಾದ ಜಮೀನುಗಳನ್ನಾಗಿ ಮಾರ್ಪಡಿಸಿದ್ದಾರೆ. ಈ ಜಮೀನುಗಳನ್ನೇ ನಂಬಿ ಈ ಬಡ ಕುಟುಂಬಗಳು ತಮ್ಮ ಜೀವನ ನಿರ್ವಹಣೆ ಮಾಡುತ್ತಿವೆ. ಈ ಸಂದರ್ಭದಲ್ಲಿ ಬಡ ಕುಟುಂಬಗಳ ಮೇಲೆ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳಿಂದ ಬಲವಂತವಾಗಿ ದೌರ್ಜನ್ಯ ನಡೆಸಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಸುತ್ತಿದೆ. ಇದನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಈಗ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಕೂಡಲೇ ಕ್ರಮ ಕೈಗೊಂಡು ಅರಣ್ಯ ಇಲಾಖೆಯವರಿಂದ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕು. ಅಲ್ಲದೇ, ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಜಮೀನುಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರ ಕೊಟ್ಟು ಅವರ ಕುಟುಂಬಗಳು ಬೀದಿಗೆ ಬಿಳ್ಳುವದನ್ನು ತಪ್ಪಿಸಿ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಆಯಾ ತಾಲೂಕು ತಹಸೀಲ್ದಾರ ಕಚೇರಿಯ ಮುಂದೆ ಅನಿರ್ದಿಷ್ಟ ಧರಣೆ ಸತ್ಯಾಗ್ರ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಮುಖಂಡ ಅಣ್ಣಾರಾಯ ಇಳಗೇರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಮಳೆಯಾಗದೆ ಬರ ಪರಿಸ್ಥಿತಿ ಎದುರಾಗಿದ್ದು, ಮುಂಗಾರು ಮಳೆ ಬಿತ್ತನೆಯಾಗಿಲ್ಲ. ಈ ಸಂದರ್ಭದಲ್ಲಿ ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ದನಕರಗಳಿಗೆ ತಿನ್ನಲು ಮೇವಿಲ್ಲದೇ ಕುಡಿಯಲು ನೀರೂ ಇಲ್ಲದೇ, ರೈತರು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರವು ಕೂಡಲೆ ವಿಜಯಪುರವನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು. ಅಲ್ಲದೇ, ಬರ ಪರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಿ ರೈತರು ಕೃಷಿ ಕೂಲಿಕಾರರು ಗುಳೆ ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಭೀಮರಾಯ ಪೂಜಾರಿ ಜಿಲ್ಲಾ ಪ್ರಧಾನಕಾರ್ಯದರ್ಶಿ, ಪರಶುರಾಮ ಬಂಟೂರ, ಮಳಸಿದ್ದ ನಾಯ್ಕೋಡಿ, ಸುಭಾಷ ತಳಕೇರಿ ಹಣಮಂತ ಮಾದರ, ರಮೇಶ ತಳವಾರ, ಮಲ್ಲಪ್ಪ ಮಗಲಿ, ರಾಮಣ್ಣ ತಳವಾರ ಗಂಗೂಬಾಯಿ ತಳಕೇರಿ, ಮಳಸಿದ್ದ ತಳಕೇರಿ, ವಿಶ್ವನಾಥ ಮೇಲಿನಕೇರಿ, ಪಾಂಡುರಂಗ ಹೊಸಮನಿ, ಬಸಪ್ಪ ಯಡಹಳ್ಳಿ, ಹುಶೇನಬಾಷಾ ದೊಡಮನಿ, ಕೋಣಪ್ಪ ಮೇತ್ರಿ, ಲಕ್ಷ್ಮಣ ನಡುವಿನಕೇರಿ ಸೊಮಪ್ಪ ಹರಿಜನ, ಚಿದಾನಂದ ಇಂಚಗೇರಿ ಮುಂತಾದವರು ಉಪಸ್ಥಿತರಿದ್ದರು.