ವಿಜಯಪುರ: ಜಿಲ್ಲೆಯ ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವ ಅದ್ದೂರಿಯಾಗಿ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆದ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ಜನಮನ ಸೆಳೆದಿವೆ.
ಶ್ರೀ ಖಾಸ್ಗತ ಮಹಾಶಿವಯೋಗಿಗಳ ಗಂಗಸ್ಥಳ ಮತ್ತು ಶ್ರೀಗಳ ಭವ್ಯ ಮೆರಣಿಗೆಯ ಮಹಾ ಕಾರ್ಯಕ್ರಮ ಶ್ರೀ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ದಲಿಂಗದೇವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಿತು. ಭಾವೈಕ್ಯತೆಗೆ ಸಾಕ್ಷಿಯಾದ ಈ ಕಾರ್ಯಕ್ರಮ ಜನಮನಸೂರೆಗೊಂಡಿತು.
ಬೆಳಿಗ್ಗೆ 9 ಘಂಟೆಗೆ ಶ್ರೀ ಖಾಸ್ಗತ ಮಠದಿಂದ ಆನೆ ಅಂಬಾರಿ ಮೇಲೆ ಶ್ರೀ ಖಾಸ್ಗತರ ಬೆಳ್ಳಿಯ ಮಹಾಮೂರ್ತಿಯ ಮತ್ತು ಶ್ರೀ ವಿರಕ್ತಮಹಾಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೋಂಡ ಅಪಾರ ಸಂಖ್ಯೆಯ ಜನ ಭಕ್ತಿ ಪ್ರದರ್ಶಿಸಿದರು. ಅಶ್ವಮೇದ ಬೆಳ್ಳಿಯ ರಥದಲ್ಲಿ ಕುಳಿತ ಶ್ರೀ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ದಲಿಂಗ ದೇವರು ಜನರಿಗೆ ಆಶೀರ್ವಾದ ಮಾಡಿದರು. ಅಲ್ಲದೇ ಪಲ್ಲಕ್ಕಿ ಹಾಗೂ ರಥದ ಕಳಸದ ಮಹಾ ಮೆರವಣಿಗೆ ಪಟ್ಟಣದ ನಾನಾ ಪ್ರಮುಖ ಬಡಾವಣೆಯಲ್ಲಿ ಸಂಚರಿಸಿತು. ಪುರಾತನ ಭಾವಿಯಾದ ಭೀಮನಭಾವಿಯಲ್ಲಿ ಗಂಗಸ್ಥಳ ಮಹಾ ಕಾರ್ಯಕ್ರಮ ಮುಗಿಸಿಕೊಂಡ ಬಳಿಕ ಮೆರವಣಿಗೆಯು ಪಟ್ಟಣದ ಇತರ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಶ್ರೀಮಠ ತಲುಪಿತು.
ಈ ಗಂಗಸ್ಥಳ ಉತ್ಸವದ ಅಂಗವಾಗಿ ಸುಮಂಗಲೆಯರು ಯಾವುದೇ ಜಾತಿಭೇದ ಎನ್ನದೇ ತಂತಮ್ಮ ಮನೆಯ ಅಂಗಳದಲ್ಲಿ ನಾನಾ ಬಗೆಯ ಬಣ್ಣಬಣ್ಣದ ರಂಗೋಲಿ ಚಿತ್ರಗಳನ್ನು ಬಿಡಿಸಿದ್ದು ಆಕರ್ಷಣೀಯವಾಗಿತ್ತು. ಪ್ರತಿಯೊಬ್ಬರು ತಮ್ಮ ಮನೆಗಳಿಗೆ ತಳಿರು ತೋರಣ ಕಟ್ಟಿ ಈ ಮಹಾ ಮಹಾತ್ಮರ ಭವ್ಯ ಮರವಣಿಗೆಯನ್ನು ಸ್ವಾಗತಿಸಿರುವದು.
ಆನೆ, ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ಬಲು ಜೋರು
ಅಂಭಾರಿಯ ಮೇರಣಿಗೆಯುದ್ದಕ್ಕೂ ನಾನಾ ವಾಧ್ಯವೈಭವಗಳು ಅಲ್ಲದೇ ಗೊಂಬೆ ಕುಣಿತ, ಕರಡಿ ಮಜಲು, ಕುದುರೆ ಕುಣಿತ, ಸನಾದಿಯ ನಾದ, ಶ್ರೀ ಹನುಮಾನ ವೇಷದಾರಿಯ ಕುಣಿತ ಒಳಗೊಂಡು ನಾನಾ ಕಲಾ ತಂಡಗಳು ಭಾಗವಹಿಸಿದ್ದವು. ಅಲ್ಲದೇ, ಆನೆಯ ಅಂಭಾರಿಯ ಮೆರವಣಿಗೆ ಹಾಗೂ ಅಶ್ವಮೇಧ ರಥದಲ್ಲಿ ಶ್ರೀಗಳ ಮೇರವಣಿಗೆ ಐತಿಹಾಸಿಕ ತಾಳಿಕೋಟೆ ಪಟ್ಟಣದ ರಾಜ ವೈಭವವನ್ನು ಮರುಕಳಿಸುಂತೆ ಮಾಡಿತ್ತು. ಮಹಾ ವೈಭವದ ಗಂಗಸ್ಥಳ ಕಾರ್ಯಕ್ರಮದಲ್ಲಿ ನಡೆದ ಓಂ ನಮಃ ಶಿವಾಯ ಎಂಬ ಶಿವನಾಮ ಭಜನೆಯು ಪುರಾತನ ಕಾಲದ ರಾಜ ವೈಭವವನ್ನು ಮರುಸೃಷ್ಠಿಸಿದಂತಿತ್ತು.
ಈ ಮೆರವಣಿಗೆಯಲ್ಲಿ ಅನೇಕ ಜನರು ಮನೆಯ ಮತ್ತು ಅಂಗಡಿಗಳ ಮೇಲೆ ನಿಂತುಕೊಂಡು ಶ್ರೀ ಖಾಸ್ಗತರ ಬೆಳ್ಳಿ ಮೂರ್ತಿಗೆ ಮತ್ತು ವಿರಕ್ತ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮೆರವಣಿಗೆಯಲ್ಲಿ ಅನ್ನ ಪ್ರಸಾದ
ಇದೇ ವೇಳೆ ಮೆರವಣಿಗೆ ಸಾಗುವ ಮಾರ್ಗ ಮಧ್ಯದಲ್ಲಿ ರಾಜವಾಡೆ ಕಿಂಗ್ಸ್ ಗೆಳೆಯರ ಬಳಗ, ನಮ್ಮ ಗೆಳೆಯರ ಬಳಗ, ಮತ್ತು ಸಜ್ಜನ ಸಮಾಜ ಬಾಂದವರು, ಭಗತ್‌ಸಿಂಗ್ ಗೆಳೆಯರ ಬಳಗ, ಸಹಹೃದಯ ಗೆಳೆಯರ ಬಳಗ, ಎಬಿಡಿ ಪೌಂಡೇಶನ್, ಮಧುರ ಮಿಲನ, ಒಳಗೊಂಡು ಅನೇಕ ಯುವಕ ಸಂಘದವರು ದಾರಿಯುದ್ದಕ್ಕೂ ಪ್ರಸಾದದ ಸೇವೆಯನ್ನು ಏರ್ಪಡಿಸಿದ್ದರು. ಇನ್ನೂ ಕೆಲವರು ಬಾದಾಮಿ ಹಾಲು, ಮಜ್ಜಿಗೆ, ಸಿಹಿ ಪ್ರಸಾದ ಒಳಗೊಂಡು ತಂಪು ಪಾನಿಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ಮೂಲಕ ಭಕ್ತರಿಗೆ ನೆರವಾದರು.
ಬೆಳಿಗ್ಗೆ 8 ಘಂಟೆಗೆ ಪ್ರಾರಂಭಗೊಂಡ ಈ ಗಂಗಸ್ಥಳ ಮಹಾ ಮೆರವಣಿಗೆಯು ನಾನಾ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಮಧ್ಯಾಹ್ನ 2.30ಕ್ಕೆ ಶ್ರೀ ಖಾಸ್ಗತೇಶ್ವರ ಮಠ ತಲುಪಿತು.
ಈ ಮಹಾ ಕಾರ್ಯಕ್ರಮದಲ್ಲಿ ಮುಂಬಯಿ, ಪುಣೆ, ಹೈದರಾಬಾದ, ಅಲ್ಲದೇ, ಹುಬ್ಬಳ್ಳಿ- ಧಾರವಾಡ, ಬೆಂಗಳೂರು, ಕಲಬುರಗಿ ಸೇರಿದಂತೆ ನಾನಾ ಮಹಾ ನಗರಗಳಿಂದ ಸಾವಿರಾರೂ ಸಂಖ್ಯೆಯ ಭಕ್ತ ಸಮೂಹ ಪಾಲ್ಗೊಂಡು ಅವರ ಭಕ್ತಿಗೆ ಸಾಕ್ಷಿಯಾಗಿತ್ತು. ಈ ಮೆರವಣಿಗೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ಶ್ರೀ ವೇ. ಮುರುಘೇಶ ವಿರಕ್ತಮಠ, ವೇ. ಸಂಗಯ್ಯ ವಿರಕ್ತಮಠ, ವೇ. ವಿಶ್ವನಾಥ ವಿರಕ್ತಮಠ ಮುಂತಾದವರು ಉಪಸ್ಥಿತರಿದ್ದರು.
ಬಿಗೀ ಪೊಲೀಸ್ ಬಂದೋಬಸ್ತ
ಈ ಬೃಹತ್ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಪೊಲೀಸರೂ ಕೂಡ ಬಿಗೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಪೊಲೀಸ್ ಅಧಿಕಾರಿ ರಾಮನಗೌಡ ಸಂಕನಾಳ ಅವರು ತಮ್ಮ ಸಿಬ್ಬಂದಿಯೊಂದಿಗೆ ಬಿಗೀ ಪೊಲೀಸ್ ಬಂದೋಬಸ್ತ ಕೈಗೊಂಡಿದ್ದರು.
ಗಮನ ಸೆಳೆದ ರಥೋತ್ಸವ
ಸಂಜೆ ನಡೆದ ಶ್ರೀ ಖಾಸ್ಗತೇಶ್ವರರ ಮಹಾ ರಥೋತ್ಸವ ಸಹಸ್ರಾರು ಸಂಖ್ಯೆಯಲ್ಲಿದ್ದ ಭಕ್ತರ ಭಕ್ತಿಗೆ ಸಾಕ್ಷಿಯಾಗಿತ್ತು. ಲಕ್ಷಾಂತರ ಭಕ್ತಸಮೂಹದ ಮದ್ಯ ನಡೆದ ಶ್ರೀ ಖಾಸ್ಗತ ರಥೋತ್ಸವ ತಾಳಿಕೋಟೆ, ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಹಾ ಮಠದ ಶ್ರೀ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಉತ್ಸವ ಅಂಗವಾಗಿ ರಥೋತ್ಸವವು ಲಕ್ಷಾಂತರ ಭಕ್ತಸಮೂಹದ ಮದ್ಯ ವಿಜೃಂಬಣೆಯಿಂದ ನಡೆಯಿತು.
ಜಾತ್ರೋತ್ಸವ ಅಂಗವಾಗಿ ದಿನನಿತ್ಯ ಶ್ರೀ ಖಾಸ್ಗತೇಶ್ವರ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಶ್ರೀಮಠದ ವೇ. ವಿಶ್ವನಾಥ ವಿರಕ್ತಮಠ ನಡೆಸಿಕೊಟ್ಟರು. ಸಂಜೆ 5.30ರಕ್ಕೆ ನಡೆದ ಶ್ರೀ ಖಾಸ್ಗತೇಶ್ವರ ರಥೋತ್ಸವವು ಶ್ರೀ ಮಠದಿಂದ ಪ್ರಾರಂಬವಾಗಿ ಶ್ರೀ ಬಸವೇಶ್ವರ ದೇವಸ್ಥಾನದ ವರೆಗೆ ಸಂಚರಿಸಿ ಮರಳಿ ಶ್ರೀ ಮಠಕ್ಕೆ ತಲುಪಿತು.
ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಜಾತ್ರಾ ಉತ್ಸವದಲ್ಲಿ ಶ್ರೀಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ, ವೇ. ಸಂಗಯ್ಯ ವಿರಕ್ತಮಠ, ವೇ. ವಿಶ್ವನಾಥ ವಿರಕ್ತಮಠ ಮೊದಲಾದವರು ನೇತೃತ್ವ ವಹಿಸಿದ್ದರು.
ತಾಳಿಕೋಟೆ ಪಟ್ಟಣಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಖಾಸ್ಗತೇಶ್ವರ ಮಠದ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ಕಳೆದೊಂದು ವಾರದಿಂದ ಮಠದ ಅಂಗಳದಲ್ಲಿ ಮತ್ತು ತಾಳಿಕೋಟೆಯಲ್ಲಿ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಜಾತ್ರೆಯ ಅಂಗವಾಗಿ ಭಕ್ತರಿಗಾಗಿ ಹೋಳಿಗೆ ಮಹಾಪ್ರಸಾದವನ್ನ ನೀಡಲಾಯಿತು.
ಜಾತ್ರೆಯ ಕೊನೆಯ ದಿನವಾದ ನಸುಕಿನ ಜಾವ ಮಠದ ಅಂಗಳದಲ್ಲಿ ಗೋಪಾಳ ಕಾವಲಿ ಪ್ರಸಿದ್ಧ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಸಂಪ್ರದಾಯದಂತೆ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ಗೋಪಾಲ ಕಾವಲಿ ಒಡೆಯುವ ಕ್ಷಣಕ್ಕೆ ಸಾಕ್ಷಿಯಾದರು. ನಸುಕಿನ ಜಾವದಲ್ಲಿಯೇ ಗೋಪಾಲ ಕಾವಲಿ ಅಂದರೆ ಮೊಸರು ಗಡಿಗೆ ಒಡೆಯೋ ಸಂಪ್ರದಾಯ ನೂರಾರು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿದೆರುವುದು ಗಮನಾರ್ಹವಾಗಿದೆ. ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗದೇವರ ನೇತೃತ್ವದಲ್ಲಿ ಸಕಲ ಜಾತ್ರಾ ವಿಧಿ ವಿಧಾನಗಳು ನಡೆದವು.