ವಿಜಯಪುರ: ಗುರು ಪೂರ್ಣಿಮೆ ಬಂದರೆ ಸಾಕು ನಡೆದಾಡುವ ದೇವರ ದರ್ಶನಕ್ಕೆ ಜನ ಮುಗಿಬೀಳುತ್ತಿದ್ದರು. ಆಶ್ರಮಕ್ಕೆ ಭೇಟಿ ನೀಡಿ ದೂರದಿಂದಲೇ ನಮಸ್ಕರಿಸಿ ಸಾಧ್ಯವಾದರೆ ಹತ್ತಿರದಿಂದ ದರ್ಶನ ಪಡೆದು ಆಶೀರ್ವಾದ ಪಡೆದು ಧನ್ಯರಾಗುತ್ತಿದ್ದರು. ಆದರೆ, ಈಗ ನಡೆದಾಡಿದ ದೇವರಿಲ್ಲ. ಆದರೂ ಕಡೆಪಕ್ಷ ಅವರ ಭಾವಚಿತ್ರಕ್ಕೆ ನಮಸ್ಕರಿಸಿದರಾಯಿತು. ನಡೆದಾಡಿದ ದೇವರ ಗುರುಗಳ ಗದ್ದುಗೆಯ ದರ್ಶನ ಪಡೆದರಾಯಿತು. ಈಗ ಇರುವ ಶ್ರೀಗಳ ಆಶೀರ್ವಾದ ಪಡೆದರಾಯಿತು ಎಂದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದು ಗುರುಪೂರ್ಣಿಮೆಗೆ ನಿಜವಾದ ಅರ್ಥ ನೀಡಿದರು.
ಇದು ಇದೇ ವರ್ಷದ ಆರಂಭದಲ್ಲಿ ಪಂಚಭೂತಗಳಲ್ಲಿ ಲೀನರಾದ ನಡೆದಾಡಿದ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ವಾಸವಿದ್ದ ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ದಿನ ಕಂಡು ಬಂದ ದೃಶ್ಯ.
ಕಡಲ್ಗಾರ ಹುಣ್ಣಿಮೆ ಅಂಗವಾಗಿ ನಡೆಯುವ ಗುರುಪೂರ್ಣಿಮೆ ವಿಜಯಪುರ ಜ್ಞಾನಯಾಗೋಶ್ರಮದಲ್ಲಿ ನಡೆಯಿತು. ಇದೇ ದಿನ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುಗಳಾದ ವೇದಾಂತ ಕೇಸರಿ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಸಂತನಿಲ್ಲದ ಆಶ್ರಮದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಲಕ್ಷಾಂತರ ಭಕ್ತರು ನಡೆದಾಡುವ ದೇವರ ನೆನೆದು ಕಣ್ಣೀರಿಟ್ಟರು.
ಇದೇ ಮೊದಲ ಬಾರಿಗೆ ಶ್ರೀಗಳು ಇಲ್ಲದೇ ನಡೆದ ಕಾರ್ಯಕ್ರಮ ಇದಾಗಿದ್ದು, ಬೆಳಗ್ಗೆ 4ಗಂಟೆಯಿಂದಲೇ ನಾನಾ ಪೂಜಾ, ಪ್ರವಚನ ಕಾರ್ಯಕ್ರಮಗಳು ನಡೆದವು. ನಸುಕಿನ ಜಾವ 4.30 ರಿಂದ 6.30ರ ವರೆಗೆ ಮಹಾಜಪಯೋಗ, 6.30 ರಿಂದ 7.30ರ ವರೆಗೆ ಪ್ರವಚನ ಹಾಗೂ 7.30ರಿಂದ 8.30ರ ವರೆಗೆ ಪ್ರಣವ ಮಂಟಪ ಪೂಜೆಯನ್ನು ನಡೆಸಲಾಯಿತು. ಗುರುಪೂರ್ಣಿಮೆ ಹಿನ್ನೆಲೆ ರವಿವಾರದಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಸಾಗರ ಆಶ್ರಮಕ್ಕೆ ಹರಿದು ಬಂದಿದ್ದು ಗಮನ ಸೆಳೆಯಿತು.
ನಸುಕಿನ ಜಾವ ನಡೆದ ಪೂಜೆಯಿಂದ ಹಿಡಿದು ಸಂಜೆಯವರೆಗಿನ ಎಲ್ಲ ಕಾರ್ಯಕ್ರಮಗಳಲ್ಲೂ ಭಕ್ತರು ಭಾಗವಹಿಸಿದ್ದರು. ಜ್ಞಾನಯೋಗಾಶ್ರಮದ ಆವರಣದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ನಮಸ್ಕರಿಸಿ, ಶ್ರೀಗಳೊಂದಿಗೆ ಕಳೆದ ಕ್ಷಣಗಳನ್ನು ನೆನೆದು ಭಾವುಕರಾದರು. ಇನ್ನು ನಡೆದಾಡುವ ದೇವರನ್ನು ಇಲ್ಲದೆ ನಡೆಯುತ್ತಿರುವ ಮೊದಲ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳನ್ನು ನೆನೆದು ಪರಸ್ಪರ ಸ್ಮರಣೀಯ ಕ್ಷಣಗಳನ್ನು ನೆನಪಿಸುತ್ತಿರುವುದು ಕಂಡು ಬಂತು.
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರಣವ ಮಂಟಪದಲ್ಲಿ ವಿಶೇಷ ಪೂಜೆ ನಡೆಯಿತು. ತಮಗೆ ಯಾವುದೇ ಸ್ಮಾರಕವಾಗಲಿ, ಗದ್ದುಗೆಯಾಗಲಿ ಬೇಡ. ಎಲ್ಲರೂ ನನ್ನನ್ನು ಮರೆಯಬೇಕು ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಉಯಿಲು ಅಂತಿಮ ಅಭಿವಂದನಾ ಪತ್ರ ಬರೆದಿಟ್ಟಿರುವುದರಿಂದ ಸ್ವಾಮೀಜಿಗಳ ಇಚ್ಚೆಗೆ ವಿರುದ್ದವಾಗಿ ಹೋಗಬಾರದು ಎಂದು ನಿರ್ಧರಿಸಿ ಆಶ್ರಮದ ಆಡಳಿತ ಮಂಡಳಿ ಕೇವಲ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರವನ್ನಿಟ್ಟು ಪೂಜೆ ಮಾಡಿ, ಭಕ್ತರಿಗೆ ದರ್ಶನದ ಅವಕಾಶ ನೀಡಿತ್ತು. ಮತ್ತೋಂದೆಡೆ ಶ್ರೀಗಳ ಹಾಗೂ ಅವರ ಗುರುಗಳ ವ್ಯಕ್ತಿತ್ವ, ಜೀವನ ಶೈಲಿಯ ಕುರಿತಂತೆ ಇತರೇ ಮಾಹಿತಿಗಳುಳ್ಳ ಭಾವಚಿತ್ರಗಳನ್ನು ಪ್ರದರ್ಶನ ಕೂಡ ನಡೆಯಿತು. ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಾನಂದ ಸ್ವಾಮೀಜಿಗಳು ನೇತೃತ್ವದಲ್ಲಿ ಎಲ್ಲ ಪೂಜಾ ಕೈಂಕರ್ಯ ನಡೆದವು.
ಈ ಚಿತ್ರ ಪ್ರದರ್ಶನದಲ್ಲಿ ಶ್ರೀಗಳ ನಾನಾ ಕಾಲಘಟ್ಟದ ಫೋಟೋಗಳು, ಕೆಲವು ಕಲಾವಿದರು ಭಕ್ತಿಯಿಂದ ರಚಿಸಿದ್ದ ಶ್ರೀಗಳ ನಾನಾ ಚಿತ್ರಗಳ ಪ್ರದರ್ಶನವೂ ನಡೆಯಿತು.
ಈ ಬಾರಿಯ ಗುರು ಪೂರ್ಣಮೆ ಕಾರ್ಯಕ್ರಮದಲ್ಲಿ ಕರ್ನಾಟಕ ಮಾತ್ರವಲ್ಲ ನೆರೆಯ ಮಹಾರಾಷ್ಟ್ರ ಹಾಗೂ ವಿದೇಶಗಳಿಂದಲೂ ಕೂಡ ಆಗಮಿಸಿದ್ದ ಭಕ್ತರು ಆಚರಣೆಯಲ್ಲಿ ಪಾಲ್ಗೋಂಡು ಶ್ರೀ ಸಿದ್ದೇಶ್ವರ ಶ್ರೀಗಳು ಎಂದಿಗೂ ನಮ್ಮ ಮನದಲ್ಲಿದ್ದಾರೆ. ಈ ಪರಿಸರದಲ್ಲಿದ್ದಾರೆ ಎಂದು ಭಾವಿಸಿಕೊಂಡು ಮನದಲ್ಲಿಯೇ ಶ್ರೀಗಳನ್ನು ಸ್ಮರಿಸಿ ನಮನಗಳನ್ನು ಸಲ್ಲಿಸಿದರು.