ಶ್ರೀಗಂಧದ ಮರ ಇಬ್ಬರು ಕಳ್ಳರಿಗೆ 5 ವರ್ಷ ಜೈಲು, ತಲಾ ರೂ. 1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ- ಎಸ್. ಎಚ್. ಹಕೀಂ

ವಿಜಯಪುರ: ಶ್ರೀಗಂಧದ ಮರ ಕಳ್ಳತನ ಮಾಡಿದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಮತ್ತು ರೂ. 2 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಈ ಕುರಿತು ಮಾದ್ಯಮ ಪ್ರಕಟಣೆ ನೀಡಿರುವ ಪ್ರಧಾನ ಸರಕಾರಿ ಅಭಿಯೋಜಕ ಎಸ್. ಎಚ್. ಹಕೀಂ, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ದಸ್ತಗೀರ ಜಾಫರಸಾಬ ಚಂದನ ಮತ್ತು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಹಾಜಿಮಲಂಗ ಮೈಬೂಬಸಾಬ ವಾಲಿಕಾರ ಅವರಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಧೀಶರಾದ ಶಿವಾಜಿ ಅನಂತ ನಾಲವಾಡೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಗುಡ್ಡಹಳ್ಳಿ- ವಿಭೂತಿಹಳ್ಳಿ ಮಧ್ಯೆ 21.10.2019 ರಂದು ರಾತ್ರಿ 11.45ರ ಸುಮಾರಿಗೆ ಇಬ್ಬರೂ ಆರೋಪಿಗಳು ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುವಾಗ ಅಂದಿನ ಆಲಮೇಲ ಪಿಎಸ್ಐ ನಿಂಗಪ್ಪ ಪೂಜಾರಿ ಅವರು ಧಾಳಿ ನಡೆಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು.  ಆಗ ಆರೋಪಿಗಳು ನಾಗರಹಳ್ಳಿ ಗ್ರಾಮದ ಮಲ್ಲಣ್ಣ ಸಿದ್ದಣ್ಣ ಬಾಗೇವಾಡಿ ಅವರ ಜಮೀನಿನ ಬಳಿ ಸರಕಾರಿ ಹಳ್ಳದಲ್ಲಿ ಬೆಳೆದ ಶ್ರೀಗಂಧದ ಮರವನ್ನು ಕಡಿದು 11 ತುಂಡುಗಳನ್ನಾಗಿ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದರು.  ಆಗ ಪೊಲೀಸರು ಕೆ. ಎ. 32- ಇಜೆ-8819 ನಂಬರಿನ ಬೈಕ್ ಮತ್ತು ಶ್ರೀಗಂಧದ ಮರಗಳನ್ನು ವಶಪಡಿಸಿಕೊಂಡಿದ್ದರು.

ನಂತರ ಈ ಪ್ರಕರಣದ ವಿಚಾರಣೆ ನಡೆಸಿದ ಆಲಮೇಲ ಪಿ. ಎಸ್. ಐ ಎಸ್. ಎಂ. ಬೆನಕನಹಳ್ಳಿ ಆರೋಪ ಪಟ್ಟಿ ಸಲ್ಲಿಸಿದ್ದರು.  ಈ ಕುರಿತು ಕೂಲಂಕಷ ವಿಚಾರಣೆ ನಡೆಸಿದ ನ್ಯಾಯಾಧೀಶರು ಕರ್ನಾಟಕ ಅರಣ್ಯ ಕಾಯ್ದೆಯಡಿ ಐದು ವರ್ಷ ಜೈಲು ಶಿಕ್ಷೆ ಮತ್ತು ತಲಾ ರೂ. 1 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಎಸ್. ಎಚ್. ಹಕೀಂ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌