ಬಸವನ ಬಾಗೇವಾಡಿ ತಾಲೂಕಿಗೆ ಭೇಟಿ ನೀಡಿ ನಾನಾ ಕಾಮಗಾರಿಗಳನ್ನು ಪರಿಶೀಲಿಸಿದ ಜಿ. ಪಂ ಸಿಇಓ ರಾಹುಲ ಶಿಂಧೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರಾಹುಲ ಶಿಂಧೆ ಅವರು ಬಸವನ ಬಾಗೇವಾಡಿ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ, ನಾನಾ ಯೋಜನೆಗಳ ಕಾಮಗಾರಿ ಪರಿಶೀಲನೆ ನಡೆಸಿದರು. 

ಉಕ್ಕಲಿ ಗ್ರಾಮದ ಸರಕಾರಿ ಉರ್ದು ಶಾಲೆಯ ಪ್ರಗತಿಯಲ್ಲಿರುವ ಶಾಲಾ ಕೊಠಡಿ, ನರೇಗಾ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಅಡುಗೆ ಕೊಠಡಿ ವೀಕ್ಷಿಸಿದರು.ಎನ್.ಆರ್.ಎಲ್.ಎಮ್ ಯೋಜನೆಯಡಿ ಸಿದ್ಧಪಡಿಸಿರುವ ಸಮವಸ್ತ್ರಗಳನ್ನು ಪಡೆದುಕೊಂಡು, ಅಡುಗೆಯವರ ಹಾಗೂ ಅಡುಗೆ ಸಹಾಯಕರಿಗೆ ವಿತರಿಸುವಂತೆಯೂ ಸಮವಸ್ತ್ರಗಳನ್ನು ಶುಚಿಗೊಳಿಸಿ ಸಮವಸ್ತ್ರ ಬಳಸುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸೂಚಿಸಿದ ಅವರು, ಶಾಲೆಯ ಸ್ಮಾರ್ಟ್ ಕ್ಲಾಸ್ ಕೊಠಡಿಗೆ ಭೇಟಿ ನೀಡಿ, ವಾರದಲ್ಲಿ ಕನಿಷ್ಠ ಮೂರು ದಿನಗಳ ಮಟ್ಟಿಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕುರಿತಾಗಿ ತರಬೇತಿ ನೀಡಲು ಗಣಕಯಂತ್ರ ಶಿಕ್ಷಕರಿಗೆ ಸೂಚಿಸಿದರು. ಕಂಪ್ಯೂಟರ್ ಶಿಕ್ಷಣ ಮಕ್ಕಳಿಗೆ  ಅನಿವಾರ್ಯವೂ ಹಾಗೂ ಅಗತ್ಯವೂ ಆಗಿರುವುದರಿಂದ  ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ನೀಡುವಂತೆ ತಿಳಿಸಿದರು.

ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ ಬಸವನ ಬಾಗೇವಾಡಿ ತಾಲೂಕಿನ ನಾನಾ ಕಡೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯ ಪರಿಶೀಲಿಸಿದರು

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾದರೆ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕೊಳವೆ ಬಾವಿ ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ತಿಳಿಸಿದರು.

ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಹು ಹಳ್ಳಿ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ, ಸುತ್ತಮುತ್ತಲಿನ ಗ್ರಾಮಗಳಿಗೆ ನಿಯಮಿತವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಕುಡಿಯುವ ನೀರು ಶುದ್ಧೀಕರಣ ಘಟಕದಲ್ಲಿನ ಸ್ವಚ್ಛತೆಗೆ ಆಧ್ಯತೆ ನೀಡಲು ಸೂಚಿಸಿದರು. ಕುಡಿಯುವ ನೀರು ಸರಬರಾಜು ಮಾಡುವ ಮುಂಚೆ ನೀರು ಪರೀಕ್ಷಣೆ ಮಾಡಿ ಖಚಿತಪಡಿಸಿಕೊಂಡು ನೀರು ಸರಬರಾಜು ಮಾಡುವಂತೆಯೂ, ಕುಡಿಯುವ ನೀರಿನ ವಿಷಯದಲ್ಲಿ ಅತ್ಯಂತ ಜಾಗೂರುಕತೆಯಿಂದ ಮತ್ತು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮದ ಗ್ರಾಮ-ಒನ್ ಕೇಂದ್ರಕ್ಕೆ ಭೇಟಿ ನೀಡಿ, ಗೃಹಜ್ಯೋತಿ ಅರ್ಜಿ ಸಲ್ಲಿಸುವಿಕೆ, ನೋಂದಣಿ ಶುಲ್ಕ, ಗ್ರಾಮಸ್ಥರಿಗೆ ಕೇಂದ್ರದಲ್ಲಿ ದೊರೆಯುವ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಂಡು. ನಂತರ ಗ್ರಾಮ-ಒನ್ ಕೇಂದ್ರದ ಸಿಬ್ಬಂದಿಗೆ ನಿಗದಿತ ಸಮಯದಲ್ಲಿ, ಗ್ರಾಮಸ್ಥರಿಗೆ ಅನುಕೂಲವಾಗುವ ಸಮಯದಲ್ಲಿ ಕೇಂದ್ರ ಆರಂಭಿಸಿಬೇಕು. ಸರಕಾರ ನಿಗದಿಪಡಿಸಿದ ಶುಲ್ಕ ಪಡೆಯಲು ಸೂಚನೆ ನೀಡಿದರು.

ಇಂಗಳೇಶ್ವರ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಗುಡ್ಡದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಮೂಲಕ ಕೈಗೊಂಡಿರುವ ನೆಡುತೋಪ ಕಾಮಗಾರಿ ವೀಕ್ಷಣೆ ಮಾಡಿದರು. ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು. ನೆಡುತೋಪ ಸಸಿಗಳಿಗೆ ನೀರುಣಿಸುವುದು ಮತ್ತು ಅವುಗಳ ಸಂರಕ್ಷಣೆ ಮೇಲುಸ್ತುವಾರಿ ಮಾಡಲು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ, ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ಗ್ರಾಮೀಣ ಕುಡಿಯುವ  ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎಸ್ ಬಿ ಪಾಟೀಲ, ಪಂಚಾಯಿತಿ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ಶಿವರಾಜ ನಾಯಕ, ಕೆಆರ್ ಐಡಿ ಎಲ್  ಎಇಇ, ಆನಂದ ಸ್ವಾಮಿ,  ಅರಣ್ಯ ಇಲಾಖೆಯ ಅಧಿಕಾರಿಗಳಾದ ಇರ್ಷಾದ ನೇವಾರ, ಬಿ. ಐ. ಬಿರಾದಾರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ. ಟಿ. ಬಂಡಿವಡ್ಡರ, ಜಯಕುಮಾರ ದೇವರನಾವದಗಿ, ತಾಂತ್ರಿಕ ಸಂಯೋಜಕ ವಿಶ್ವನಾಥ್ ಪಟ್ಟಣಶೆಟ್ಟಿ, ತಾಲೂಕು ಐಇಸಿ ಸಂಯೋಜಕರು ಮಡಿವಾಳಪ್ಪ ಬಿರಾದಾರ, ಸಹಾಯಕ ಅಭಿಯಂತರರಾದ ಮುರ್ತುಜ ವಾಲಿಕಾರ ಹಾಗೂ ಎಸ್ ಎಚ್ ಮುದ್ದೇಬಿಹಾಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌