ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ವಿಷಾದನೀಯ- ಎಎಸ್ಪಿ ಶಂಕರ ಮಾರಿಹಾಳ

ವಿಜಯಪುರ: ಇಂದಿನ ಯುವ ಜನಾಂಗ ನಮ್ಮ ಸಂಸ್ಕೃತಿಯ ಸೊಬಗು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ಅತ್ಯಂತ ವಿಷಾದದ ಸಂಗತಿ ಎಂದು ವಿಜಯಪುರ ಜಿಲ್ಲಾ ಎಎಸ್ಪಿ ಶಂಕರ ಮಾರಿಹಾಳ ಹೇಳಿದ್ದಾರೆ.

ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಮುಕ್ತ ಹಾಗೂ ಬ ಘಟಕದ ವತಿಯಿಂದ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುವ ಪೀಳಿಗೆ ಶಿಬಿರದ ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಯ ಕಾರ್ಯವನ್ನು ಮಾಡುವುದು ಅವಶ್ಯ. ಮನುಷ್ಯನಲ್ಲಿ ಹುಮ್ಮಸ್ಸು, ಹಟ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅವರು ತಿಳಿಸಿದರು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಪಿ. ಜಿ. ತಡಸದ ಮಾತನಾಡಿ, ಮಾತು ಬಲ್ಲವ ಮಾಣಿಕ್ಯ ತಂದ ಎಂಬ ಗಾದೆ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸುಂದರವಾಗುತ್ತದೆ.  ಸಂವಹನಕ್ಕೆ ಅತೀ ಮುಖ್ಯವಾಗಿ ಬೇಕಾಗುವುದು ಭಾಷೆ.  ಅದನ್ನು ಅರಿತು ನಡೆಯುವುದನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಸಂವಹನಕಾರನ ಸಂದೇಶ ಕೇಳುಗನಿಗೆ ಅರ್ಥವಾಗುವಂತಿದ್ದರೆ ಮಾತ್ರ ಸಂವಹನ ಯಶಸ್ವಿಯಾಗಲು ಸಾಧ್ಯ.  ಸಂವಹನಕಾರ, ಸಂದೇಶ, ಸಂವಹನ ಕೇಳುಗ ಈ ಮೂರು ಅಂಶಗಳು ಸಂವಹನಕ್ಕೆ ಅತೀ ಮುಖ್ಯವಾಗಿವೆ.  ಸಂವಹನದಲ್ಲಿ ಅಡೆತಡೆಗಳನ್ನು ನಿವಾರಿಸಿ ಸಂದೇಶವನ್ನು ತಲುಪಿಸುವ ಪ್ರಯತ್ನವನ್ನು ಮಾಡಬೇಕು.  ಸಂದರ್ಭನುಸಾರವಾಗಿ ಮಾತನಾಡುವ ಕಲೆಯನ್ನು ಹೊಂದುವುದೇ ಸಂವಹನವಾಗಿದೆ ಎಂದು ಅವರು ಹೇಳಿದರು.

ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗತ್ತಿ ಮಾತನಾಡಿ, ಹಳ್ಳಿಗಳು ಉದ್ಧಾರವಾದರೆ ದೇಶಗಳು ಉದ್ಧಾರವಾದಂತೆ.  ಎನ್. ಎಸ್. ಎಸ್. ವ್ಯಕ್ತ್ತಿತ್ವ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಎನ್. ಎಸ್. ಎಸ್ ಶಿಬಿರ ಜೀವನದಲ್ಲಿ ಉತ್ತಮ ಶಿಬಿರವಾಗಬೇಕು.  ಉತ್ತಮ ಚರಿತೆಯಾಗಬೇಕು.  ಸಮಾಜದ ಬಗ್ಗೆ ಅರಿತು ಜೀವನದಲ್ಲಿ ಸಫಲತೆ ಹೊಂದಬೇಕು.  ತಂದೆ- ತಾಯಿಯ ಭರವಸೆ ಸಾಕಾರಗೊಳಿಸಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಹಾಗೂ ಎನ್. ಎಸ್. ಎಸ್. ಸಲಹಾ ಸಮಿತಿಯ ಸದಸ್ಯ ಡಾ. ಜಾವೀದ ಜಮಾದಾರ ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಇಂಗ್ಲೀಷ್, ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದೀಪಕ್ ಶಿಂಧೆ ಮಾತನಾಡಿ, ನೇರವಾಗಿರಲಿ ಅಥವಾ ನೇರವಾಗಿರದೆ ಇರಲಿ ಸಂವಹನವು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ.  ಪರಿಣಾಮಕಾರಿ ಸಂವಹನಕಾರನಾಗಲು ಮೊದಲು ಉತ್ತಮ ಕೇಳುಗನಾಗಿರಬೇಕು.  ಆಗ ಮಾತ್ರ ಒಂದು ಪರಿಣಾಮಕಾರಿ ಸಂವಹನ ನಡೆಯುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಪ್ರೊ. ಶಾಂತಾದೇವಿ. ಟಿ. ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ. ಲಕ್ಷ್ಮಿದೇವಿ ವೈ, ಶಿಬಿರದ ನಿರ್ದೇಶಕರಾದ ಡಾ. ತಹಮೀನಾ ನಿಗಾರ ಸುಲ್ತಾನಾ ಹಾಗೂ ಡಾ. ಅಮರನಾಥ ಪ್ರಜಾಪತಿ, ವಿವಿಯ ಮುಕ್ತ ಮತ್ತು ಬ ಘಟಕದ ಸ್ವಯಂ ಸೇವಕಿಯರು ಉಪಸ್ಥಿತರಿದ್ದರು.

ಸಾವಿತ್ರಿ ಪಡಸಾಲಿ ಸ್ವಾಗತಿಸಿದರು.  ವಿವಿಯ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಷ್ಣು ಶಿಂಧೆ, ಸುಜಾತಾ ಗಡೇದ ಮತ್ತು ಅಶ್ವಿನಿ ಕಾಂಬಳೆ ಪರಿಚಯಿಸಿದರು.  ರೇಣುಕಾ ನಿರೂಪಿಸಿದರು.  ಸಿದ್ದಮ್ಮ ವಂದಿಸಿದರು.

Leave a Reply

ಹೊಸ ಪೋಸ್ಟ್‌