ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಸುಕಿನ ಜಾವ 1.38 ಗಂಟೆಗೆ ಭೂಕಂಪನ ಉಂಟಾಗಿದೆ.
ಮಧ್ಯರಾತ್ರಿಯಾಗಿದ್ದರಿಂದ ಬಹುತೇಕರಿಗೆ ಇದರ ಅನುಭವವಾಗಿಲ್ಲ. ಆದರೆ, ಹಲವರಿಗೆ ಭೂಮಿಯೊಳಗಿಂದ ಶಬ್ದ ಕೇಳಿ ಬಂದಿದೆ. ಮಂಚದ ಮೇಲೆ ಮಲಗಿದ್ದವರಿಗೆ ಕಂಪನದ ಅನುಭವವಾಗಿದೆ. ಮಂಚ ಅಲುಗಾಡಿದ ಅನುಭವ ಆಗಿದೆ. ನೆಲದ ಮೇಲೆ ಮಲಗಿದ್ದವರಿಗೆ ಭೂಮಿಯ ಒಳಗಡೆಯಿಂದ ಶಬ್ದ ಕೇಳಿ ಬಂದಿದ್ದು, ಕಂಪನದ ಅನುಭವೂ ಕೂಡ ಉಂಟಾಗಿದೆ.
ವಿಜಯಪುರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ಆದರ್ಶ ನಗರ, ಐಶ್ವರ್ಯ ನಗರ, ಆನಂದ ನಗರ, ಗಚ್ಚಿನಕಟ್ಟಿ ಕಾಲನಿ ಸೇರಿದಂತೆ ವಿಜಯಪುರ ಗ್ರಾಮೀಣ ಭಾಗದಲ್ಲಿಯೂ ಶಬ್ದ ಮತ್ತೂ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಕಂಪನದ ಕೇಂದ್ರ ಬಿಂದು, ತೀವ್ರತೆ ಎಷ್ಟು ಗೊತ್ತಾ?
ವಿಜಯಪುರ ತಾಲೂಕಿನ ಐನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈಋತ್ಯಕ್ಕೆ ಸುಮಾರು 3 ಕಿ. ಮೀ. ದೂರದಲ್ಲಿ ಸುಮಾರು 5 ಕಿ. ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.
ರಿಕ್ಚರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪನ ಇದಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಮಾಹಿತಿ ನೀಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.